ಅಡಕೆ ಸಿಪ್ಪೆಯಲ್ಲಿ ಬೆಳೆಯಿತು ಹೊಸ ತಳಿಯ ಅಣಬೆ!

| Published : Dec 23 2023, 01:45 AM IST / Updated: Dec 23 2023, 01:46 AM IST

ಸಾರಾಂಶ

ಕರಾವಳಿಯ ಅಡಕೆ ತೋಟಗಳಲ್ಲಿ ಅಡಕೆ ಸಿಪ್ಪೆಗಳಲ್ಲಿ ಅಣಬೆ ಬೆಳೆದಿದ್ದು, ಈ ಅಣಬೆಗೆ ‘ಕಾಪ್ರಿನಾಪ್ಸಿಸ್‌ ಸಿನೆರಿಯೇ’ ಎಂದು ಕೃಷಿ ವಿಜ್ಞಾನಿಗಳು ಹೆಸರಿಸಿದ್ದಾರೆ. ಸರಿಯಾದ ಹಂತದಲ್ಲಿ ಕೊಯ್ಲು ಮಾಡಿ ಬಳಸಿದರೆ ಈ ಅಣಬೆ ತಿನ್ನಲು ಯೋಗ್ಯವಾಗಿದೆ. ಪ್ರಕೃತಿಯಲ್ಲಿ ವಿಷಕಾರಿ ಅಣಬೆ ಸೇರಿದಂತೆ ಹಲವಾರು ಜಾತಿಯ ಅಣಬೆ ಇದ್ದು, ಅಡಕೆ ಸಿಪ್ಪೆಯ ಮೇಲೆ ಬೆಳೆಯುವ ಅಣಬೆಯನ್ನು ಸರಿಯಾಗಿ ಗುರುತಿಸಿ ಖಾದ್ಯ ತಯಾರಿಸಲು ಬಳಸಬಹುದು ಎಂದು ಕಾಸರಗೋಡಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ(ಸಿಪಿಸಿಆರ್‌ಐ)ವಿಜ್ಞಾನಿಗಳು ಶಿಫಾರಸು ಮಾಡಿದ್ದಾರೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರುಕರಾವಳಿ, ಮಲೆನಾಡಿನ ಕೃಷಿತೋಟಗಳಲ್ಲಿ ಅಣಬೆ ಹೊಸದೇನು ಅಲ್ಲ, ಆದರೆ ಅಡಕೆ ತೋಟಗಳಲ್ಲಿ ಕಾಣಸಿಗುವ ಅಣಬೆಯಲ್ಲಿ ಹೊಸ ತಳಿಯನ್ನು ಕೃಷಿ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ಅಣಬೆ ಖಾದ್ಯಕ್ಕೆ ಯೋಗ್ಯ ಎಂಬುದನ್ನು ಕೃಷಿ ವಿಜ್ಞಾನಿಗಳು ಹೇಳುತ್ತಾರೆ.

ಕರಾವಳಿಯ ಅಡಕೆ ತೋಟಗಳಲ್ಲಿ ಅಡಕೆ ಸಿಪ್ಪೆಗಳಲ್ಲಿ ಕಂಡುಬಂದ ಈ ಅಣಬೆಗೆ ‘ಕಾಪ್ರಿನಾಪ್ಸಿಸ್‌ ಸಿನೆರಿಯೇ’ ಎಂದು ಕೃಷಿ ವಿಜ್ಞಾನಿಗಳು ಹೆಸರಿಸಿದ್ದಾರೆ. ಸರಿಯಾದ ಹಂತದಲ್ಲಿ ಕೊಯ್ಲು ಮಾಡಿ ಬಳಸಿದರೆ, ತಿನ್ನಲು ಯೋಗ್ಯ. ಪ್ರಕೃತಿಯಲ್ಲಿ ವಿಷಕಾರಿ ಅಣಬೆ ಸೇರಿದಂತೆ ಹಲವಾರು ಜಾತಿಯ ಅಣಬೆ ಇದ್ದು, ಅಡಕೆ ಸಿಪ್ಪೆಯ ಮೇಲೆ ಬೆಳೆಯುವ ಅಣಬೆಯನ್ನು ಸರಿಯಾಗಿ ಗುರುತಿಸಿ ಖಾದ್ಯ ತಯಾರಿಸಲು ಬಳಸಬಹುದು ಎಂದು ಕಾಸರಗೋಡಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ(ಸಿಪಿಸಿಆರ್‌ಐ)ವಿಜ್ಞಾನಿಗಳು ಶಿಫಾರಸು ಮಾಡಿದ್ದಾರೆ.

