ಸಾರಾಂಶ
ಚಂದ್ರಶೇಖರ ಶಾರದಾಳ
ಕನ್ನಡಪ್ರಭ ವಾರ್ತೆ ಕಲಾದಗಿಬಾಗಲಕೋಟೆ ತಾಲೂಕಿನ 6 ಗ್ರಾಮಗಳ 1142 ಹೆಕ್ಟೇರ್ ಪ್ರದೇಶವನ್ನು ನೀರಾವರಿಗೆ ಒಳಪಡಿಸುವ ಕಳಸಕೊಪ್ಪ ಕೆರೆ ಮೈದುಂಬಿಕೊಂಡು ನೋಡುಗರ ಕಣ್ಮನ ಸೆಳೆಯುತ್ತಿದೆ. ಮಂಗಳವಾರ ಸಂಜೆ ಸಂಪೂರ್ಣ ತುಂಬಿ ಕೋಡಿ ಬೀಳುತ್ತಿರುವ ಸುಂದರ ದೃಶ್ಯ ನೋಡಲು ಸುತ್ತಲಿನ ರೈತರು ಆಗಮಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ವರ್ಷ ಬರಗಾಲ ಬಿದ್ದು ಸರಿಯಾಗಿ ಬೆಳೆಗಳು ಬಾರದೇ ರೈತರು ತೀವ್ರ ಆರ್ಥಿಕ ಸಂಕಷ್ಟ ಒಳಗಾಗಿ ತೊಂದರೆ ಅನುಭವಿಸಿದ್ದರು. ಅಲ್ಲದೆ, ಕೊಳವೆ ಬಾವಿಗಳು ಬತ್ತಿ ಬರಿದಾಗಿದ್ದವು. ರೈತರ ಬೆಳೆಗಳು ಒಣಗಿ ಹಾನಿಯಾಗಿತ್ತು. ಕಲಾದಗಿ ಭಾಗದಲ್ಲಿ ಮುಂಗಾರು ಮಳೆ ನಿರೀಕ್ಷೆ ಪ್ರಮಾಣದಲ್ಲಿ ಆಗದೆ ಬೆಳೆಗಳು ಒಣಗುವ ಹಂತ ತಲುಪಿದ್ದವು. ಆದರೆ ಈ ಬಾರಿ ಮೂರು ವಾರ ಮುಂಚಿತವಾಗಿ ಕೆರೆಗೆ ನೀರು ತುಂಬಿಸಲು ಶಾಸಕರು ಬಹು ಬೇಗ ಚಾಲನೆ ನೀಡಿದ್ದರು. ಕೆರೆಗೆ ನೀರು ತುಂಬಿಸಿದಲ್ಲಿ ಅಂತರ್ಜಲ ಮಟ್ಟ ಹೆಚ್ಚಿ ಕೊಳವೆಬಾವಿಗಳು ಮರುಜೀವ ಪಡೆದು ರೈತರಿಗೆ ಅನುಕೂಲವಾಗಲಿದೆ. ಇದರಿಂದ ಬೆಳೆಗಳಿಗೂ ಸೂಕ್ತ ಸಂದರ್ಭದಲ್ಲಿ ನೀರು ಕೂಡ ಸಿಗಲಿದೆ.ಕೆರೆ ತುಂಬಲು 95 ದಿನ:
