ಸತತ ಎರಡನೇ ಬಾರಿ ನೇರ ಹೋರಾಟಕ್ಕೆ ಕಣ ಸಜ್ಜು

| Published : Mar 17 2024, 01:48 AM IST

ಸಾರಾಂಶ

ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಕಾಂಗ್ರೆಸ್ ಮತ್ತು ಇತರರ ನಡುವೆ ಹೋರಾಟ. ಜನತಾಪಕ್ಷ ರಚನೆಯ ನಂತರ ಕಾಂಗ್ರೆಸ್ ಮತ್ತು ಜನತಾಪಕ್ಷದ ನಡುವೆ ಹೋರಾಟ. ಬಿಜೆಪಿ 1980 ರಲ್ಲಿ ಅಸ್ತಿತ್ವಕ್ಕೆ ಬಂದ ನಂತರ 1989ರ ಚುನಾವಣೆಯಲ್ಲಿ ಮೈಸೂರಿನಿಂದ ಮಾತ್ರ ಕಣಕ್ಕಳಿದಿತ್ತು. ಆಗಿನ ಅಭ್ಯರ್ಥಿ ತೋಂಟದಾರ್ಯ ಅವರು ಪಡೆದಿದ್ದು 25,398 ಮತಗಳು ಮಾತ್ರ.

- ಮೈಸೂರು, ಚಾಮರಾಜನಗರ ಕ್ಷೇತ್ರ-

1ಎ- ಮೈಸೂರು ಲೋಕಸಭಾ ಕ್ಷೇತ್ರ

1ಸಿ- ಚಾಮರಾಜನಗರ ಲೋಕಸಭಾ ಕ್ಷೇತ್ರ

---

ಅಂಶಿ ಪ್ರಸನ್ನಕುಮಾರ್

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಸಾಮಾನ್ಯ ಹಾಗೂ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸತತ ಎರಡನೇ ಬಾರಿಗೆ ನೇರ ಹೋರಾಟಕ್ಕೆ ಕಣ ಸಜ್ಜಾಗುತ್ತಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯುತ್ತಿವೆ.

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಿದ್ದವು. ಈ ಬಾರಿ ಪರಿಸ್ಥಿತಿ ಸಂಪೂರ್ಣ ಉಲ್ಟಾಪಲ್ಟಾ!.

ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಕಾಂಗ್ರೆಸ್ ಮತ್ತು ಇತರರ ನಡುವೆ ಹೋರಾಟ. ಜನತಾಪಕ್ಷ ರಚನೆಯ ನಂತರ ಕಾಂಗ್ರೆಸ್ ಮತ್ತು ಜನತಾಪಕ್ಷದ ನಡುವೆ ಹೋರಾಟ. ಬಿಜೆಪಿ 1980 ರಲ್ಲಿ ಅಸ್ತಿತ್ವಕ್ಕೆ ಬಂದ ನಂತರ 1989ರ ಚುನಾವಣೆಯಲ್ಲಿ ಮೈಸೂರಿನಿಂದ ಮಾತ್ರ ಕಣಕ್ಕಳಿದಿತ್ತು. ಆಗಿನ ಅಭ್ಯರ್ಥಿ ತೋಂಟದಾರ್ಯ ಅವರು ಪಡೆದಿದ್ದು 25,398 ಮತಗಳು ಮಾತ್ರ.

1991 ರಲ್ಲಿ ಮೈಸೂರಿನಿಂದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ಚಾಮರಾಜನಗರದಿಂದ ಎಲ್. ಶಿವಲಿಂಗಯ್ಯ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಕ್ರಮವಾಗಿ 2,18,999 (ದ್ವಿತೀಯ), 1,48,456 (ತೃತೀಯ) ಮತಗಳನ್ನು ಗಳಿಸಿದ್ದರು.

1996 ರಲ್ಲಿ ಚಾಮರಾಜನಗರದಲ್ಲಿ ಎಲ್. ಶಿವಲಿಂಗಯ್ಯ-94,373 (ನಾಲ್ಕನೇ), ಮೈಸೂರಿಲ್ಲಿ ತೋಂಟದಾರ್ಯ- 1,62,620 (ತೃತೀಯ) ಸ್ಥಾನ ಗಳಿಸಿದ್ದರು.

1998 ರಲ್ಲಿ ಮೈಸೂರಿನಲ್ಲಿ ಬಿಜೆಪಿಯ ಸಿ.ಎಚ್. ವಿಜಯಶಂಕರ್ ಮೊದಲ ಬಾರಿಗೆ ಆಯ್ಕೆಯಾದರು. ಅದೇ ವರ್ಷ ಚಾಮರಾಜನಗರದಲ್ಲಿ ಬಿಜೆಪಿಯ ಮಿತ್ರಪಕ್ಷ ಲೋಕಶಕ್ತಿಯ ಸುಶೀಲಾ ಕೇಶವಮೂರ್ತಿ- 75,165 (ತೃತೀಯ) ಮತ ಗಳಿಸಿದ್ದರು.

