ಶಾಸಕ‌ ಜಿ.ಎಸ್. ಪಾಟೀಲ ಅವರ ಪರವಾಗಿ ಮಾತಾಡುವಲ್ಲಿ, ಅವರಿಗೆ ಸಚಿವ ಸ್ಥಾನ ನೀಡುವಂತೆ ಧ್ವನಿ ಎತ್ತಲು ಜಿಲ್ಲೆಯಲ್ಲಿನ ಮಠಾಧೀಶರಿಗೆ ದಿಗ್ಬಂಧನ ಹಾಕಲಾಗಿದೆ ಎಂದು ಅಸೂಟಿ ಮುರುಘರಾಜೇಂದ್ರ ಶಾಂತಿಧಾಮ ಅನುಭವ ಮಂಟಪದ ದಿವಾನ್‌ ಶರೀಫ ಗುರು ಮುರುಘರಾಜೇಂದ್ರ ಶಿವಯೋಗಿ ಆರೋಪಿಸಿದ್ದಾರೆ.

ರೋಣ: ಶಾಸಕ‌ ಜಿ.ಎಸ್. ಪಾಟೀಲ ಅವರ ಪರವಾಗಿ ಮಾತಾಡುವಲ್ಲಿ, ಅವರಿಗೆ ಸಚಿವ ಸ್ಥಾನ ನೀಡುವಂತೆ ಧ್ವನಿ ಎತ್ತಲು ಜಿಲ್ಲೆಯಲ್ಲಿನ ಮಠಾಧೀಶರಿಗೆ ದಿಗ್ಬಂಧನ ಹಾಕಲಾಗಿದೆ ಎಂದು ಅಸೂಟಿ ಮುರುಘರಾಜೇಂದ್ರ ಶಾಂತಿಧಾಮ ಅನುಭವ ಮಂಟಪದ ದಿವಾನ್‌ ಶರೀಫ ಗುರು ಮುರುಘರಾಜೇಂದ್ರ ಶಿವಯೋಗಿ ಆರೋಪಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಜಿಲ್ಲೆಯಲ್ಲಿ ಅನೇಕ ಮಠ-ಮಾನ್ಯಗಳಿಗೆ ಜಿ.ಎಸ್. ಪಾಟೀಲ್ ಅವರು ಸಾಕಷ್ಟು ಅನುದಾನ ಮತ್ತು ದೇಣಿಗೆ ಕೊಟ್ಟಿದ್ದಾರೆ. ಅಪಾರ ಸಾಮಾಜಿಕ ಕಳಕಳ, ಸರ್ವ ಧರ್ಮ ಹಿತ ಚಿಂತಕರು, ದಿನ-ದಲಿತರ, ಬಡವರ, ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿ ಬಯಸುತ್ತಾ, ದಾನ, ಧರ್ಮಾಧಿ ಕಾರ್ಯಗಳಲ್ಲಿ ನಿರಂತರ ತಮ್ಮನ್ನು ತೊಡಗಿಸಿಕೊಂಡು ಬಂದಿದ್ದಾರೆ. ದೇಣಿಗೆ ನೀಡಿದ್ದರಿಂದ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಎಂದು ನಾನು ಮಠಾಧೀಶರಿಗೆ ಹೇಳುತ್ತಿಲ್ಲ. ಜಿ.ಎಸ್‌. ಪಾಟೀಲ ವ್ಯಕ್ತಿತ್ವ ಎಂತದ್ದು ಎಂಬುದು ಬಹುತೇಕ ಮಠಾಧೀಶರಿಗೆ ಗೊತ್ತಿದೆ. ಇಂತಹ ವ್ಯಕ್ತಿಯ ಬಗ್ಗೆ ರಾಜ್ಯದ ಗಮನ ಸೆಳೆಯುವಲ್ಲಿ ಜಿಲ್ಲೆಯಲ್ಲಿನ‌ ಮಠಾಧೀಶರು ಮೌನ ವಹಿಸಿದ್ದು ಬೇಸರ ತಂದಿದೆ ಎಂದು ವಿಷಾಧಿಸಿದರು.

ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಎಂ. ಮುಲ್ಲಾ, ನಜೀರ ಅಹ್ಮದ ಮಕಾಂದರ, ಫಕ್ರುಸಾಬ ವಾಲಿಕಾರ, ಈರಣ್ಣ ಮುದೇನಗುಡಿ, ಸಲೀಂ ಹೊರಪೇಟಿ, ಶಾಂತಪ್ಪ ಶೆಟ್ಟರ, ಮಕ್ತುಂಸಾಬ ರಾಜಾಖಾನ, ಮರ್ಜುತಾ ಮುಲ್ಲಾ ಮಹಮ್ಮದ ಹುಸೇನ‌ ಮುಲ್ಲಾ, ಸೈಯದ್ ಭಾಷಾ ಮುಲ್ಲಾ, ಮಲಿಕರಿಯಾಜ ಎಸ್. ಮುಲ್ಲಾ, ಹಜರತಲಿ ಬೇಪಾರಿ ಮುಂತಾದವರು ಇದ್ದರು.

ಶಾಸಕ ಜಿ.ಎಸ್. ಪಾಟೀಲಗೆ ಸಚಿವ ಸ್ಥಾನ ನೀಡಲು ಆಗ್ರಹ

ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ ಅಸ್ತಿತ್ವ ಮತ್ತು ಬಲವರ್ಧನೆಗೆ ಶ್ರಮಿಸಿದ್ದಲ್ಲದೇ, ಪಕ್ಷದ ಸಂಕಷ್ಟ ಕಾಲದಲ್ಲೂ ತ್ಯಾಗ, ಸತ್ಯ ಮತ್ತು ನಿಷ್ಠೆಯಿಂದ ದುಡಿದ ರೋಣ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಈ ಬಾರಿಯಾದರೂ ಸಚಿವ ಸ್ಥಾನ ನೀಡಬೇಕು ಎಂದು ಅಲ್ಪಸಂಖ್ಯಾತರ ಸಮಾಜದ ತಾಲೂಕು ಮುಖಂಡ ಅಜ್ಜು ಬೇಪಾರಿ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜನರ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಇಂತಹ ನಾಯಕರಿಗೆ ಸಚಿವ ಸ್ಥಾನ ಸಿಗಬೇಕು ಎನ್ನುವುದು ನನ್ನ ಹಾಗೂ ಜಿಲ್ಲೆಯ ಸಮಸ್ತ ಜನತೆಯ ಒತ್ತಾಸೆಯಾಗಿದೆ. ಜಿ.ಎಸ್. ಪಾಟೀಲ ಅವರ ರಾಜಕೀಯ ಜೀವನ ಶುದ್ಧ ಮತ್ತು ಪ್ರಾಮಾಣಿಕತೆಗೆ ಮಾದರಿಯಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಅವರು ಅನೇಕ ಯೋಜನೆಗಳನ್ನು ತಂದಿದ್ದು, ಗ್ರಾಮೀಣ ಭಾಗದಲ್ಲಿ ವಿದ್ಯುತ್, ಕುಡಿಯುವ ‌ನೀರು, ಶಿಕ್ಷಣ ಕ್ಷೇತ್ರದಲ್ಲಿ ಶಾಶ್ವತ ಬದಲಾವಣೆ ತಂದಿದ್ದಾರೆ. 4 ಬಾರಿ ಶಾಸಕರಾಗಿ, ವಿವಿಧ ನಿಗಮಗಳ ಅಧ್ಯಕ್ಷರಾಗಿ, ಸದ್ಯ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು ಯಾವುದೇ ಜವಾಬ್ದಾರಿ ವಹಿಸಿದರೂ ಅತ್ಯಂತ ಅಚ್ಚುಕಟ್ಟಾಗಿ ನಿಭಾಹಿಸುತ್ತಾರೆ. ಸಚಿವ ಸ್ಥಾನಕ್ಕೆ ಎಲ್ಲ ರೀತಿಯ ಅರ್ಹತೆ ಹೊಂದಿರುವ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವುದು ಅತ್ಯಂತ ನ್ಯಾಯಯುತವಾಗಿದೆ ಎಂದು ಹೇಳಿದ್ದಾರೆ.