ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸಂಸ್ಕೃತಿ, ಪರಂಪರೆಗಳು ಉಳಿಯಲು ಸಂಗೀತವು ಗಟ್ಟಿ ಬೇರಿನಂತೆ ಕೆಲಸ ಮಾಡಲಿದೆ ಎಂದು ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.ಪಟ್ಟಣದ ಚಿಗುರು ವೇದಿಕೆ ಹಾಗೂ ಸ್ಪಂದನಾ ಫೌಂಡೇಷನ್ ಆಯೋಜಿಸಿದ್ದ ಮರೆಯಲಾರದ ಮಹನೀಯರು ಕಾರ್ಯಕ್ರಮದಲ್ಲಿ ಮಾತನಾಡಿ, ಕಿಕ್ಕೇರಿಯು ಸಾಹಿತ್ಯ, ಸಂಸ್ಕೃತಿಯ ಬೇರಾಗಿದೆ. ಮೈಸೂರು ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ಕಿಕ್ಕೇರಿಯವರು. ನಾಡಿನ ಶ್ರೇಷ್ಠ ಕವಿಗಳಲ್ಲಿ ಒಲವಿನ ಕವಿಯಾಗಿ ಮೊದಲಿಗರಾಗಿರುವ ನಮ್ಮೂರಿನ ಕವಿ ನೆನಪು ಶಾಶ್ವತವಾಗಿರಲು ಟ್ರಸ್ಟ್ ಮೂಲಕ ಸೇವೆ ಮಾಡಲಾಗುವುದು ಎಂದರು.
ಸುಭದ್ರ ನಾಡು ಕಟ್ಟಲು ಸಾಹಿತ್ಯ, ಸಂಸ್ಕೃತಿಯ ಬೇರನ್ನು ಸಂಗೀತದ ಮೂಲಕ ಪ್ರಚುರಪಡಿಸಿದರೆ ಬಲುಬೇಗ ಎಲ್ಲರ ಮನ ತಲುಪಲಿದೆ. ಸುಜನಾ(ಹೊಸಹೊಳಲು), ಬಿಎಂಶ್ರೀ. ಅ.ರಾ. ಮಿತ್ರ, ಎ.ಎನ್. ಮೂರ್ತಿರಾಯ, ಅ.ನಾ. ಸುಬ್ಬರಾವ್, ಪು.ತಿ.ನ, ಮಂಡ್ಯ ಜಿಲ್ಲೆಯವರು. ಮೊದಲು ಇವರ ಪರಿಚಯ ವಿದ್ಯಾರ್ಥಿಗಳಿಗೆ ಆಗಬೇಕಿದೆ. ಇಂತಹ ಕೆಲಸವನ್ನು ಕೆ.ಎಸ್.ನ. ಟ್ರಸ್ಟ್ ಮಾಡಲು ಮುಂದಾಗಿದೆ ಎಂದು ಹೇಳಿದರು.ಬಡತನದಲ್ಲಿ ಹುಟ್ಟಿ, ಬಡತನದಲ್ಲಿಯೇ ಬದುಕಿ ಕವಿತೆಯ ಶ್ರೀಮಂತಿಕೆಯನ್ನು ನಾಡಿಗೆ ಉಣಬಡಿಸಿದ ಮಲ್ಲಿಗೆಯ ಕವಿ ಕೆ.ಎಸ್. ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆ ಅತಿ ಹೆಚ್ಚು ಮುದ್ರಣವಾದ ಕವನ ಸಂಕಲನವಾಗಿರುವುದು ಸಾಹಿತ್ಯ ಲೋಕ ಹಾಗೂ ಕಿಕ್ಕೇರಿಗೆ ಸಂದ ಬಲುದೊಡ್ಡ ಗೌರವ ಆಗಿದೆ. ಯುವಜನತೆಯು ಮೊಬೈಲ್ ಗೀಳು ಬಿಡಿ. ಕವಿತೆ ಹಾಡಿ ಮನಸ್ಸು ಹಗುರವಾಗಲಿದೆ ಎಂದು ಹುರಿದುಂಬಿಸಿದರು.
ಪು.ತಿ.ನ. ಟ್ರಸ್ಟ್ ಸದಸ್ಯ ಬಿ.ಎನ್. ಸುರೇಶ್ ಮಾತನಾಡಿ, ಪು.ತಿ.ನ. ತಮ್ಮ ಸಂಬಂಧಿಗಳು ಎನ್ನಲು ಹೆಮ್ಮೆ. ಕೆ.ಎಸ್. ನ. ಜನ್ಮಭೂಮಿಯಲ್ಲಿಯೂ ರಂಗಮಂದಿರ ಆಗಬೇಕು ಎಂದು ಅಭಿಪ್ರಾಯಪಟ್ಟರು.ಇದೇ ವೇಳೆ ದ.ರಾ.ಬೇಂದ್ರೆ, ಕುವೆಂಪು, ಬಿ.ಎಂ.ಶ್ರೀ, ಕೆ.ಎಸ್.ನ, ಪು.ತಿ.ನ ಸೇರಿದಂತೆ ಹಲವರ ಗೀತೆಗಳನ್ನು ಹಾಡಿ, ಮಕ್ಕಳಿಂದ ಹಾಡಿಸಿ ಸಾಹಿತ್ಯ ಪ್ರಜ್ಞೆ ಮೂಡಿಸಲಾಯಿತು. ಈ ವೇಳೆ ಗಾಯಕಿ ನಿತ್ಯಶ್ರೀ, ಸಮಾಜ ಸೇವಕಿ ಭಾಗ್ಯಮ್ಮ, ತ್ರಿವೇಣಿ ಇದ್ದರು.