ಸಿಪ್ಪೆಯಲ್ಲಿ ಮಾತ್ರವಲ್ಲ ಸೋಗೆಯಲ್ಲೂ ಅಣಬೆ!:

ಅಡಕೆ ತೋಟಗಳಲ್ಲಿ ಸಾಮಾನ್ಯವಾಗಿ ಅಣಬೆ ಅಡಕೆ ಸಿಪ್ಪೆಯಲ್ಲಿ ಬೇಗನೆ ಬೆಳೆಯುತ್ತದೆ. ಆದರೆ ಇಲ್ಲಿ ಅಡಕೆ ಸೋಗೆಯಲ್ಲೂ ಅಣಬೆ ಕಾಣಿಸಿದ್ದು, ಇದು ಕೃಷಿ ವಿಜ್ಞಾನಿಗಳಲ್ಲಿ ಅಚ್ಚರಿಗೆ ಕಾರಣವಾಗಿದೆ. ಕಾಸರಗೋಡಿನ ಕಿನ್ನಿಂಗಾರು ಹಾಗೂ ಪುತ್ತೂರಿನ ಬಡಗನ್ನೂರಿನಲ್ಲಿ ಕೃಷಿಕರ ಅಡಕೆ ಸಿಪ್ಪೆ ಹಾಗೂ ಸೋಗೆಯಲ್ಲಿ ಬೆಳೆದ ಅಣಬೆಯನ್ನು ಕೃಷಿ ವಿಜ್ಞಾನಿಗಳು ಸಂಶೋಧನೆಗೆ ಒಳಪಡಿಸಿದ್ದಾರೆ. ಸಿಪಿಸಿಆರ್‌ಐ ವಿಜ್ಞಾನಿಗಳಾದ ಡಾ.ಎಂ.ಕೆ.ರಾಜೇಶ್‌ ಮತ್ತು ಡಾ.ಥವಪ್ರಕಾಶ್‌ ಪಾಂಡ್ಯನ್‌ ನೇತೃತ್ವದ ತಂಡ ಈ ಅಣಬೆಯ ಹೊಸ ತಳಿಯನ್ನು ಗುರುತಿಸಿ ಹೆಸರಿಸಿದೆ.

ಅಡಕೆ ಸಿಪ್ಪೆ ಹಾಗೂ ಸೋಗೆಯಲ್ಲಿ ಬೆಳೆಯುವ ಈ ಅಣಬೆಯನ್ನು ಸಂಜೆ 4 ರಿಂದ 6 ಗಂಟೆ ಒಳಗೆ ಸಂಗ್ರಹಿಸಬೇಕು. ಇಲ್ಲದಿದ್ದರೆ ಅಣಬೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ, ಅದನ್ನು ಸೇವಿಸಲು ಯೋಗ್ಯವಾಗದು. ಬೆಳಗ್ಗಿನ ವೇಳೆಗೆ ಅಣಬೆ ಕೊಳೆತುಹೋಗುತ್ತದೆ. ಆದ್ದರಿಂದ ಸಂಜೆ ಅಣಬೆಯನ್ನು ಸಂಗ್ರಹಿಸಿ ಬಿಸಿ ನೀರಿನಲ್ಲಿ ಹಾಕಿದ ಬಳಿಕ ಅದನ್ನು ಶೀತಲೀಕರಣದಲ್ಲಿ ಇರಿಸಿದರೆ, ಕೆಲವು ದಿನಗಳ ವರೆಗೆ ಬಳಕೆ ಮಾಡಬಹುದು. ಸಾಧಾರಣ ನೆರಳು ಪ್ರದೇಶದಲ್ಲಿ ಹಾಕಿದ ಅಡಕೆ ಸಿಪ್ಪೆ ರಾಶಿಗೆ ಒಂದಷ್ಟು ನೀರು ಚಿಮುಕಿಸಿ ಬಿಟ್ಟರೆ, 8-10 ದಿನಗಳಲ್ಲಿ ಅಲ್ಲಿ ಅಣಬೆ ಬೆಳೆಯುತ್ತದೆ. ಹಿಂದೆ ಮಳೆ ನೀರು ಶುರುವಾದಾಗ ಅಣಬೆ ಬೆಳೆಯುತ್ತಿತ್ತು. ಈಗ ಬೇಕಾದಷ್ಟೆ ಪ್ರಮಾಣದಲ್ಲಿ ಅಡಕೆ ಸಿಪ್ಪೆಯಲ್ಲಿ ಅಣಬೆ ಬೆಳೆಸಬಹುದು ಎನ್ನುತ್ತಾರೆ ಹರೀಶ್‌ ರೈ ದೇರ್ಲ.

