ಒಗ್ಗಟ್ಟಿನಿಂದ ಭಾಷೆ ಬಳಸಿದರೆ ಕನ್ನಡ ಉಳಿಸಿ ಬೆಳೆಸಬಹುದು

| Published : Oct 20 2025, 01:02 AM IST

ಒಗ್ಗಟ್ಟಿನಿಂದ ಭಾಷೆ ಬಳಸಿದರೆ ಕನ್ನಡ ಉಳಿಸಿ ಬೆಳೆಸಬಹುದು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿನಿತ್ಯವೂ ಶಾಲಾ ಕಾಲೇಜುಗಳಲ್ಲಿ ನಡೆದಾಗ ಕನ್ನಡ ಭಾಷೆಯನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಕನ್ನಡ ಮಾಧ್ಯಮದ ಶಾಲೆಗಳು ಇಂದು ಮುಚ್ಚುವ ಪರಿಸ್ಥಿತಿ ಬಂದಿರುವುದಕ್ಕೆ ಕನ್ನಡಿಗರಾದ ನಾವುಗಳೇ ಕಾರಣ. ಕನ್ನಡದ ಎಲ್ಲಾ ಮನಸ್ಸುಗಳು ಒಗ್ಗಟ್ಟಿನಿಂದ ಭಾಷೆಯನ್ನು ಬಳಸುವಂತಾದರೆ ಶಾಶ್ವತವಾಗಿ ಕನ್ನಡವನ್ನು ಉಳಿಸಿ ಬೆಳೆಸಬಹುದು ಎಂದು ಪ್ರಾಧ್ಯಾಪಕ ಎಲ್. ತಿಪ್ಪೇಸ್ವಾಮಿ ತಿಳಿಸಿದರು.

ರಾಮಕೃಷ್ಣನಗರದ ನೃಪತುಂಗ ಶಾಲೆಯ ಆವರಣದಲ್ಲಿ ಮಂಗಳೂರಿನ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಮತ್ತು ಸಿಬ್ಬಂದಿ ಒಕ್ಕೂಟವು ಭಾನವಾರ ಏರ್ಪಡಿಸಿದ್ದ ಮೈಸೂರು ವಲಯ ಗಿಳಿವಿಂಡು ಪ್ರಾಂತೀಯ ಸಮಾವೇಶವನ್ನು ಅವರನ್ನು ಉದ್ಘಾಟಿಸಿ ಮಾತನಾಡಿದರು.

ವಿಶ್ವವಿದ್ಯಾನಿಲಯ ಹಾಗೂ ಜಿಲ್ಲಾ ಮಟ್ಟದಲ್ಲಿ ಅನೇಕ ಕಾರ್ಯಾಗಾರ, ಚರ್ಚೆಗಳು, ಪ್ರಬಂಧಸ್ಪರ್ಧೆ, ಕನ್ನಡಕ್ಕೆ ಸಂಬಂಧಪಟ್ಟ ಅನೇಕ ಕಾರ್ಯ ಚಟುವಟಿಕೆಗಳು ಪ್ರತಿನಿತ್ಯವೂ ಶಾಲಾ ಕಾಲೇಜುಗಳಲ್ಲಿ ನಡೆದಾಗ ಕನ್ನಡ ಭಾಷೆಯನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಇಂದಿನ ಕನ್ನಡದ ಶಿಕ್ಷಕರು, ಅಧ್ಯಾಪಕರು, ಸಂಘಟನೆಗಳು ಮುಂದಾಗಬೇಕು ಎಂದು ಅವರು ಕರೆ ನೀಡಿದರು.

