ಸಾರಾಂಶ
ಸೊರಬ: ಕವಿ ಕಾವ್ಯದಲ್ಲಿ ಭಾವ ಹುದುಗಿರುತ್ತದೆ. ಮುದ ನೀಡುವ ಸುಶ್ರಾವ್ಯ ಗಾಯನ ಕಾವ್ಯಕ್ಕೆ ಮೆರಗು ತರುತ್ತದೆ ಆದರೆ, ಭಾವ ರಹಿತವಾಗಿ ಗಾಯನ ಪ್ರಸ್ತುತಪಡಿಸಿದಾಗ ಕವಿತೆಯ ರಚನಾಕಾರನಿಗೆ ತೋರುವ ಅಗೌರವವಾಗಿದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷೆ ಶಾಂತಾ ಎಸ್.ಶೆಟ್ಟಿ ಅಭಿಪ್ರಾಯಪಟ್ಟರು.
ಪಟ್ಟಣದ ಗುರುಕುಲ ಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ತಾಲೂಕು ಘಟಕದ ವತಿಯಿಂದ ನಡೆದ ಸುಗಮ ಸಂಗೀತ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಬದುಕಿಗೆ ಚೈತನ್ಯ ತುಂಬುವ ಶಕ್ತಿ ಸಂಗೀತಕ್ಕಿದೆ. ಗಾಯನವನ್ನು ಸೌಜನ್ಯದಿಂದ ಆಲಿಸುವ ಗುಣ ಕವಿತೆಯ ಭಾವಕ್ಕೆ ತಕ್ಕಂತೆ ಹಾಡುವ ಗಾಯಕನಿಗೆ ನೀಡುವ ಗೌರವವಾಗಿದೆ. ಕವಿತೆಗಳನ್ನು ರಚಿಸಿದವರು ಯಾವ ಸನ್ನಿವೇಷದಲ್ಲಿ ರಚಿಸಿದ್ದಾರೆ ಎಂಬುದನ್ನು ಸಹ ಗಾಯಕರು ಅರಿಯಬೇಕು. ಉದಾಹರಣೆಗೆ ವರಕವಿ ದ.ರಾ.ಬೇಂದ್ರೆ ಅವರು ‘ನೀ ಹಿಂಗ ನೋಡ ಬೇಡ ನನ್ನ’ ಕವಿತೆಯನ್ನು ದುಃಖದ ಸನ್ನಿವೇಷದಲ್ಲಿ ರಚಿಸಿದರು. ಪ್ರಸ್ತುತ ಯುವ ಜನತೆ ಇದನ್ನು ಪ್ರೇಮಗೀತೆ ಎಂಬಂತೆ ಬಿಂಬಿಸುತ್ತಿದ್ದಾರೆ. ಇದು ಕವಿಯ ಭಾವಕ್ಕೆ ಧಕ್ಕೆ ತರುತ್ತದೆ. ಸಂಗೀತಗಾರರಿಗೆ ಭಾಷೆಯ ಪ್ರಜ್ಞೆ ಇರಬೇಕು. ಉಚ್ಛಾರ ಸ್ಪಷ್ಟತೆ ಇರಬೇಕು ಎಂದು ತಿಳಿಸಿದರು.
ಸಮಾಜ ಸೇವಕ ನಾಗರಾಜ ಗುತ್ತಿ ಮಾತನಾಡಿ, ಕಲಿಯುವುದಕ್ಕೆ ವಯಸ್ಸಿನ ಅಡ್ಡಿ ಬರುವುದಿಲ್ಲ. ಆದರೆ ಆಸಕ್ತಿ ಮುಖ್ಯ. ಸಕಾರಾತ್ಮಕ ಆಲೋಚನೆ ಮತ್ತು ಸಾಧಿಸುವ ಗುಣ, ಇಚ್ಛಾಶಕ್ತಿ ಹಾಗೂ ಏಕಾಗ್ರತೆಯಿದ್ದಾಗ ಬದುಕಿಗೆ ಹೊಸ ಮಾರ್ಗ ಬರುತ್ತದೆ ಎಂದರು.ಕರ್ನಾಟಕ ಸುಗಮ ಸಂಗೀತ ಪರಿಷತ್ ತಾಲೂಕು ಅಧ್ಯಕ್ಷ ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕಿ ಪೂರ್ಣಿಮಾ ಭಾವೆ, ಸದಸ್ಯರಾದ ಲಕ್ಷ್ಮಿ ಮುರಳೀಧರ್, ಈರಪ್ಪ ಮಾಸ್ತರ್, ವಸಂತ್ ಬಾಂಬೋರೆ, ಲಕ್ಷ್ಮಣ ಮಾಸ್ತರ್, ಗುರುಕುಲ ಸಂಸ್ಥೆಯ ಕಾರ್ಯದರ್ಶಿ ಸತೀಶ್ ಬೈಂದೂರು, ಪ್ರಮುಖರಾದ ವಿಜಯ ಮೂಡಿ, ಎನ್.ಷಣ್ಮುಖಾಚಾರ್, ಕೆ.ಪಿ.ಶ್ರೀಧರ್ ನೆಮ್ಮದಿ, ತ್ಯಾಗರಾಜ, ಸರಸ್ವತಿ ನಾವುಡಾ, ರೂಪಾ ಮಧುಕೇಶ್ವರ್, ವಿನಯ ಪ್ರಶಾಂತ್ ಸೇರಿ ಇತರರು ಇದ್ದರು.