ಈ ಅಣಬೆ ಆಹಾರದಾಯಕವಾದರೂ ಇದರಲ್ಲಿ ಇರುವ ಔಷಧೀಯ ಗುಣ ಹಾಗೂ ಅವಗುಣಗಳ ಬಗ್ಗೆ ಸಂಶೋಧನೆ ಮುಂದುವರಿಯುತ್ತಿದೆ ಎಂದು ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ.

ಅಣಬೆ ಹಿಂದೆ ಬೆನ್ನುಬಿದ್ದ ಕೃಷಿ ವಿಜ್ಞಾನಿಗಳ ತಂಡ-

ಕಳೆದ ನಾಲ್ಕು ತಿಂಗಳಿಂದ ಬಡಗನ್ನೂರಿನ ಪ್ರಗತಿಪರ ಕೃಷಿಕ ಹರೀಶ್‌ ರೈ ದೇರ್ಲ ಅವರ ಕೃಷಿತೋಟದಲ್ಲಿ ಅಡಕೆ ಸಿಪ್ಪೆಯಲ್ಲಿ ಅಣಬೆ ಬೆಳೆಯುತ್ತಿದೆ. ಇದನ್ನು ಸಿಪಿಸಿಆರ್‌ಐ ಕೃಷಿ ವಿಜ್ಞಾನಿಗಳ ತಂಡ ಸಂಶೋಧನೆ ನಡೆಸಿದೆ. ಕಿನ್ನಿಂಗಾರಿನ ಸತ್ಯನಾರಾಯಣ ಬೆಳೇರಿ ಅವರಲ್ಲೂ ಇದೇ ರೀತಿ ಅಡಕೆ ಸಿಪ್ಪೆಯಲ್ಲಿ ಕಾಣಿಸಿದ ಅಣಬೆ, ಅಡಕೆ ಸೋಗೆಯಲ್ಲೂ ಬೆಳೆದು ಅಚ್ಚರಿ ಮೂಡಿಸಿತ್ತು. ಅಲ್ಲಿಂದಲೂ ಸ್ಯಾಂಪಲ್‌ ಪಡೆದು ಕೃಷಿ ವಿಜ್ಞಾನಿಗಳು ಸಂಶೋಧನೆ ಕೈಗೊಂಡಿದ್ದಾರೆ.

ಅಣಬೆಯನ್ನು ಹೆಚ್ಚಾಗಿ ರಾಜಾಪುರ ಸಾರಸ್ವತ ಸಮುದಾಯ ಖಾದ್ಯವಾಗಿ ಬಳಸುತ್ತದೆ. ಕಳೆದ ಮೂರ್ನಾಲ್ಕು ದಶಕಗಳಿಂದಲೂ ಕರಾವಳಿಯಲ್ಲಿ ಕೃಷಿಕರಿಗೆ ಅಣಬೆ ಚಿರಪರಿಚಿತ. ಪ್ರಕೃತಿಯಲ್ಲಿ ಸಹಜವಾಗಿ ಸಿಗುವ ಈ ಅಣಬೆ ಖಾದ್ಯ ಯೋಗ್ಯವಾಗಿರುವ ಕಾರಣ ಅದರದ್ದೇ ಆದ ಮಹತ್ವ ಪಡೆದುಕೊಂಡಿದೆ ಎನ್ನುತ್ತಾರೆ ಹಿರಿಯ ಕೃಷಿ ಸಂಶೋಧಕ ಶ್ರೀಪಡ್ರೆ.