ಬೇಹತ್ ಕಾಲುವೆ ಮೂಲಕ ಕಲಾದಗಿ ಬಳಿಯ ಜಾಕ್ವೆಲ್ ಪಂಪ್ ಹೌಸ್ ಮೂಲಕ ಈ ವರ್ಷ ಜು.14ರಂದು ಕೆರೆಗೆ ನೀರು ತುಂಬಲು ಚಾಲನೆ ನೀಡಲಾಗಿತ್ತು. ಈ ಬಾರಿ ಕೆರೆ ತುಂಬಲು 3 ತಿಂಗಳು 3 ದಿವಸ ಅಂದರೆ ಒಟ್ಟು 95 ದಿನಗಳನ್ನು ತೆಗೆದುಕೊಂಡಿದೆ. ಪ್ರಸಕ್ತ ವರ್ಷ ಮಳೆ ತುಸು ಉತ್ತಮವಾಗಿ ಸುರಿದಿದ್ದರಿಂದ ಕೆರೆಯು ಶೀಘ್ರ ತುಂಬಿಕೊಳ್ಳಲು ಕಾರಣವಾಗಿದೆ.60 ವರ್ಷದ ಹಿಂದೆ ಬರ ಕಾಮಗಾರಿಯಲ್ಲಿ ಹಮ್ಮಿಕೊಂಡಿದ್ದ ಕಾಮಗಾರಿ ಇಂದು ಈ ಭಾಗದ ನೀರಿನ ಬರ ನಿರ್ಮೂಲನೆ ಮಾಡಿದೆ ಎನ್ನುವ ಮಾತನ್ನು ಈ ಭಾಗದ ರೈತರು ಮಾತನಾಡಿಕೊಳ್ಳುತ್ತಿದ್ದಾರೆ. ಅಂದು ಕೈಗೊಂಡ ಕೆರೆ ನಿರ್ಮಾಣ ಇಂದು ಅದರ ಸಂಪೂರ್ಣ ಲಾಭ ಪಡೆದಂತಾಗಿದೆ. 1957ರಲ್ಲಿ ಕಾಮಗಾರಿ ಆರಂಭಿಸಿ 1960ರಲ್ಲಿ ಪೂರ್ಣಗೊಳಿಸಲಾಯಿತು. ಕೆರೆ ಕಟ್ಟೆಯ ಎತ್ತರ 57 ಅಡಿಗಳಷ್ಟಿದ್ದು, ಉದ್ದ 1616 ಅಡಿ, ಮೇಲಗಲ 12 ಅಡಿ ಅಗಲ ಹೊಂದಿದೆ, ಕೆಳ ಅಗಲ 228 ಅಡಿಗಳಷ್ಟಿದೆ.
ಝರಿಯಂತಾದ ಕೋಡಿ:ಬಾಗಲಕೋಟೆ ತಾಲೂಕಿನ 1142 ಹೆಕ್ಟೇರ್ ಪ್ರದೇಶವನ್ನು ನೀರಾವರಿಗೆ ಒಳಪಡಿಸುವ ಕಳಸಕೊಪ್ಪ ಕೆರೆ 200 ಹೆಕ್ಟೇರ್ ಪ್ರದೇಶವನ್ನು ಮುಳುಗಡೆಯಾಗಿಸಿದೆ. ನೀರು ತುಂಬಿ ಹೊರ ಚೆಲ್ಲುವ ಕೋಡಿ 909 ಅಡಿ ಉದ್ದವಿದ್ದು, ಕೋಡಿ ನೀರು ಹೊರ ಬೀಳುತ್ತಿರುವುದರಿಂದ ಸಣ್ಣ ಝರಿ, ಜಲಪಾತ ವೀಕ್ಷಿಸಿದ ಅನುಭವ ಉಂಟು ಮಾಡುತ್ತಿದೆ.
0.24 ಟಿಎಂಸಿ ನೀರು:ಕೆರೆ ನೀರು ನಿಲ್ಲುವ ಎತ್ತರ 5.4 ಮೀಟರನಷ್ಟಿದ್ದು, 17.8 ಅಡಿ ನೀರು ಸಂಗ್ರಹಣಾ ಸಾಮರ್ಥ ಇದ್ದು ನೀರಿನ ಮಟ್ಟ 5.4 ಮೀ.ನಷ್ಟು ತುಂಬಿಕೊಂಡು 17.8 ಅಡಿ ತುಂಬಿಕೊಂಡಿದೆ. ಒಟ್ಟು 0.24 ಟಿಎಂ.ಸಿ ನೀರು ಸಂಗ್ರಹಗೊಂಡಿದೆ.