ಸಂಗೀತ ಸಂಸ್ಕಾರ ಶಕ್ತಿ ಹೊಂದಿದೆ

| Published : Dec 16 2024, 12:47 AM IST

ಸಾರಾಂಶ

ಸ್ವರಸಿರಿ ವಿದ್ಯಾಲಯದ ಸ್ವರಸಂಗಮ ಕಾರ್ಯಕ್ರಮವನ್ನು ಗುರು ಪಂಡಿತ ಮೋಹನ್ ಹೆಗಡೆ ಉದ್ಘಾಟಿಸಿದರು.

ಸ್ವರ ಸಂಗಮ ಸಂಗೀತ ಕಾರ್ಯಕ್ರಮಕ್ಕೆ ಮೋಹನ ಹೆಗಡೆ ಚಾಲನೆ ಕನ್ನಡಪ್ರಭ ವಾರ್ತೆ ಸಾಗರ

ಸಂಗೀತ ತರಗತಿಗೆ ಬಂದವರೆಲ್ಲರೂ ಸಂಗೀತ ವಿದ್ವಾನ್‌ರಾಗುವುದಿಲ್ಲ ಅಥವಾ ಕಲಾವಿದರೂ ಆಗಲಾರರು. ಬೆರಳೆಣಿಕೆಯಷ್ಟು ಜನ ಮಾತ್ರ ಕಲಾವಿದರಾಗಿ ಹೊರ ಹೊಮ್ಮಬಹುದು. ಆದರೆ ಎಲ್ಲರೂ ಖಂಡಿತವಾಗಿ ಸಂಸ್ಕಾರವಂತರಾಗುತ್ತಾರೆ ಎಂದು ಹಿರಿಯ ತಬಲಾ ಗುರುಗಳಾದ ಪಂಡಿತ ಮೋಹನ ಹೆಗಡೆ ಹುಣಸೆಕೊಪ್ಪ ಹೇಳಿದರು.

ಇಲ್ಲಿನ ಸ್ವರಸಿರಿ ಹಿಂದೂಸ್ತಾನಿ ಸಂಗೀತ ವಿದ್ಯಾಲಯ ಪಟ್ಟಣದ ಅಜಿತ್ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 4ನೇ ವರ್ಷದ ಸ್ವರ ಸಂಗಮ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತ ಶಾಲೆಗೆ ಹೋದ 100 ವಿದ್ಯಾರ್ಥಿಗಳಲ್ಲಿ 4 ಜನ ಮಾತ್ರ ಕಲಾವಿದರಾಗಬಹುದು. ಆದರೆ ಎಲ್ಲರಿಗೂ ಸಂಸ್ಕಾರ ನೀಡುವ ಶಕ್ತಿ ಸಂಗೀತಕ್ಕಿದೆ ಎಂದರು.

ಪೋಷಕರು ತಮ್ಮ ಮಗು ಕಲಾವಿದನಾಗದಿದ್ದರೂ ಸಂಸ್ಕಾರವಂತನಾಗುತ್ತಾನೆ ಎನ್ನುವ ಕಾರಣಕ್ಕಾಗಿ ಸಂಗೀತಾಭ್ಯಾಸಕ್ಕೆ ಕಳಿಸಬೇಕು ಎಂದು ಕಿವಿಮಾತು ಹೇಳಿದರು. ಫ್ಯಾಶನ್‌ಗಾಗಿ ಅಥವಾ ರಿಯಾಲಿಟಿ ಶೋಗಳ ಗೀಳಿಗಾಗಿ ಸಂಗೀತಾಭ್ಯಾಸ ಮಾಡಬೇಡಿ. ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಸಂಗೀತ ತಾನಾಗಿ ಒಲಿಯುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿದುಷಿ ವಸುಧಾ ಶರ್ಮ ಮಾತನಾಡಿ, ಸಂಗೀತ ಶಾಲೆಗಳಲ್ಲಿ ಕಲಿಯುವ ವಿದ್ಯೆಗೆ ಪೂರಕವಾದ ವಾತಾವರಣ ಮನೆಯಲ್ಲಿಯೂ ಇರಬೇಕು. ಅಲ್ಲಿಯೂ ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಸಾಧನೆ ಮಾಡಲು ಸಾಧ್ಯ ಎಂದ ಹೇಳಿದರು.

ಈ ವೇಳೆ ಉಪನ್ಯಾಸಕಿ ಡಾ.ವಿಜಯಲಕ್ಷ್ಮಿ ಹೆಗಡೆ, ಕುಸುಮಾ ಸಿ.ಹೆಗಡೆ, ಅಶೋಕ, ಸ್ವರಸಿರಿಯ ಮುಖ್ಯಸ್ಥೆ ಸುಜಾತ ಅಶೋಕ್ ಮಾತನಾಡಿದರು. ಕುಸುಮಾ ಹೆಗಡೆಯವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

ನಂತರ ಸುಜಾತ ಅಶೋಕರವರ ಗಾಯನ, ನಾಗರಾಜ್ ತೋಂಬ್ರಿಯವರ ಜೋಗಿ ಜಾನಪದ ಹಾಡು, ವಿಭಾ ಹೆಗಡೆಯವರ ಹಿಂದೂಸ್ತಾನಿ ಗಾಯನ ನಡೆಯಿತು. ವಿನಾಯಕ ಸಾಗರ, ಶ್ರೀರಂಜನಿ, ನಿಖಿಲ್.ವಿ.ಕುಂಸಿ, ಸಂವತ್ಸರ ಸಾಥ್ ನೀಡಿದರು. ವಿದ್ಯಾಲಯದ ವಿದ್ಯಾರ್ಥಿಗಳ ಗಾಯನವೂ ನಡೆಯಿತು.