ಇತ್ತೀಚಿಗೆ ರಾಜಸ್ವ ನಿರೀಕಕ್ಷ ಮತ್ತು ಸರ್ವೆಯರ್ ಹಾಗೂ ತಹಸೀಲ್ದಾರ್ ಸೇರಿ ಯಾರ ಒತ್ತಡಕ್ಕೆ ಮಣಿದು ಇಲ್ಲವೇ ಹಣ ಪಡೆದು ಸಿ.ಟಿ.ಶ್ರೀಮತಿ ಎಂಬುವವರಿಗೆ ಸರ್ವೆನಂ.164/1ರ 01.08 ನನ್ನ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ಹಿಟ್ಟನಹಳ್ಳಿಕೊಪ್ಪಲು ಗ್ರಾಮದಲ್ಲಿ ನನ್ನ ಹೆಸರಿನಲ್ಲಿದ್ದ ಜಮೀನನ್ನು ಅಧಿಕಾರಿಗಳು ಬೇರೆ ಅವರ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ತಾಲೂಕು ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಬಿ.ಪಿ.ರಾಧಾ ಎಚ್ಚರಿಕೆ ನೀಡಿದರು.

ಶುಕ್ರವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, 1981ರಲ್ಲಿ ನನ್ನ ಪತಿ ಎಚ್.ವಿ.ವೀರಣ್ಣಗೌಡರು ಸರ್ವೇ ನಂ.164/1ರ 01.08 ಗುಂಟೆ ಜಮೀನನ್ನು ಕ್ರಯಕ್ಕೆ ತೆಗೆದುಕೊಂಡಿದ್ದರು. ಪತಿ ನಿಧನದ ನಂತರ ಜಮೀನು ನನ್ನ ಹೆಸರಿಗೆ ಪೌತಿ ಖಾತೆಯಾಗಿತ್ತು ಎಂದರು.

ಇತ್ತೀಚಿಗೆ ರಾಜಸ್ವ ನಿರೀಕಕ್ಷ ಮತ್ತು ಸರ್ವೆಯರ್ ಹಾಗೂ ತಹಸೀಲ್ದಾರ್ ಸೇರಿ ಯಾರ ಒತ್ತಡಕ್ಕೆ ಮಣಿದು ಇಲ್ಲವೇ ಹಣ ಪಡೆದು ಸಿ.ಟಿ.ಶ್ರೀಮತಿ ಎಂಬುವವರಿಗೆ ಸರ್ವೆನಂ.164/1ರ 01.08 ನನ್ನ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ ಎಂದು ಆರೋಪಿಸಿದರು.

ನನಗೆ ಖಾತೆ ಮಾಡಿಕೊಟ್ಟಿದ್ದ ತಹಸೀಲ್ದಾರ್ ಅವರ ಆದೇಶ ಎಂ.ಆರ್.36/2019-20 ಹಾಗೂ ಎಂ.ಆರ್.14-15 ಪ್ರಶ್ನಿಸಿ ಸಿ.ಟಿ.ಶ್ರೀಮತಿ ಎಂಬುವವರು ಮಂಡ್ಯ ಉಪವಿಭಾಗಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಂತರ ಉಪವಿಭಾಗಾಧಿಕಾರಿಗಳು ವಿವಾದಿತ ಜಮೀನಿನ ಬಗ್ಗೆ ಸೂಕ್ತ ಸಿವಿಲ್ ನ್ಯಾಯಾಲಯದಲ್ಲಿ ಪ್ರಶ್ನಿಸಿ ಹಕ್ಕು ಪಡೆದು ಕಂಡುಕೊಳ್ಳುವಂತೆ ಸಿ.ಟಿ.ಶ್ರೀಮತಿ ಅವರಿಗೆ ಆದೇಶಿಸಿದ್ದರು. ಆನಂತರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲೂ ಪ್ರಶ್ನಿಸಿದ್ದರು ಎಂದರು.

ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳು ಖುದ್ದು ಸ್ಥಳ ತನಿಖೆ ನಡೆಸಿ ಅನುಭವ ಪರಿಶೀಲಿಸಿಕೊಂಡು ನಿಯಮಾನುಸಾರ ಕ್ರಮವಹಿಸಲು ತಹಸೀಲ್ದಾರ್‌ ವಿಚಾರಣೆಗೆ ಹಿಂದಿರುಗಿಸಿದ್ದರು. ಆದರೆ, ಸರ್ವೆಯರ್ ಬೀರೇಶ್ ಮತ್ತು ರಾಜಸ್ವ ನಿರೀಕಕ್ಷ ಮಂಜುನಾಥ್ ಅವರು ಸ್ಥಳ ಪರಿಶೀಲನೆ ಮಾಡದೇ ಬಾಜುದಾರರಿಗೆ ನೋಟೀಸ್ ನೀಡದೇ ಹಾಗೂ ಅನುಭವದಾರರಿಗೂ ನೋಟೀಸ್ ನೀಡದೇ ಏಕಾಏಕಿ ಶ್ರೀಮತಿ ಅವರ ಪರವಾಗಿ ವರದಿ ನೀಡಿದ್ದಾರೆ ಎಂದು ಕಿಡಿಕಾರಿದರು.

ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗ ಆದೇಶವನ್ನು ಸೂಕ್ತ ರೀತಿಯಲ್ಲಿ ಪರೀಶಿಲನೆ ನಡೆಸದ ತಹಸೀಲ್ದಾರ್ ಎಸ್.ವಿ.ಲೋಕೇಶ್ 2025ರ ಜೂನ್‌ನಲ್ಲಿ ಉಪವಿಭಾಗಾಧಿಕಾರಿಗಳ ನಡವಳಿಯ ನಕಲಿ ಪತ್ರವನ್ನು ಉಲ್ಲೇಖಿಸಿ ಶ್ರೀಮತಿ ಅವರ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಆ ಪತ್ರದಲ್ಲಿ ಉಪವಿಭಾಗಾಧಿಕಾರಿಗಳ ಸಹಿಯೂ ಇಲ್ಲ. ಅಲ್ಲದೇ ಇ-ಆಫೀಸ್ ನಂಬರ್ ಇ-1965095 ಸಹ ನಕಲಿಯಾಗಿರುತ್ತದೆ ಎಂದು ದಾಖಲೆ ಬಿಡುಗಡೆಗೊಳಿಸಿ ಆರೋಪಿಸಿದರು.

ತಾಲೂಕಿನಲ್ಲಿ ಸರ್ಕಾರಿ ಹಾಗೂ ಖಾಸಗಿಯಾಗಿ ಜಮೀನುಗಳು ಅಕ್ರಮವಾಗಿ ಖಾತೆಯಾಗುತ್ತಿದ್ದು, ಶಾಸಕರಾದ ನಂತರ ಇನ್ನು ಆರು ತಿಂಗಳಲ್ಲಿ ಅಕ್ರಮ ಖಾತೆ ಮಾಡುವುದನ್ನು ತಡೆಯುವುದಾಗಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಹೇಳುತ್ತಲೇ ಬಂದಿದ್ದರು. ಆದರೆ, ಮತ್ತೆ ಇಂತಹ ಪ್ರಕರಣಗಳು ತಾಲೂಕಿನಲ್ಲಿ ಜರುಗುತ್ತಿವೆ. ಇದಕ್ಕೆ ಕಡಿವಾಣ ಯಾವಾಗ ಎಂದು ಪ್ರಶ್ನಿಸಿದರು.

ಹಿಟ್ಟನಹಳ್ಳಿಕೊಪ್ಪಲು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಎಚ್.ಬಿ.ಬಸವೇಶ್ ಮಾತನಾಡಿ, ಖಾತೆ ಬದಲಾವಣೆ ಸಂಬಂಧ ದಾಖಲಾತಿ ನೀಡುವಂತೆ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿ ನಾಲ್ಕು ತಿಂಗಳು ಕಳೆದರೂ ದಾಖಲೆಗಳನ್ನು ನೀಡಿಲ್ಲ. ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದು ಖಚಿತವಾಗಿದೆ ಎಂದರು.

ತಹಸೀಲ್ದಾರ್, ರಾಜಸ್ವ ನಿರೀಕಕ್ಷ, ಸರ್ವೆಯರ್ ಸೇರಿದಂತೆ ತಪ್ಪಿಸ್ಥ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು.

ತಹಸೀಲ್ದಾರ್ ಎಸ್.ವಿ.ಲೋಕೇಶ್ 2025ರ ಮೇನಲ್ಲಿ ಶ್ರೀಮತಿ ಅವರ ಹೆಸರಿಗೆ ಖಾತೆ ಮಾಡಲು ಆದೇಶ ಮಾಡಿದ್ದಾರೆ. ಆದರೆ, 2025ರ ಡಿಸೆಂಬರ್‌ನಲ್ಲಿ ಬಿ.ಪಿ.ರಾಧಾ ಅವರಿಗೆ ನೋಟೀಸ್ ನೀಡಿ ವಿಚಾರಣೆ ಕರೆದಿರುವುದು ವಿಪರ್ಯಾಸ. ಇದರಲ್ಲಿಯೇ ಕಾಣುತ್ತದೆ ಇದೊಂದು ಅಕ್ರಮ ಖಾತೆ ಪ್ರಕರಣ ಎಂದು ಆಕ್ರೋಶ ಹೊರ ಹಾಕಿದರು.