ಅದೇ ರೀತಿ ಕನ್ನಡ ಮಾಧ್ಯಮದಲ್ಲಿ ಓದಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವ ಹಾಗೂ ಸರ್ಕಾರದ ಕೆಲಸ ಸಿಗುವಂತಾದರೆ ಕನ್ನಡದ ಮನಸ್ಸುಗಳಿಗೆ ಅನುಕೂಲವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸ ಡಾ. ರಾಗೌ ಮಾತನಾಡಿ, ಕನ್ನಡದ ಅಸ್ಮಿತೆಯು ಕೇವಲ ದೇಹ, ಉಡುಪು ಅಥವಾ ಆಚರಣೆಗಳಿಗೆ ಸೀಮಿತವಾಗಿಲ್ಲ. ಅದು ಭಾಷೆಯ ಮೂಲಕ ಜನರ ಭಾವನೆಗಳನ್ನು ಒಂದುಗೂಡಿಸುತ್ತದೆ. ಕನ್ನಡದ ಹೋರಾಟದ ವಿಷಯಕ್ಕೆ ಬಂದಾಗ ಕನ್ನಡ ಪರ ಸಂಘಟನೆಗಳು ಒಗ್ಗಟ್ಟಾಗಿ ಸಮಸ್ಯೆಗಳಿಗೆ ಸ್ಪಂದಿಸಿ, ಶಾಶ್ವತವಾದ ಪರಿಹಾರವನ್ನು ಕಂಡು ಹಿಡಿಯುವಲ್ಲಿ ಮುಂದಾಗಬೇಕು ಎಂದು ತಿಳಿಸಿದರು.

ಕನ್ನಡ ಭಾಷೆಯು ಸಂಸ್ಕೃತಿ, ಕಲೆ, ಸಂಗೀತ, ಸಾಹಿತ್ಯ ಮತ್ತು ಕರಕುಶಲ ವಸ್ತುಗಳ ಮೂಲಕ ವ್ಯಕ್ತವಾಗುತ್ತದೆ. ಇದನ್ನು ಕನ್ನಡಿಗರಾದ ನಾವು ಒಂದೆಡೆ ಸೇರುವುದರ ಮೂಲಕ ಒಗ್ಗಟ್ಟಾಗಿ ಅನ್ಯ ಭಾಷೆಗಳಿಗೆ ಮನಸೋಲದೆ, ನಮ್ಮ ನಾಡಿನ ನೆಲ, ಜಲ, ಸಂಸ್ಕೃತಿ, ಭಾಷೆ ಉಳಿಸಬಹುದು. ನಮ್ಮ ಮಾತೃಭಾಷೆಯನ್ನು ಸಾಧ್ಯವಾದಷ್ಟು ಎಲ್ಲಾ ಕಡೆ ಬಳಸುವುದರ ಮೂಲಕ ಕನ್ನಡ ಭಾಷೆಯ ಅಸ್ಮಿತೆಯನ್ನು ಶ್ರೇಷ್ಠ ಮಟ್ಟಕ್ಕೆ ಕೊಂಡೊಯ್ಯುಬಹುದು ಎಂದರು.

ಇದೇ ವೇಳೆ ಡಾ.ಎನ್.ಕೆ. ಲೋಲಾಕ್ಷಿ, ಪ್ರೊ.ಹೊ.ಮ. ಪಂಡಿತಾರಾಧ್ಯ, ಪ್ರೊ. ಜಯಪ್ರಕಾಶ್‌ ಗೌಡ, ಡಾ. ನಾಗಪ್ಪಗೌಡ, ಪ್ರೊ. ಸೋಮಣ್ಣ, ಪ್ರೊ. ಸದೇಬೋಸ್, ಪ್ರೊ. ಚಂದ್ರಕಲಾ ನಂದಾವರ ಅವರನ್ನು ಸನ್ಮಾನಿಸಲಾಯಿತು.

ಗಿಳಿವಿಂಡು ಅಧ್ಯಕ್ಷ ಡಾ.ಬಿ. ಶಿವರಾಮಶೆಟ್ಟಿ, ಪ್ರೊ. ಶಿವಾಜಿ ಜೋಯಿಸ್, ಪ್ರೊ.ಎಚ್.ಸಿ. ಸರಸ್ವತಿ ಇದ್ದರು. ಗಾಯಕಿ ಎಚ್. ರಕ್ಷಾ ರಾವ್ ಪ್ರಾರ್ಥಿಸಿದರು. ನೃಪತುಂಗ ಶಾಲೆಯ ಕಾರ್ಯದರ್ಶಿ ಪ್ರೊ.ಎಚ್.ಜಿ. ಕೃಷ್ಣಪ್ಪ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಪ್ರೊ.ಎಂ. ನಟರಾಜ್‌ ನಿರೂಪಿಸಿದರು.