ಸಂಗೀತ ಆಂತರಿಕ ಶಕ್ತಿ ವೃದ್ಧಿಸುತ್ತದೆ: ಚೋಳಿನ

| Published : Jul 28 2025, 12:34 AM IST

ಸಾರಾಂಶ

ಸಂಗೀತವು ಆಂತರಿಕ ಶಕ್ತಿ ವೃದ್ಧಿಸುವ ಮೂಲಕ ಮನದ ಕ್ಲೇಷವನ್ನು ದೂರ ಮಾಡಿ, ನಮ್ಮನ್ನು ಸದೃಢಗೊಳಿಸುತ್ತದೆ.

ಧಾರವಾಡ: ಉತ್ತರ ಕರ್ನಾಟಕದಲ್ಲಿ ಆಕಾಶವಾಣಿ ಜನಪ್ರಿಯತೆಗೊಳ್ಳಲು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಗುರು ಪರಂಪರೆಯಲ್ಲಿ ಕಲಿತ ಕಲಾವಿದರ ಕೊಡುಗೆ ಅಪಾರ. ಪಂ. ಪಂಚಾಕ್ಷರಿ ಹಾಗೂ ಪಂ. ಪುಟ್ಟರಾಜ ಗವಾಯಿಗಳು ದೀನ, ದಲಿತರಿಗೆ ಮತ್ತು ದಿವ್ಯಾಂಗರಿಗೆ ಪ್ರಾಥಃಸ್ಮರಣೀಯರು. ಅವರು ಕೇವಲ ವ್ಯಕ್ತಿಗಳಾಗಿರದೇ ದಿವ್ಯ ಶಕ್ತಿಗಳಾಗಿದ್ದರು ಎಂದು ಧಾರವಾಡ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಶರಣಬಸವ ಚೋಳಿನ ಹೇಳಿದರು.

ನಾವೀಕಾ ರಂಗಭೂಮಿ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಧಾರವಾಡ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ಆಯೋಜಿಸಲಾದ ಗುರುಪೂರ್ಣಿಮೆ ಸಂಗೀತೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಸಂಗೀತವು ಆಂತರಿಕ ಶಕ್ತಿ ವೃದ್ಧಿಸುವ ಮೂಲಕ ಮನದ ಕ್ಲೇಷವನ್ನು ದೂರ ಮಾಡಿ, ನಮ್ಮನ್ನು ಸದೃಢಗೊಳಿಸುತ್ತದೆ. ಗದುಗಿನ ಪುಣ್ಯಾಶ್ರಮದಲ್ಲಿ ಕಲಿತ, ಸಂಗೀತ ದಿಗ್ಗಜರಲ್ಲೊಬ್ಬರಾದ ಪಂ. ಅರ್ಜುನಸಾ ನಾಕೋಡ ಅವರ ಬಳಿ ಸಂಗೀತಾಭ್ಯಾಸ ಮಾಡಿ, ಮೇರು ವ್ಯಕ್ತಿತ್ವ ಹೊಂದಿರುವ ಆಕಾಶವಾಣಿಯ ಎ ಶ್ರೇಣಿ ಕಲಾವಿದ ಪಂ. ಸದಾಶಿವ ಐಹೊಳೆಯವರು, ಸಂಗೀತದ ಸುವಾಸನೆಯನ್ನು ಆಸ್ವಾದಿಸುವುದರ ಜತೆಗೆ ಅದರ ಕಂಪನ್ನು ಗುರುಶಿಷ್ಯ ಪರಂಪರೆಯ ಮೂಲಕ ಪಸರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಸರಳ ವ್ಯಕ್ತಿತ್ವ ಹೊಂದಿರುವ ಪಂ. ಸದಾಶಿವ ಐಹೊಳೆ ಅವರ ಅಪಾರ ಶಿಷ್ಯ ಬಳಗ ಗುರು ಪೂರ್ಣಿಮೆ ಆಚರಿಸುತ್ತಿರುವುದು ಅರ್ಥಪೂರ್ಣವೆನಿಸಿದೆ ಎಂದರು.

ಕನ್ನಡ ಮತ್ತು ಸಂಸೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮಾತನಾಡಿ, ಖ್ಯಾತ ಗಾಯಕರಾದ ಪಂ. ಭೀಮಸೇನ ಜೋಶಿ, ಪಂ. ಬಸವರಾಜ ರಾಜಗುರು, ಡಾ. ಗಂಗೂಬಾಯಿ ಹಾನಗಲ್ಲ, ಪಂ.ಎಂ. ವೆಂಕಟೇಶಕುಮಾರ ಅವರ ಸಾಧನೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಧಾರವಾಡದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ ಎಂದರು.

ನಾಡಿನ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಪ್ರೋತ್ಸಾಹಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಆಕಾಶವಾಣಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುತ್ತ ಕಲಾವಿದರಿಗೆ ವೇದಿಕೆ ಕಲ್ಪಿಸುತ್ತಿರುವ ನಾವೀಕಾದಂತಹ ಸಂಘ-ಸಂಸ್ಥೆಗಳ ಸಹಕಾರ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಪಂ. ಸದಾಶಿವ ಐಹೊಳೆ ಹಾಗೂ ಸುಜಾತಾ ಐಹೊಳೆ ದಂಪತಿ ಮತ್ತು ಪಂ. ಅರ್ಜುನಸಾ ನಾಕೋಡ ಅವರ ಶಿಷ್ಯರಾದ ಪದ್ಮಾವತಿ ದೇವಶಿಖಾಮಣಿಯವರನ್ನು ಪಂ. ಸದಾಶಿವ ಅವರ ಶಿಷ್ಯ ಬಳಗದಿಂದ ಸನ್ಮಾನಿಸಲಾಯಿತು.

ನಿವೃತ್ತ ಡಿ.ವೈ.ಎಸ್.ಪಿ ಗಿರೀಶ ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಚಿಕ್ಕೂರ. ಆರತಿ ದೇವಶಿಖಾಮಣಿ. ಡಾ. ಅನೀಲ ಮೇತ್ರಿ, ಪ್ರಸಾದ ಮಡಿವಾಳರ, ಡಾ. ಪರಶುರಾಮ ಕಟ್ಟಿಸಂಗಾವಿ. ಪರಮೇಶ್ವರ ತೇಲಿ ಸೇರಿದಂತೆ ಹಲವರಿದ್ದರು.