ಸಾರಾಂಶ
ಎಲ್ಲರಿಗೂ ಸಮಾನತೆ ಪ್ರತಿಪಾದಿಸಿದ ಅಂಬೇಡ್ಕರ್ ಅವರ ಬಗ್ಗೆ ಒಂದು ಸಮುದಾಯಕ್ಕೆ ಏಕೆ ಅಷ್ಟೊಂದು ಅಸಹನೆ ಎಂಬುದು ತಿಳಿಯುತ್ತಿಲ್ಲ. ಹಲ್ಲರೆ ಗ್ರಾಮದಲ್ಲಿ ದಾಳಿಯಂತಹ ಘಟನೆ ನಡೆಯಲು ಬಿಜೆಪಿ ಕೈವಾಡ ಇದ್ದರೂ ಇರಬಹುದು. ಅಲ್ಲದೆ ಅಲ್ಲಿನ ಗ್ರಾಪಂ ಕೂಡ ಬೇಜವಾಬ್ದಾರಿಯಿಂದ ವರ್ತಿಸಿದೆ. ಆದ್ದರಿಂದ ಪಿಡಿಒ ವಿರುದ್ಧ ತಾಪಂ ಇಒ ಕ್ರಮ ಕೈಗೊಳ್ಳಬೇಕು
-ಮಾಜಿ ಮೇಯರ್- ಪುರುಷೋತ್ತಮ್
---ಕನ್ನಡಪ್ರಭ ವಾರ್ತೆ ಮೈಸೂರು
ನಂಜನಗೂಡು ತಾಲೂಕು ಹಲ್ಲರೆ ಗ್ರಾಮದಲ್ಲಿ ಪ.ಜಾತಿ ಸಮುದಾಯದವರ ಮೇಲೆ ಪ.ಪಂಗಡದವರು ನಡೆಸಿದ ದೌರ್ಜನ್ಯ ನಾಗರೀಕ ಸಮಾಜ ತಲೆತಗ್ಗಿಸುವ ಘಟನೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ಹೇಳಿದರು.ಎಲ್ಲರಿಗೂ ಸಮಾನತೆ ಪ್ರತಿಪಾದಿಸಿದ ಅಂಬೇಡ್ಕರ್ ಅವರ ಬಗ್ಗೆ ಒಂದು ಸಮುದಾಯಕ್ಕೆ ಏಕೆ ಅಷ್ಟೊಂದು ಅಸಹನೆ ಎಂಬುದು ತಿಳಿಯುತ್ತಿಲ್ಲ. ಹಲ್ಲರೆ ಗ್ರಾಮದಲ್ಲಿ ದಾಳಿಯಂತಹ ಘಟನೆ ನಡೆಯಲು ಬಿಜೆಪಿ ಕೈವಾಡ ಇದ್ದರೂ ಇರಬಹುದು. ಅಲ್ಲದೆ ಅಲ್ಲಿನ ಗ್ರಾಪಂ ಕೂಡ ಬೇಜವಾಬ್ದಾರಿಯಿಂದ ವರ್ತಿಸಿದೆ. ಆದ್ದರಿಂದ ಪಿಡಿಒ ವಿರುದ್ಧ ತಾಪಂ ಇಒ ಕ್ರಮ ಕೈಗೊಳ್ಳಬೇಕು ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಗ್ರಾಪಂನಲ್ಲಿ ನಾಮಫಲಕಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಪಾಲ್ಗೊಳ್ಳದ ಸವರ್ಣೀಯ ಗ್ರಾಪಂ ಸದಸ್ಯರ ಸದಸ್ಯತ್ವ ರದ್ದುಗೊಳಿಸಬೇಕು. ಜೊತೆಗೆ ಹಲ್ಲರೆ ಗ್ರಾಪಂ ಮಾಜಿ ಅಧ್ಯಕ್ಷರು ಅಂಬೇಡ್ಕರ್ ಅವರನ್ನು ಅಪಮಾನಿಸುವ ಹೇಳಿಕೆ ನೀಡಿದ್ದಾರೆ. ಹೀಗಾಗಿ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಅಲ್ಲಿನ ಗ್ರಾಪಂ ಆಡಳಿತ ಮಂಡಳಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು, ಎಸ್.ಸಿ ಸಮುದಾಯದವರಿಗೆ ಆಗಿರುವ ನಷ್ಟ ಭರಿಸಬೇಕು. ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು, ಇಂತಹ ದುಷ್ಕೃತ್ಯ ಮತ್ತೆ ಜರುಗದಂತೆ ನೋಡಿಕೊಳ್ಳಬೇಕು. ಶಾಂತಿಸಭೆ ಹೆಸರಿನಲ್ಲಿ ದೌರ್ಜನ್ಯ ಮುಚ್ಚಿ ಹಾಕುವ ಯತ್ನ ನಡೆಸಬಾರದು ಎಂದು ಅವರು ಆಗ್ರಹಿಸಿದರು.
ಶೀಘ್ರದಲ್ಲೇ ಈ ಮಾನವ ವಿರೋಧೀ ಕೃತ್ಯ ಖಂಡಿಸಿ ನಂಜನಗೂಡಿನಿಂದ ಹಲ್ಲರೆಗೆ ಶಾಂತಿ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸೋಮಯ್ಯ ಮಲಿಯೂರು, ದೇವಗಳ್ಳಿ ಸೋಮಶೇಖರ್, ಸತೀಶ್, ಪ್ರದೀಪ್ ಕುಮಾರ್, ವಿಷಕಂಠ ಇದ್ದರು.