ಸಾರಾಂಶ
ರೈತ ಮತ್ತು ದಲಿತ ಚಳವಳಿಗಳು ಚುನಾವಣಾ ರಾಜಕೀಯದ ಒಳಗೆ ಬಂದು ಸತ್ತರೆ, ಉಳಿದ ಚಳವಳಿಗಳನ್ನು ಸರ್ಕಾರಗಳೇ ಬಲಿ ಹಾಕಿವೆ
ಕನ್ನಡಪ್ರಭ ವಾರ್ತೆ ಮೈಸೂರು
ಚಳವಳಿಗಳಿಂದಾಗಿಯೇ ರಾಜ್ಯದಲ್ಲಿ ಅನೇಕ ಸುಧಾರಣೆಗಳಾಗಿವೆ. ಆದರೆ, ಪ್ರಸ್ತುತ ಸರ್ಕಾರವನ್ನು ಹದ್ದು ಬಸ್ತಿನಲ್ಲಿಡಲು ರಾಜ್ಯದಲ್ಲಿ ಚಳವಳಿಗಳೇ ಇಲ್ಲವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ವಿಷಾದಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಕನ್ನಡ ಚಳವಳಿ ಕೇಂದ್ರ ಸಮಿತಿಯು ಮಂಗಳವಾರ ಆಯೋಜಿಸಿದ್ದ ಕನ್ನಡ ಚಳವಳಿಗಾರ ಮೈ.ನಾ. ಗೋಪಾಲಕೃಷ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತ ಮತ್ತು ದಲಿತ ಚಳವಳಿಗಳು ಚುನಾವಣಾ ರಾಜಕೀಯದ ಒಳಗೆ ಬಂದು ಸತ್ತರೆ, ಉಳಿದ ಚಳವಳಿಗಳನ್ನು ಸರ್ಕಾರಗಳೇ ಬಲಿ ಹಾಕಿವೆ ಎಂದು ತಿಳಿಸಿದರು.
ವಿದ್ಯಾರ್ಥಿ, ರೈತ, ಕಾರ್ಮಿಕ, ದಲಿತ, ಮಹಿಳಾ ಸೇರಿದಂತೆ ಎಲ್ಲಾ ಚಳವಳಿಗಳನ್ನು ಸರ್ಕಾರಗಳು ಬಲಿ ಹಾಕಿದ ಪರಿಣಾಮ ಪ್ರಸ್ತುತ ಜನತಂತ್ರ ವ್ಯವಸ್ಥೆಯಲ್ಲಿ ನಾಯಕತ್ವದ ಕೊರತೆ ಎದುರಾಗಿದೆ. ಇಂದು ಜನಪ್ರತಿನಿಧಿಗಳಾಗಿರುವ ಬಹುತೇಕರು ವಿದ್ಯಾರ್ಥಿ ಚಳವಳಿಯಿಂದ ನಾಯಕತ್ವ ರೂಪಿಸಿಕೊಂಡವರು. ಆದರೆ, ಇಂದಿನ ವಿದ್ಯಾರ್ಥಿಗಳಿಗೆ ನಾವು ಯಾವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ ಎಂಬುದೇ ತಿಳಿದಿಲ್ಲ ಎಂದು ಅವರು ವಿಷಾದಿಸಿದರು.ಮೈ.ನಾ. ಗೋಪಾಲಕೃಷ್ಣ ನನ್ನ ಸ್ನೇಹಿತರಾಗಿದ್ದರು. ವಾಟಾಳ್ ನಾಗರಾಜು ಅವರನ್ನು ತಾಲೂಕುಗಳಿಗೆ ಕರೆಸಿ ಹೋರಾಟ ಮಾಡುತ್ತಿದ್ದೇವು ಎಂದು ಅವರು ಸ್ಮರಿಸಿದರು.
ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ ಮಾತನಾಡಿ, ಮೈ.ನಾ. ಗೋಪಾಲಕೃಷ್ಣ ಅವರು ಕನ್ನಡಪರ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಇಂದು ಹೋರಾಟದ ಕಿಚ್ಚು ಕಡಿಮೆಯಾಗಿದೆ ಎಂಬ ಮಾತಿದೆ. ಆದರೆ, ಹೋರಾಟಗಾರರ ಕಿಚ್ಚು ಕಡಿಮೆಯಾಗಿಲ್ಲ. ಆರ್ಥಿಕ ಮುಗ್ಗಟ್ಟಿನಿಂದಾಗಿ ಪ್ರಬಲವಾಗಿ ಚಳವಳಿ ರೂಪಿಸಲಾಗುತ್ತಿಲ್ಲ ಎಂದು ಹೇಳಿದರು.ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಮೊದಲಾದವರು ಇದ್ದರು.