ಶಾಲೆ ಅಭಿವೃದ್ಧಿಗೆ ನನ್ನ ಶಾಲೆ ನನ್ನ ಜವಾಬ್ದಾರಿ ಯೋಜನೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ

| Published : Sep 14 2024, 01:59 AM IST / Updated: Sep 14 2024, 09:34 AM IST

ಸಾರಾಂಶ

ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರಿ ಶಾಲೆಗಳಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ನನ್ನ ಶಾಲೆ-ನನ್ನ ಜವಾಬ್ದಾರಿ ಎಂಬ ವಿಶಿಷ್ಟ ಯೋಜನೆ

 ಬೆಳಗಾವಿ :  ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರಿ ಶಾಲೆಗಳಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ನನ್ನ ಶಾಲೆ-ನನ್ನ ಜವಾಬ್ದಾರಿ ಎಂಬ ವಿಶಿಷ್ಟ ಯೋಜನೆಯನ್ನು ಸರ್ಕಾರ ರೂಪಿಸಿದ್ದು, ಶಿಕ್ಷಕರು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಲಹೆ ನೀಡಿದರು.

ಬೆಳಗಾವಿಯ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ ಮತ್ತು ಸಾರ್ವಜನಿಕರು ಒಟ್ಟಿಗೆ ಸೇರಿದರೆ ಸಮಾಜ ಅಥವಾ ಶಾಲೆಯನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಶಿಕ್ಷಣ ವಲಯದ ಅಭ್ಯುದಯಕ್ಕೆ ಈ ವಿಶೇಷ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ. ಶಾಲಾಭಿವೃದ್ಧಿಗೆ ಇದೊಂದು ವಿನೂತನ ಚಿಂತನೆಯಾಗಿದೆ. ವ್ಯಾಸಂಗ ಮಾಡಿದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡಲು ಹಿರಿಯ ವಿದ್ಯಾರ್ಥಿಗಳಿಗೆ ಜವಾಬ್ದಾರಿ ನೀಡುವುದು, ಈ ಕಾರ್ಯಕ್ರಮದ ಉದ್ದೇಶ ಎಂದರು.

ನಮ್ಮ ಸರ್ಕಾರಿ ಶಾಲೆಗಳು ಸಾಕಷ್ಟು ಮಹಾನ್ ವ್ಯಕ್ತಿಗಳನ್ನು ರೂಪಿಸಿವೆ. ಸರ್ಕಾರಿ ಶಾಲೆಗಳಲ್ಲಿ ಓದಿದ ಅನೇಕರು ಉದ್ಯಮಿಗಳಾಗಿದ್ದು, ಅನೇಕರು ಉತ್ತಮ ಉದ್ಯೋಗದಲ್ಲಿದ್ದಾರೆ. ದೇಶ -ವಿದೇಶಗಳಲ್ಲಿ ನೆಲೆಸಿದ್ದಾರೆ. ಅವರಿಗೆಲ್ಲ ತಾವು ಕಲಿತ ಶಾಲೆಗೆ ಏನನ್ನಾದರೂ ಕೊಡುಗೆ ಕೊಡಬೇಕೆಂಬ ಆಸಕ್ತಿ ಇದ್ದರೂ ಯಾವ ರೀತಿ ಸಹಾಯ ಮಾಡಬೇಕು ಎನ್ನುವುದು ತಿಳಿದಿಲ್ಲ. ಹಾಗಾಗಿ, ತಾವು ಓದಿದ ಶಾಲೆಯ ಸ್ಥಿತಿಗತಿ ತಿಳಿದು ಯಾವ ರೀತಿ ಅಭಿವೃದ್ಧಿ ಮಾಡಬಹುದು ಎಂಬುದರ ಕುರಿತು ಸಲಹೆ ನೀಡಬಹುದು. ಅದಕ್ಕೆ ಬೇಕಾದ ಪೂರಕ ಸಹಾಯವನ್ನು ಹಿರಿಯ ವಿದ್ಯಾರ್ಥಿಗಳು ಮಾಡಬಹುದಾಗಿದೆ. ತಂದೆ- ತಾಯಿಯವರ ಹೆಸರಿನಲ್ಲಿ ಶಾಲಾ ಕಟ್ಟಡ, ಕೊಠಡಿ ಕಟ್ಟಿಸುವುದು ಸೇರಿದಂತೆ ಇನ್ನಿತರ ರೀತಿಯಲ್ಲಿ ತಾವು ಕಲಿತ ಶಾಲೆಗೆ ಸಹಾಯ ಮಾಡಲು ದಾನಿಗಳನ್ನು ಶಿಕ್ಷಕರು ಉತ್ತೇಜಿಸಬೇಕಿದೆ ಎಂದು ಹೇಳಿದರು.

ಭೂತರಾಮನಹಟ್ಟಿ ಮುಕ್ತಿಮಠದ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಾರ್ವಶಿಕ್ಷಣ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಲೀಲಾವತಿ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ದಾಸಪ್ಪನವರ, ಬಿಆರ್ಸಿ ಎಂ.ಎಸ್. ಮೇದಾರ, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಮು ಗೂಗವಾಡ, ಡಯಟ್ ನ ಪ್ರಾಂಶುಪಾಲ ಬಸವರಾಜ ನಾಲತವಾಡ, ರಮೇಶ ಗೋಣಿ, ಡಾ.ಎಚ್.ಐ. ತಿಮ್ಮಾಪುರ, ಶಿಕ್ಷಕರ ಮತ್ತು ಶಿಕ್ಷಕಿಯರ ಸಂಘದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ವೇಳೆ ಸಚಿವರು, ಶೈಕ್ಷಣಿಕ ಜಿಲ್ಲೆಯಲ್ಲಿ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ಅಡುಗೆ ಸಹಾಯಕಿಯರಿಗೆ ಸ್ವ ಸಹಾಯ ಸಂಘಗಳು ತಯಾರಿಸಿದ ಸಮವಸ್ತ್ರಗಳನ್ನು ವಿತರಿಸಿದರು. ಜೊತೆಗೆ ಸಾಧನೆಗೈದ ಶಾಲೆಗಳ ಮುಖ್ಯಶಿಕ್ಷಕರನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಗೌರವಿಸಿದರು.ನಮ್ಮ ಶಿಕ್ಷಕರು ಕಲಿಸಿದ ಜ್ಞಾನ, ಕೌಶಲ್ಯದಿಂದಾಗಿ ಅನೇಕರು ವಿಜ್ಞಾನಿ, ತಂತ್ರಜ್ಞಾನಿಗಳಾಗಿ, ಚಂದ್ರಯಾನಕ್ಕೂ ಶಿಕ್ಷಕರೇ ಕಾರಣರಾಗಿದ್ದಾರೆ. ಶಿಕ್ಷಕರು ತಮ್ಮ ಮಕ್ಕಳ ಕಾಳಜಿಗಿಂತ ತಮ್ಮ ವಿದ್ಯಾರ್ಥಿಗಳ ಮೇಲೆ ಹೆಚ್ಚು ಕಾಳಜಿ ತೋರಿಸುತ್ತಾರೆ. ಬಾಲ್ಯದಲ್ಲೇ ಮಕ್ಕಳಿಗೆ ಮುಂದೆ ವಿಜ್ಞಾನಿಯಾಗು, ಸಮಾಜಕ್ಕೆ ದೊಡ್ಡ ವ್ಯಕ್ತಿಯಾಗು ಎಂದೆಲ್ಲ ಪ್ರೋತ್ಸಾಹಿಸುತ್ತಾರೆ. ಇದರ ಪರಿಣಾಮವೇ ಇಂದು ಭಾರತ ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಭಾರತ ಇಷ್ಟೊಂದು ಸದೃಢವಾಗಲು, ಅಭಿವೃದ್ಧಿಯಲ್ಲಿ ಮುಂದಿರಲು ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು.

- ಲಕ್ಷ್ಮೀ ಹೆಬ್ಬಾಳಕರ ಸಚಿವೆ