ಹಾವೇರಿ ಸಮೀಪದ ದೇವಗಿರಿಯಲ್ಲಾಪುರದ ಅಜ್ಜಯ್ಯನಗುಡಿ ಬಳಿ ಇರುವ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಶನೇಶ್ವರ ಮಂದಿರದ ತೃತೀಯ ವಾರ್ಷಿಕೋತ್ಸವ ಹಾಗೂ ಗುರುಪೂರ್ಣಿಮೆ ಅಂಗವಾಗಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

ಹಾವೇರಿ: ಮನುಷ್ಯನ ಜಡ ಹಿಡಿದ ಮನಸ್ಸನ್ನು ಅರಳಿಸಿ, ಪ್ರಸನ್ನಗೊಳಿಸುವ ಅದ್ಭುತ ಶಕ್ತಿ ಸಂಗೀತಕ್ಕಿದೆ. ಬದುಕಿನ ಜಂಜಾಟ, ಒತ್ತಡ ಹಾಗೂ ನೋವುಗಳನ್ನು ಮರೆಸಿ ನೆಮ್ಮದಿ ನೀಡುವಲ್ಲಿ ಸಂಗೀತವು ಸಂಜೀವಿನಿಯಂತೆ ಕೆಲಸ ಮಾಡುತ್ತದೆ ಎಂದು ಹುಕ್ಕೇರಿಮಠದ ಡಾ. ಸದಾಶಿವ ಸ್ವಾಮೀಜಿ ಹೇಳಿದರು.

ಸಮೀಪದ ದೇವಗಿರಿಯಲ್ಲಾಪುರದ ಅಜ್ಜಯ್ಯನಗುಡಿ ಬಳಿ ಇರುವ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಶನೇಶ್ವರ ಮಂದಿರದ ತೃತೀಯ ವಾರ್ಷಿಕೋತ್ಸವ ಹಾಗೂ ಗುರುಪೂರ್ಣಿಮೆ ಅಂಗವಾಗಿ ಸಾಯಿ ಸೇವಾ ಸಮಿತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾವೇರಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಸುಗಮ ಸಂಗೀತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಇತ್ತೀಚಿನ ಪಾಶ್ಚಾತ್ಯ ಸಂಗೀತವು ಕೆಲವೊಮ್ಮೆ ಕ್ಷಣಿಕ ಆಕರ್ಷಣೆಯನ್ನು ನೀಡಿದರೆ, ನಮ್ಮ ಉದಾತ್ತ ಭಾರತೀಯ ಸಂಗೀತ ಹಾಗೂ ಸುಗಮ ಸಂಗೀತವು ಮನುಷ್ಯನನ್ನು ಭಕ್ತಿ, ಶಾಂತಿ ಮತ್ತು ಮುಕ್ತಿಯ ಮಾರ್ಗದತ್ತ ಕೊಂಡೊಯ್ಯುತ್ತದೆ ಎಂದರು.

ಸಂಗೀತವು ಕೇವಲ ಮನರಂಜನೆಯ ಸಾಧನವಲ್ಲ. ಅದು ಬದುಕಿಗೆ ಉತ್ತಮ ಸಂಸ್ಕಾರ, ಮಾನಸಿಕ ನೆಮ್ಮದಿ ಹಾಗೂ ಶಾಂತಿಯನ್ನು ನೀಡುವ ದಿವ್ಯ ಮಾಧ್ಯಮವಾಗಿದೆ. ಸಂಗೀತವನ್ನು ಆಸ್ವಾದಿಸುವುದರಿಂದ ಮನಸ್ಸಿನ ಒತ್ತಡ ಕಡಿಮೆಯಾಗಿ ಬದುಕಿನಲ್ಲಿ ಸಕಾರಾತ್ಮಕ ಚಿಂತನೆ ಮೂಡುತ್ತದೆ ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯ ಹಾಗೂ ಬಸವೇಶ್ವರ ನಗರ ಸಿ ಬ್ಲಾಕ್ ಗಜಾನನ ಮತ್ತು ಆಂಜನೇಯ ಟ್ರಸ್ಟ್ ಕಮಿಟಿ ಅಧ್ಯಕ್ಷ ಎಚ್.ಎಸ್. ಚಿನ್ನಿಕಟ್ಟಿ, ವೇ. ಶಿವಮೂರ್ತಯ್ಯ ಬಂಕಾಪುರಮಠ, ಗುಡ್ಡನಗೌಡ್ರ ಕರೇಗೌಡರ, ಜಂಬಯ್ಯ ಬಾಳೂರಮಠ, ಸೋಮಲಿಂಗಪ್ಪ ಬಣಕಾರ, ಡಾ. ಪ್ರಶಾಂತ ಬಿ., ಡಾ. ತಿಪ್ಪಣ್ಣ ಸಾಲಿಖಾನ, ರಮೇಶ್ ಗೌಡ್ರ ಸಣ್ಣೀಂಗಮ್ಮನವರ, ಯಲ್ಲಪ್ಪ ಕಣಕ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಲಾವಿದ ಮಹೇಶ ಸಾಲಿ ಹಾಗೂ ಕಲಾ ತಂಡದವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಫಕ್ಕೀರಯ್ಯ ಬಂಕಾಪುರಮಠ ಶಾಸ್ತ್ರಿಗಳು ಸ್ವಾಗತಿಸಿದರು. ಗಂಗಾಧರ ಶಾಸ್ತ್ರಿಗಳು ವಂದಿಸಿದರು.