ಒತ್ತಡಮುಕ್ತ ಜೀವನಕ್ಕೆ ಸಂಗೀತ, ನೃತ್ಯ ಪೂರಕ: ಹೇಮಾವತಿ ಹೆಗ್ಗಡೆ

| Published : Apr 12 2024, 01:06 AM IST

ಸಾರಾಂಶ

ವಿದುಷಿ ಕುಮಾರಿ ಚೈತ್ರಾ ತನ್ನ ಗುರುಗಳಾದ ಉಜಿರೆಯ ಶಾಂತ ಪಡ್ವೆಟ್ನಾಯರಿಗೆ ‘ನೃತ್ಯದೀಪ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಒತ್ತಡಮುಕ್ತ ಜೀವನಕ್ಕೆ ಸಂಗೀತ ಮತ್ತು ನೃತ್ಯ ಕಲೆ ಪೂರಕ ಹಾಗೂ ಪ್ರೇರಕವಾಗಿದೆ ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಹೇಳಿದರು.

ಅವರು ಬುಧವಾರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಧರ್ಮಸ್ಥಳದ ಜೋಡುಸ್ಥಾನದಲ್ಲಿರುವ ಗೀತನೃತ್ಯಾಲಯದ ನೃತ್ಯೋತ್ಸವ ಮತ್ತು ಗುರುವಂದನೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇವಲ ಸಂಪಾದನೆಗಾಗಿ ಯಾವುದೇ ವಿದ್ಯೆ ಮತ್ತು ಕಲೆಯನ್ನು ಕಲಿಯಬಾರದು. ಇಂದಿನ ಒತ್ತಡದ ಬದುಕಿನಲ್ಲಿ ಒತ್ತಡಮುಕ್ತ ಜೀವನ ಮಾಡಲು ಬಾಲ್ಯದಲ್ಲೇ ಸಂಗೀತ, ಭರತನಾಟ್ಯ ಮೊದಲಾದ ಕಲೆಗಳನ್ನು ಕರಗತ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ನೃತ್ಯ ನೋಡಿ ಆನಂದಿಸಲು ಸುಲಭ. ಆದರೆ ಕಲಿಯಲು ಕಷ್ಟ. ಭರತನಾಟ್ಯದ ಮೂಲಗುರು ಭರತಮುನಿಗಳಾಗಿದ್ದು, ಭರತನಾಟ್ಯ ವಿಶ್ವಮಾನ್ಯತೆ ಪಡೆದಿದೆ. ನೃತ್ಯ ಮಾಡುವಾಗ ಭಾವಾಭಿನಯದಿಂದ ಹಾಡನ್ನು ಅನುಭವಿಸಿಕೊಂಡು ನಾಟ್ಯ ಮಾಡಬೇಕು ಎಂದರು.

ಮಂಗಳೂರಿನ ಕದ್ರಿ ನೃತ್ಯ ಭಾರತಿಯ ಗೀತಾ ಸರಳಾಯ ಸಮಾರಂಭ ಉದ್ಘಾಟಿಸಿದರು. ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಶುಭಾಶಂಸನೆ ಮಾಡಿದರು. ವಿದುಷಿ ಕುಮಾರಿ ಚೈತ್ರಾ ತನ್ನ ಗುರುಗಳಾದ ಉಜಿರೆಯ ಶಾಂತ ಪಡ್ವೆಟ್ನಾಯರಿಗೆ ‘ನೃತ್ಯದೀಪ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಗೀತನೃತ್ಯಾಲಯದ ೩೮ ಮಂದಿ ವಿದ್ಯಾರ್ಥಿನಿಯರು ಆಕರ್ಷಕ ನೃತ್ಯ ಪ್ರದರ್ಶನ ನೀಡಿದರು.

ವಿದುಷಿ ಕುಮಾರಿ ಚೈತ್ರಾ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಅನ್ನಪೂರ್ಣ ಛತ್ರದ ಪ್ರಬಂಧಕರಾದ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಶಶಿಕಲ ವಂದಿಸಿದರು. ಪೂಜಾ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು.