ಸಾರಾಂಶ
ಮುಸ್ಲಿಂ ಸಮುದಾಯದಲ್ಲಿರುವ ಸುನ್ನಿ ಜಮಾತ್ ಹಾಗೂ ತಬ್ಲಿಕ್ ಪಂಗಡಗಳ ನಡುವೆ ನಮಾಜು ಮತ್ತು ಇತರೆ ಧಾರ್ಮಿಕ ಆಚರಣೆ ಕುರಿತಂತೆ ಉಂಟಾದ ಗೊಂದಲ, ಮುಸುಕಿನ ಗುದ್ದಾಟಗಳ ಹಿನ್ನೆಲೆ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಡಿವೈಎಸ್‌ಪಿ ಮತ್ತು ಉಪವಿಭಾಗಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಎರಡೂ ಪಂಗಡಗಳ ಮುಖಂಡರನ್ನು ಕರೆಯಿಸಿ ಚರ್ಚೆ ನಡೆಸಿದರು. ಮುಂದಿನ ದಿನಗಳಲ್ಲಿ ಪರಸ್ಪರ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಸಲಹೆ-ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಮುಸ್ಲಿಂ ಸಮುದಾಯದಲ್ಲಿರುವ ಸುನ್ನಿ ಜಮಾತ್ ಹಾಗೂ ತಬ್ಲಿಕ್ ಪಂಗಡಗಳ ನಡುವೆ ನಮಾಜು ಮತ್ತು ಇತರೆ ಧಾರ್ಮಿಕ ಆಚರಣೆ ಕುರಿತಂತೆ ಉಂಟಾದ ಗೊಂದಲ, ಮುಸುಕಿನ ಗುದ್ದಾಟಗಳ ಹಿನ್ನೆಲೆ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಡಿವೈಎಸ್‌ಪಿ ಮತ್ತು ಉಪವಿಭಾಗಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಎರಡೂ ಪಂಗಡಗಳ ಮುಖಂಡರನ್ನು ಕರೆಯಿಸಿ ಚರ್ಚೆ ನಡೆಸಿದರು. ಮುಂದಿನ ದಿನಗಳಲ್ಲಿ ಪರಸ್ಪರ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಸಲಹೆ-ಸೂಚನೆ ನೀಡಿದರು.ಸಭೆಯಲ್ಲಿ ಡಿವೈಎಸ್‌ಪಿ ರುದ್ರಪ್ಪ ಉಜ್ಜನಕೋಪ್ಪ ಹಾಗೂ ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಎರಡು ಪಂಗಡಗಳ ಮುಖಂಡರುಗಳ ವಾದಗಳನ್ನು ಆಲಿಸಿದರು. ಅನಂತರ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಿಕೊಂಡು ಹೋಗುವಂತೆ ತಿಳಿಸಿದರು.
ಸುನ್ನಿ ಜಮಾತ್ ಮುಖಂಡರು ಮಾತನಾಡಿ, ತಮ್ಮ ಪಂಗಡಕ್ಕೆ ಸೇರಿದ ನಾಲ್ಕು ಮಸೀದಿಗಳಿವೆ. ಅಲ್ಲಿ ಮುಸ್ಲಿಂ ಸಮುದಾಯ ಎಲ್ಲ ಪಂಗಡಗಳಿಗೆ ನಮಾಜ್ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಆದರೆ, ಇತ್ತೀಚೆಗೆ ತಬ್ಲಿಕ್ ಪಂಗಡಕ್ಕೆ ಸೇರಿದ ಎರಡ್ಮೂರು ಕುಟುಂಬದವರು ಸೇರಿ ಪ್ರತ್ಯೇಕ ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದರಿಂದ ವಿವಾದ ಸೃಷ್ಠಿಯಾಗಿದೆ ಎಂದು ಸುನ್ನತ್ ಜಮಾತ್ ಪಂಗಡದವರು ಹೇಳಿದರು.ನಮ್ಮ ಧರ್ಮಾಚರಣೆ ನಮ್ಮ ಹಕ್ಕು. ಅದಕ್ಕೆ ಯಾರೂ ವಿರೋಧ ಮಾಡಬಾರದು ಎಂದು ತಬ್ಲಿಕ್ ಪಂಗಡದವರು ವಾದ ಮಾಡಿದರು. ಈ ವಿಷಯವಾಗಿ ಕಳೆದ 15 ದಿನಗಳಿಂದ ಎರಡೂ ಪಂಗಡಗಳ ನಡುವೆ ವಿವಾದ ಉಂಟಾಗಿ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದರಿಂದ ಸಿಪಿಐ ಸುನಿಲ್ ಕುಮಾರ್ ಅವರು ಶಾಂತಿ-ಸೌಹಾರ್ದ ಸಭೆ ಆಯೋಜಿಸಿದ್ದರು.
ಮತ್ತೊಂದು ಮಸೀದಿ ನಿರ್ಮಾಣಕ್ಕೆ ಅವಕಾಶವಿಲ್ಲ. ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ತಬ್ಲಿಕ್ ಪಂಗಡದವರು ಈ ಹಿಂದಿನಂತೆಯೇ ನಡೆದುಕೊಳ್ಳಬೇಕು. ಜೊತೆಗೆ ಸುನ್ನಿ ಜಮಾತ್ ಪಂಗಡದವರು ಕೂಡ ಇತರರೊಂದಿಗೆ ಹೊಂದಿಕೊಂಡು ಹೋಗಬೇಕು ಎಂದು ಸೂಚಿಸಲಾಯಿತು.ಸಭೆಯಲ್ಲಿ ತಹಸೀಲ್ದಾರ್ ಪಟ್ಟರಾಜ ಗೌಡ, ತಾಪಂ ಇಒ ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ, ಪೊಲೀಸ್ ಸಿಬ್ಬಂದಿ ಜಗದೀಶ್, ಸುನ್ನತ್ ಜಮಾತ್ ಹಾಗೂ ತಬ್ಲಿಕ್ ಪಂಗಡಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.