ಸಾರಾಂಶ
ಎಲ್ಲರಿಗೂ ಸರ್ಕಾರಿ ಉದ್ಯೋಗ ದೊರೆಯಲು ಸಾಧ್ಯವಿಲ್ಲ. ಹೀಗಾಗಿ ಸ್ವಉದ್ಯೋಗ ಪ್ರಾರಂಭಿಸಿ,
ಕನ್ನಡಪ್ರಭ ವಾರ್ತೆ ಮೈಸೂರು
ಮಹಿಳೆಯರಲ್ಲಿ ಈಗ ಸೌಂದರ್ಯಪ್ರಜ್ಞೆ ಹೆಚ್ಚುತ್ತಿದ್ದು, ಬ್ಯೂಟಿಷಿಯನ್ ಮತ್ತು ಹೊಲಿಗೆ ವೃತ್ತಿಗೆ ಸಮಾಜದಲ್ಲಿ ಉತ್ತಮ ಅವಕಾಶಗಳು ದೊರೆಯುತ್ತಿವೆ ಎಂದು ಅಖಿಲ ಭಾರತೀಯ ವೀರಶೈವ ಮಹಾಸಭಾ ಮೈಸೂರು ಜಿಲ್ಲಾ ಘಟಕ ನಿರ್ದೇಶಕಿ ನಾಗಜ್ಯೋತಿ ತಿಳಿಸಿದರು.ಕುವೆಂಪುನಗರ ಆದಿಚುಂಚನಗಿರಿ ರಸ್ತೆಯಲ್ಲಿರುವ ಕರುಣೆ ಸೇವಾ ಟ್ರಸ್ಟ್ ಸೋಮವಾರ ಆಯೋಜಿಸಿದ್ದ ವಿಶ್ವ ಸೌಂದರ್ಯ ದಿನಾಚರಣೆಯಲ್ಲಿ ಬ್ಯೂಟಿಷಿಯನ್ ತರಬೇತಿದಾರರನ್ನು ಸನ್ಮಾನಿಸಿ ಮಾತನಾಡಿದ ಅವರು, ಎಲ್ಲರಿಗೂ ಸರ್ಕಾರಿ ಉದ್ಯೋಗ ದೊರೆಯಲು ಸಾಧ್ಯವಿಲ್ಲ. ಹೀಗಾಗಿ ಸ್ವಉದ್ಯೋಗ ಪ್ರಾರಂಭಿಸಿ, ಸಮಾಜದ ಇನ್ನಷ್ಟು ಮಂದಿಗೆ ಉದ್ಯೋಗ ನೀಡುವ ಮೂಲಕ ಮಾದರಿ ಆಗಿರಬೇಕು ಎಂದರು.
ಹೆಣ್ಣು ಮಕ್ಕಳಿಗೆ ತಾನು ಸುಂದರವಾಗಿರಬೇಕೆನ್ನುವ ಹಂಬಲವಿದೆ. ದೇವರು ಕೊಟ್ಟ ನಮ್ಮ ರೂಪಕ್ಕೆ ಮೆರುಗು ಕೊಡುವ ಕೆಲಸ ಬ್ಯೂಟಿ ಪಾರ್ಲರ್ ಗಳ ಮೂಲಕ ನಡೆಯುತ್ತಿದೆ. ತಾನು ಕಲಿತ ವಿದ್ಯೆಯನ್ನು ಆಧರಿಸಿ ಸ್ವ ಉದ್ಯೋಗ ಆರಂಭಿಸಿರುವ ಮಹಿಳೆಯರ ಸಾಧನೆಯನ್ನು ಅವರು ಶ್ಲಾಘಿಸಿದರು.ನಗರ ಪಾಲಿಕೆ ಮಾಜಿ ಸದಸ್ಯ ಪ್ರಮೀಳಾ ಭರತ್ ಮಾತನಾಡಿ, ಮಹಿಳೆಯರು ಬ್ಯೂಟಿಷಿಯನ್ ಕೇಂದ್ರಗಳನ್ನು ತೆರೆದು ಮಹಿಳೆಯರು ಮತ್ತು ಮಕ್ಕಳಿಗೆ ಕೇಶ ವಿನ್ಯಾಸ- ಮೆಹಂದಿ ಹಾಕುವ ಮೂಲಕ ಹೊಸ ರೂಪ ನೀಡಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಬ್ಯೂಟಿಷಿಯನ್ ಮಾರ್ಗ ಸಹಕಾರಿಯಾಗಿದೆ ಎಂದು ಹೇಳಿದರು.
ಇದೇ ವೇಳೆ ಬ್ಯೂಟಿಷಿಯನ್ ತರಬೇತಿದಾರರಾದ ಪ್ರಮೀಳಾ ಭರತ್, ರಾಧಿಕಾ, ಉಮಾ ಜಾದವ್, ಶಾಂತಗೌಡ, ಶಶಿಕಲಾ, ಪೃಥ ಬಿಕ್ಕೆಮನೆ ಅವರನ್ನು ಸನ್ಮಾನಿಸಲಾಯಿತು.ಅಥರ್ವ ಫೌಂಡೇಶನ್ ಅಧ್ಯಕ್ಷೆ ಪುಷ್ಪಲತಾ, ಪತ್ರಕರ್ತೆ ಸಹನಾ, ಕರುಣೆ ಸೇವಾ ಟ್ರಸ್ಟ್ ಅಧ್ಯಕ್ಷೆ ರುಕ್ಮಿಣಿ, ಸವಿತಾ, ಅನುಷಾ, ಚಾರುಲತಾ, ಪ್ರಿಯಾಂಕಾ ಮೊದಲಾದವರು ಇದ್ದರು.