ಸರ್ಕಾರಿ ಪಿಯು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್‌ ಉಚಿತ ತರಬೇತಿ : ಶಿಕ್ಷಣ ಸಚಿವ ಮಧು ಬಂಗಾರಪ್ಪ

| Published : Nov 21 2024, 01:05 AM IST / Updated: Nov 21 2024, 09:35 AM IST

ಸರ್ಕಾರಿ ಪಿಯು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್‌ ಉಚಿತ ತರಬೇತಿ : ಶಿಕ್ಷಣ ಸಚಿವ ಮಧು ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

 ವಿಜ್ಞಾನ ವಿಭಾಗದ ಆಯ್ದ 25 ಸಾವಿರ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್‌, ಜೆಇಇ ತರಬೇತಿ ನೀಡಲು ಪೇಸ್‌ ಕಂಪನಿ ಸಹಯೋಗದಲ್ಲಿ ರೂಪಿಸಿರುವ ಉಚಿತ ಆನ್‌ಲೈನ್‌ ತರಗತಿ ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಬುಧವಾರ ವಿಧಾನಸೌಧದಲ್ಲಿ ಚಾಲನೆ ನೀಡಿದರು.

 ಬೆಂಗಳೂರು : ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವಿಭಾಗದ ಆಯ್ದ 25 ಸಾವಿರ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್‌, ಜೆಇಇ ತರಬೇತಿ ನೀಡಲು ಪೇಸ್‌ ಕಂಪನಿ ಸಹಯೋಗದಲ್ಲಿ ರೂಪಿಸಿರುವ ಉಚಿತ ಆನ್‌ಲೈನ್‌ ತರಗತಿ ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಬುಧವಾರ ವಿಧಾನಸೌಧದಲ್ಲಿ ಚಾಲನೆ ನೀಡಿದರು.

ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರೊಂದಿಗೆ ವರ್ಚ್ಯುವಲ್‌ ಸಂವಾದ ನಡೆಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಯೋಜನೆಯನ್ನು ಕನಿಷ್ಠ 1 ಲಕ್ಷ ವಿದ್ಯಾರ್ಥಿಗಳಿಗೆ ವಿಸ್ತರಿಸುವ ಉದ್ದೇಶವಿದೆ ಎಂದು ಸಚಿವರು ತಿಳಿಸಿದರು.

ಈ ವರ್ಷ 25 ಸಾವಿರ ಮಕ್ಕಳಿಗೆ ಸರ್ಕಾರದಿಂದಲೇ ಉಚಿತವಾಗಿ ಸಿಇಟಿ, ನೀಟ್‌, ಜೆಇಇಗೆ ಉಚಿತ ತರಬೇತಿ ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇದಕ್ಕಾಗಿ ಮುಖ್ಯಮಂತ್ರಿ ಅವರು 10 ಕೋಟಿ ರು. ಅನುದಾನವನ್ನೂ ಮೀಸಲಿಟ್ಟಿದ್ದರು. ಈ ವರ್ಷ ಮತ್ತು ಮುಂದಿನ ವರ್ಷ ಉಚಿತ ತರಬೇತಿಗೆ ಪೇಸ್‌ ಕಂಪನಿಯೊಂದಿಗೆ 7 ಕೋಟಿ ರು.ಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ನಡೆಸುವ ತರಗತಿಗಳು ಕನ್ನಡ ಮತ್ತು ಇಂಗ್ಲೀಷ್‌ ಎರಡೂ ಭಾಷೆಯಲ್ಲಿ ಇರುತ್ತವೆ. ಪೇಸ್‌ ಕಂಪನಿಯಿಂದ ನೇಮಕಗೊಂಡ ನುರಿತ ಶಿಕ್ಷಕರು ಕರ್ನಾಟಕದವರೇ ಆಗಿದ್ದು, ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲೂ ತಮ್ಮ ತರಗತಿ ನಡೆಸಲಿದ್ದಾರೆ ಎಂದು ತಿಳಿಸಿದರು. 

ಪ್ರತಿ ವಿದ್ಯಾರ್ಥಿಗೂ ಲಾಗಿನ್‌ ಐಡಿ:

ಬಡ ಕುಟುಂಬದ ವಿದ್ಯಾರ್ಥಿಗಳು ಎಂಜಿನಿಯರಿಂಗ್‌, ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯುವ ಆಕಾಂಕ್ಷೆ ಹೊಂದಿರುತ್ತಾರೆ. ತರಬೇತಿ ದೊರೆಯದ ಕಾರಣಕ್ಕೆ ಅವರು ಅವಕಾಶ ವಂಚಿತರಾಗಬಾರದೆಂಬ ಉದ್ದೇಶದಿಂದ ಸರ್ಕಾರ ಈ ಯೋಜನೆ ಆರಂಭಿಸಿದೆ. ಪೇಸ್‌ ಕಂಪನಿಯ ಟೆಸ್ಟ್‌ ಮೂಲಕ ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ತಲಾ 10 ಸಾವಿರ ಮಕ್ಕಳು ಮತ್ತು ಆದರ್ಶ ವಿದ್ಯಾಲಯದ 5000 ಮಕ್ಕಳನ್ನು ಈ ಬಾರಿ ತರಬೇತಿಗೆ ಆಯ್ಕೆ ಮಾಡಲಾಗಿದೆ.

ಪೇಸ್‌ (PACE) ಕಂಪನಿಯ ಸ್ಟೆಪ್‌ ಆ್ಯಪ್‌(STEP app) ಮೂಲಕ ತರಬೇತಿ ದೊರೆಯಲಿದೆ. ಆಯ್ಕೆಯಾಗಿರುವ ಪ್ರತಿ ವಿದ್ಯಾರ್ಥಿಗೂ ಪ್ರತ್ಯೇಕ ಲಾಗಿನ್‌ ಐಡಿ, ಪುಸ್ತಕಗಳನ್ನು ನೀಡಲಾಗಿದೆ. ಪ್ರತಿ ದಿನ ತರಗತಿ ಆರಂಭಕ್ಕೆ ಮೊದಲು ಮತ್ತು ಮುಕ್ತಾಯದ ನಂತರ ಒಂದು ಗಂಟೆ ಆನ್‌ಲೈನ್‌ ತರಗತಿಗಳು ನಡೆಯಲಿವೆ. ಬಳಿಕ ಆ ತರಗತಿಗಳ ರೆಕಾರ್ಡಿಂಗ್‌ ಕೂಡ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ಈ ಯೋಜನೆಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಒದಗಿಸಿರುವ ಸಾಮಗ್ರಿಗಳು, ಆನ್‌ಲೈನ್‌ ತರಗತಿಗಳು ಮತ್ತು ನಂತರದ ರೆಕಾರ್ಡಿಂಗ್‌ಅನ್ನು ಇತರೆ ವಿದ್ಯಾರ್ಥಿಗಳೂ ಹಂಚಿಕೊಳ್ಳಬಹುದು ಎಂದು ಸಚಿವರು ವಿವರಿಸಿದರು.

ಈ ವರ್ಷ 25 ಸಾವಿರ ಮಕ್ಕಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಮುಂದಿನ ವರ್ಷ ಈ ಯೋಜನೆಯನ್ನು ಕನಿಷ್ಠ 1 ಲಕ್ಷ ಮಕ್ಕಳಿಗೆ ವಿಸ್ತರಿಸುವ ಉದ್ದೇಶವಿದೆ. ಈ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಮುಂದಿನ ಬಜೆಟ್‌ನಲ್ಲಿ ಅಗತ್ಯ ಅನುದಾನ ಮೀಸಲಿಗೆ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಪೇಸ್‌ ಕಂಪನಿಯ ನಿರ್ದೇಶಕ ಪ್ರವೀಣ್‌ ತ್ಯಾಗಿ ಮಾತಮಾಡಿ, ಸರ್ಕಾರಿ ಪಿಯು ಕಾಲೇಜು ಮಕ್ಕಳಿಗೆ ಈ ತರಗತಿ ನೀಡುವ ಅವಕಾಶ ನಮ್ಮ ಸಂಸ್ಥೆಗೆ ಸಿಕ್ಕಿದ್ದು ಸಂತಸ ತಂದಿದೆ. ನುರಿತ ಅಧ್ಯಾಪಕರಿಂದ ಉತ್ತಮ ತರಬೇತಿ ನೀಡಲಾಗುವುದು. ಸಿಕ್ಕಿರುವ ಅವಕಾಶ ಬಳಸಿಕೊಂಡು ಸಾಧಿಸಿ ತೋರಿಸುತ್ತೇವೆ. ಸರ್ಕಾರ ಇನ್ನಷ್ಟು ಮುತುವರ್ಜಿ ವಹಿಸಿ ಮುಂದಿನ ದಿನಗಳಲ್ಲಿ ಸರ್ಕಾರಿ ಪಿಯು ಕಾಲೇಜುಗಳ ಎಲ್ಲ ಮಕ್ಕಳಿಗೂ ಈ ಯೋಜನೆ ವಿಸ್ತರಿಸಿ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌, ಪಿಯು ಇಲಾಖೆ ನಿರ್ದೇಶಕರಾದ ಸಿಂಧು ರೂಪೇಶ್‌ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.