ಆಧುನಿಕ ಸಂಗೀತಕ್ಕೆ ಮಾರು ಹೋಗಿ ಪರಂಪರ ಸಂಗೀತದ ಮೇಲೆ ಆಸಕ್ತಿ ಕಡಿಮೆ ಆಗುತ್ತಿರುವುದು ಶೋಚನೀಯ ಸಂಗತಿಯಾಗಿದೆ.

ಹೊಸಪೇಟೆ: ಸಂಗೀತ ಕೇಳುವುದರಿಂದ ಹೃದಯಕ್ಕೆ ಆನಂದ, ಮನಸ್ಸಿಗೆ ಉಲ್ಲಾಸ ಉಂಟಾಗುತ್ತದೆ ಎಂದು ಹೊಸಪೇಟೆಯ ತಾಲೂಕು ಕಚೇರಿಯ ಶಿರಸ್ತೇದಾರ ಅಮರನಾಥ ಅಭಿಪ್ರಾಯಪಟ್ಟರು.

ನಗರದ ಜೇಸಿಸ್ ಶಾಲಾ ಆವರಣದಲ್ಲಿ ಪಂಡಿತ್ ಪಂಚಾಕ್ಷರಿ ಗವಾಯಿಗಳ ಸಂಗೀತ ಪಾಠಶಾಲೆ, ಡಾ.ಪಂಡಿತ್ ಪುಟ್ಟರಾಜ ಗವಾಯಿಗಳ ಶಿಷ್ಯ ಮಂಡಳಿ ಮತ್ತು ಅಭಿಮಾನಿ ಬಳಗವು ಹಮ್ಮಿಕೊಂಡಿದ್ದ ಉಭಯ ಗವಾಯಿಗಳ ಜಯಂತ್ಯುತ್ಸವ, ಪ್ರಶಸ್ತಿ ಪ್ರದಾನ ಹಾಗೂ ಸಂಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕ ಸಂಗೀತಕ್ಕೆ ಮಾರು ಹೋಗಿ ಪರಂಪರ ಸಂಗೀತದ ಮೇಲೆ ಆಸಕ್ತಿ ಕಡಿಮೆ ಆಗುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಜೀವನ ಜಂಜಾಟದ ಬದುಕಿಗೆ ಸಂಗೀತ ತುಂಬ ಮುಖ್ಯವಾಗಿದೆ ಎಂದು ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದ ಮುಖ್ಯಅತಿಥಿಗಳಾಗಿ ಮಾತನಾಡಿ, ಪ್ರಕೃತಿಯ ಚರಾಚರ ವಸ್ತುಗಳಲ್ಲಿ ಸಂಗೀತವು ಅಡಗಿದೆ. ಅದಕ್ಕೆ ಅಗಾದವಾದ ಶಕ್ತಿ ಇದೆ. ಇದು ಕೇವಲ ಮನ ಸಂತೋಷ ಪಡಿಸುವುದರೊಂದಿಗೆ ಸಂಗೀತದಲ್ಲಿ ಚಿಕಿತ್ಸಕ ಗುಣ ಹೊಂದಿದೆ ಎಂದರು.

ಗದಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಡಾ.ಕಲ್ಲಜ್ಜಯ್ಯ ಆಶೀರ್ವಚನ ನೀಡಿ ಮಾತಾನಾಡಿ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಪುಟ್ಟಜ್ಜರ ಹೆಸರಲ್ಲಿ ಪ್ರಶಸ್ತಿ ಪಡೆಯಬೇಕಾದರೆ ಪೂರ್ವ ಜನ್ಮದ ಪುಣ್ಯ ಹೊಂದಿರಬೇಕು ಎಂದರು.

ನಗರಸಭಾ ಸದಸ್ಯ ತಾರಿಹಳ್ಳಿ ಜಂಬೂನಾಥ, ವಿಜಯನಗರ ಜಿಲ್ಲಾ ಅಂಬೇಡ್ಕರ್ ಸಂಘದ ಅಧ್ಯಕ್ಷ ಕೆ.ಪಿ. ಉಮಾಪತಿ, ಯುಟಿಐನ ಹಿರಿಯ ಉಪವಿಭಾಗಧಿಕಾರಿ ಬಿ.ಪಾಲಾಕ್ಷ, ರಾಜ್ಯ ಸರ್ಕಾರಿ ನೌಕರ ಸಂಘದ ನಿರ್ದೇಶಕ ಕಡ್ಲಿ ವೀರಭದ್ರೇಶ, ವಕೀಲರಾದ ಎ. ಕರುಣಾನಿಧಿ, ಹಿಪ್ಪಿತೇರಿ ಮಾಗಣಿಯ ಕರಿಬಸವೇಶ್ವರ ಮಠದ ಮಾತೋಶ್ರೀ ಅನುರಾದೇಶ್ವರಿ ಅಮ್ಮ ಇದ್ದರು.

ಗದಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಡಾ.ಕಲ್ಲಜ್ಜಯ್ಯ ಅವರಿಗೆ ಮೈತ್ರಿ ಉಮಾಪತಿ, ಶ್ರೇಯಸ್ ಅಮರಾನಾಥ, ದಿ. ದಾಕ್ಷಾಯಣಿ ಕುಟುಂಬದವರು ತುಲಾಭಾರ ನೆರವೇರಿಸಿದರು.

ಪಂಡಿತ್ ಸದಾಶಿವ ಐವೊಳೆ, ಪಂಡಿತ್ ಸದಾಶಿವ ಪಾಟೀಲ್, ನಾಗರಾಜ ಪತ್ತಾರ್, ಕೃಷ್ಣಪ್ಪ ಜೋಗಿ, ಯೋಗ ನರಸಿಂಹಚಾರ್ಯ, ಪರಮೇಶ್ವರಪ್ಪ, ಆರೋಹಿ ಐಹೊಳೆ ಅವರುಗಳಿಗೆ ಶ್ರೀ ಗುರು ಪುಟ್ಟರಾಜ ಕಲಾ ಸಿರಿ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ಆಕಾಶವಾಣಿ ಕಲಾವಿದರಾದ ಪಂಡಿತ ಸದಾಶಿವ ಐಹೊಳೆ, ಸುಮ ಕಾಳಗಟ್ಟ, ಮಲ್ಲಿಕಾರ್ಜುನ್ ತುರುವನೂರ್, ವಿಜಯ ಕುಮಾರ ಬಡಿಗೇರ, ಮಲ್ಲಿಕಾರ್ಜುನ್ ಬಡಿಗೇರ್, ಸಂಶೋಧಕಿ ಅನುರಾಧ ಹಿಂದುಸ್ಥಾನಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಆರೋಹಿ ಐಹೊಳೆ ಕಥಕ್ಕಳಿ ನೃತ್ಯ ಪ್ರದರ್ಶಿಸಿದರು.

ಶಿಕ್ಷಕ ಸುಧಾಕರ್ ಅಂಗಡಿ ಸ್ವಾಗತಿಸಿದರು. ವಕೀಲ ಎ.ಕರುಣಾನಿಧಿ ಪ್ರಾಸ್ತಾವಿಕ ಮಾತಾಡಿದರು. ಶಿಕ್ಷಕ ಸುಧಾಕರ್ ಅಂಗಡಿ ಸ್ವಾಗತಿಸಿ, ಶಿಕ್ಷಕಿ ಸರೋಜ ವಂದಿಸಿದರು. ಶಿಕ್ಷಕಿ ಗೀತಾಂಜಲಿ, ರಮೀಜಾಭಿ, ಸುಕುಮಾರ್ ನಿರೂಪಿಸಿದರು.