1999 ರಲ್ಲಿ ಚಾಮರಾಜನಗರದಲ್ಲಿ ಬಿಜೆಪಿ ಬೆಂಬಲಿತ ಜೆಡಿಯುನ ವಿ. ಶ್ರೀನಿವಾಸಪ್ರಸಾದ್ ಆಯ್ಕೆಯಾದರು,. ಮೈಸೂರಿನಲ್ಲಿ ಬಿಜೆಪಿಯ ಸಿ.ಎಚ್. ವಿಜಯಶಂಕರ್- 3,24,620 ಮತಗಳನ್ನು ಪಡೆದು ಸೋತರು.

2004 ರಲ್ಲಿ ಮೈಸೂರಿನಲ್ಲಿ ಬಿಜೆಪಿಯ ಸಿ.ಎಚ್. ವಿಜಯಶಂಕರ್ ಆಯ್ಕೆಯಾದರು. ಚಾಮರಾಜನಗರದಲ್ಲಿ ಬಿಜೆಪಿ ಮಿತ್ರ ಪಕ್ಷ ಜೆಡಿಯುನ ಎನ್. ಚಾಮರಾಜು- 91,716 ಮತ ಪಡೆದರು.

2009 ರಲ್ಲಿ ಮೈಸೂರಿನಲ್ಲಿ ಬಿಜೆಪಿಯ ಸಿ.ಎಚ್. ವಿಜಯಶಂಕರ್- 3,47,119 (ದ್ವಿತೀಯ), ಚಾಮರಾಜನಗರದಲ್ಲಿ ಎ.ಆರ್. ಕೃಷ್ಣಮೂರ್ತಿ - 3,65,968 (ದ್ವಿತೀಯ) ಸ್ಥಾನ ಪಡೆದರು.

2014 ರಲ್ಲಿ ಮೈಸೂರಿನಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ಗೆದ್ದರು. ಚಾಮರಾಜನಗರದಲ್ಲಿ ಬಿಜೆಪಿಯ ಎ.ಆರ್. ಕೃಷ್ಣಮೂರ್ತಿ- 4,26,600 (ದ್ವಿತೀಯ) ಸ್ಥಾನ ಗಳಿಸಿದ್ದರು.

2019 ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಬಿಜೆಪಿ ವಿರುದ್ಧ ನೇರ ಹೋರಾಟ ನಡೆಸಿದ್ದವು.

ಆದರೂ ಎರಡು ಕಡೆಯೂ ಬಿಜೆಪಿಯ ಗೆದ್ದಿತು. ಚಾಮರಾಜನಗರವನ್ನು ವಿ. ಶ್ರೀನಿವಾಸಪ್ರಸಾದ್, ಮೈಸೂರನ್ನು ಪ್ರತಾಪಸಿಂಹ ಪ್ರತಿನಿಧಿಸುತ್ತಿದ್ದಾರೆ. ಈ ಬಾರಿ ಶ್ರೀನಿವಾಸಪ್ರಸಾದ್ ಸ್ಪರ್ಧಿಸುತ್ತಿಲ್ಲ. ಅಲ್ಲಿ ಮಾಜಿ ಶಾಸಕ ಎಸ್. ಬಾಲರಾಜ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಅದೇ ರೀತಿ ಮೈಸೂರಿನಲ್ಲಿ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಿ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ನೀಡಲಾಗಿದೆ.

ಎರಡು ಕಡೆಯೂ ಕಾಂಗ್ರೆಸ್ ಅಭ್ಯರ್ಥಿಗಳು ಅಂತಿಮವಾಗಿಲ್ಲ. ಮೈಸೂರಿನಲ್ಲಿ ಎಂ. ಲಕ್ಷ್ಮಣ, ಡಾ.ಬಿ.ಜೆ. ವಿಜಯಕುಮಾರ್, ಡಾ, ಶುಶ್ರೂತ್ ಗೌಡ, ಡಾ.ಯತೀಂದ್ರ ಸಿದ್ದರಾಮಯ್ಯ, ಚಾಮರಾಜನಗರದಲ್ಲಿ ಸುನಿಲ್ ಬೋಸ್, ದರ್ಶನ್ ಧ್ರುವನಾರಾಯಣ, ಜಿ.ಎನ್. ನಂಜುಂಡಸ್ವಾಮಿ ಮತ್ತಿತರ ಹೆಸರುಗಳಿವೆ.

----------

ಮೈಸೂರು- ಈವರೆಗೆ ಗೆದ್ದಿರುವವರು

ಫೋಟೋ 1ಬಿ

---

1952- ದ್ವಿಸದಸ್ಯ ಕ್ಷೇತ್ರ- ಎಂ.ಎಸ್. ಗುರುಪಾದಸ್ವಾಮಿ (ಕೆಎಂಪಿಪಿ), ಎನ್. ರಾಚಯ್ಯ ( ಕಾಂಗ್ರೆಸ್)

1957- ದ್ವಿಸದಸ್ಯ ಕ್ಷೇತ್ರ- ಎಂ. ಶಂಕರಯ್ಯ, ಎಸ್.ಎಂ. ಸಿದ್ದಯ್ಯ (ಇಬ್ಬರೂ ