ಸಾರಾಂಶ
-ಮುಸ್ಲಿಂ ಕಲ್ಚರಲ್ ಅಕಾಡೆಮಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ । ನ್ಯಾಯವಾದಿ ರಹಮತುಲ್ಲಾ ಸಲಹೆ
ಕನ್ನಡಪ್ರಭವಾರ್ತೆ, ಚಿತ್ರದುರ್ಗಮುಸ್ಲಿಂ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮಾಡಬಾರದೆಂದು ಕುರಾನ್ ಹೇಳಿಲ್ಲ. ವಿದ್ಯಾರ್ಥಿನಿಯರು ಲಭ್ಯವಾಗುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಶಿಕ್ಷಣ ಕ್ಷೇತ್ರಕ್ಕೆ ಲಗ್ಗೆ ಇಡಬೇಕು ಎಂದು ಹಿರಿಯ ನ್ಯಾಯವಾದಿ ಬಿ.ಕೆ.ರಹಮತುಲ್ಲಾ ಹೇಳಿದರು.
ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿರುವ ಮುಸ್ಲಿಂ ವಿದ್ಯಾರ್ಥಿಗಳಿಗೆ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಶಿಕ್ಷಣಕ್ಕೆ ಮಾತ್ರ ಭವಿಷ್ಯ ರೂಪಿಸಿಕೊಡುವ ಶಕ್ತಿ ಇದೆ ಎಂಬುದ ಯಾರೂ ಮರೆಯಬಾರದು ಎಂದರು.ಮಕ್ಕಳಿಗೆ ಹಣ, ಆಸ್ತಿ ಸಂಪಾದಿಸುವ ಬದಲು ಶಿಕ್ಷಣವನ್ನೆ ದೊಡ್ಡ ಸಂಪತ್ತಾಗಿ ಮಾಡಬೇಕು. ಶಿಕ್ಷಣದ ಕೊರತೆಯಿರುವವರು ಮಾತ್ರ ವಯಸ್ಸಾದ ತಂದೆ-ತಾಯಿಯರನ್ನು ಮನೆಯಿಂದ ಹೊರ ಹಾಕುತ್ತಾರೆ. ಮುಸ್ಲಿಂ ಹೆಣ್ಣು ಮಕ್ಕಳಿಗೂ ಪುರುಷರಂತೆ ಸಮಾನವಾಗಿ ಶಿಕ್ಷಣ ಕೊಡಿಸಬೇಕು ಎಂದು ಕುರಾನ್‍ನಲ್ಲಿ ಹೇಳಿದೆ. ಮಕ್ಕಳು ಚೆನ್ನಾಗಿ ಓದಿ ಜೀವನದಲ್ಲಿ ದೊಡ್ಡ ಹುದ್ದೆಯನ್ನು ಏರಲಿ ಎನ್ನುವ ಆಸೆ ಪೋಷಕರಿಗೂ ಇರಬೇಕು. ಮಕ್ಕಳು ಹೆಚ್ಚಿನ ಅಂಕಗಳನ್ನು ಪಡೆದು ಗುರು-ಹಿರಿಯರು ಅಪ್ಪ-ಅಮ್ಮನಿಗೆ ಕೀರ್ತಿ ತಂದರೆ ಅದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ ಎಂದರು.
ರಾಜಕೀಯದಲ್ಲಿ ಮುಸ್ಲಿಂ ಸಮಾಜಕ್ಕೆ ಆದ್ಯತೆಯಿಲ್ಲ. ನಮ್ಮ ಸಮಾಜ ಇಲ್ಲಿಯವರೆಗೂ ಕೇವಲ ಮತ ನೀಡುವುದಕ್ಕಷ್ಟೆ ಸೀಮಿತವಾಗಿದೆ. ಆದರೆ, ರಾಜಕೀಯವಾಗಿ ಅಧಿಕಾರ ಪಡೆಯಲು ಆಗುತ್ತಿಲ್ಲ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಫೀರ್ ಅವರನ್ನು ಎಂಎಲ್ ಸಿ ಯನ್ನಾಗಿಯಾದರೂ ನೇಮಕ ಮಾಡಲಿ ಎಂದು ಕಾಂಗ್ರೆಸ್ ಸರ್ಕಾರವನ್ನು ಬಿ.ಕೆ.ರಹಮತ್‍ವುಲ್ಲಾ ಒತ್ತಾಯಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಶಿಕ್ಷಣದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಸಾಧನೆ ಮಾಡಿರುವವರನ್ನು ಗುರುತಿಸಿ ಸನ್ಮಾನಿಸಿದರೆ ಇತರೆಯವರಿಗೆ ಪ್ರೇರಣೆಯಾಗುತ್ತದೆ. ನಾಲ್ಕೈದು ವರ್ಷಗಳ ಹಿಂದೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಸಮಸ್ಯೆ ಎದುರಿಸಿ ಅದರ ನಡುವೆಯೇ ಹತ್ತನೆ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿರುವುದು ಕಮ್ಮಿ ಸಾಧನೆಯಲ್ಲ. ಪ್ರತಿಭಾವಂತ ಮಕ್ಕಳ ಹಿಂದೆ ಸಮಾಜದ ಮುಖಂಡರುಗಳು ಇದ್ದಾರೆನ್ನುವುದಕ್ಕೆ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದೇ ಸಾಕ್ಷಿ ಎಂದು ತಿಳಿಸಿದರು.
ಮುಸ್ಲಿಂ ಸಮಾಜದ ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಸಮಾನ ಅವಕಾಶವಿದೆ. ತಂದೆ-ತಾಯಿಗಳು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವುದರ ಜೊತೆಗೆ ಮಕ್ಕಳ ಚಲನವಲನದ ಕಡೆಗೂ ನಿಗಾ ಇಡಬೇಕೆಂದರು.ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿ ಮಾತನಾಡಿ ನಮ್ಮ ಕಾಲದಲ್ಲಿ ಶಿಕ್ಷಣವಂತರಾಗಬೇಕಾದರೆ ಅಷ್ಟೊಂದು ಸೌಲಭ್ಯವಿರಲಿಲ್ಲ. ಈಗ ಅಲ್ಪಸಂಖ್ಯಾತರ ಇಲಾಖೆಯಿಂದ ಸಾಕಷ್ಟು ಸೌಕರ್ಯಗಳಿವೆ. ಎಲ್ಲವನ್ನು ಬಳಸಿಕೊಂಡು ಶಿಕ್ಷಣವಂತರಾಗುವ ಮೂಲಕ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಜೀವನದಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ವೈದ್ಯರು, ಇಂಜಿನಿಯರ್, ಐಎಎಸ್. ಐಪಿಎಸ್ ಅಧಿಕಾರಿಗಳು ಆಗಬಹುದು. ಅದಕ್ಕೆ ಕಠಿಣ ಪರಿಶ್ರಮ ಬೇಕು. ಸರ್ಕಾರದಲ್ಲಿ ಅನೇಕ ಸೌಲಭ್ಯಗಳಿವೆ. ಪ್ರಯೋಜನ ಪಡೆದುಕೊಂಡು ವಿದ್ಯಾವಂತರಾಗುವ ಮೂಲಕ ಗುರು-ಹಿರಿಯರು, ತಂದೆ-ತಾಯಿಗಳಿಗೆ ಗೌರವ ತರಬೇಕೆಂದು ಹೇಳಿದರು.ಧಾರ್ಮಿಕ ಚಿಂತಕ ಮೌಲಾನಾ ಎಜಾಜುಲ್ಲಾ ಸಾನಿಧ್ಯ ವಹಿಸಿದ್ದರು.ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಎಂ.ಹನೀಫ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಅಹಮ್ಮದ್ ಪಾಷ, ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಕಾರ್ಯಾಧ್ಯಕ್ಷ ನವೀದ್ ಅಬ್ದುಲ್ಲಾ, ನ್ಯಾಯವಾದಿ ದಿಲ್‍ಶಾದ್ ಉನ್ನಿಸ, ಮುಸ್ಲಿಂ ವಕೀಲರ ಸಂಘದ ಅಧ್ಯಕ್ಷ ಸಮೀವುಲ್ಲಾ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಸಾಧಿಕ್‍ವುಲ್ಲಾ, ಪದವೀಧರ ವಿಭಾಗದ ಅಧ್ಯಕ್ಷ ಮುದಸಿರ್ ನವಾಜ್, ಸೈಯದ್ ವಲಿಖಾದ್ರಿ ವೇದಿಕೆಯಲ್ಲಿದ್ದರು.
-------------------ಫೋಟೋ ಫೈಲ್ ನೇಮ್- 7 ಸಿಟಿಡಿ5
ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿಯಿಂದ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಉದ್ಘಾಟಿಸಿದರು.------------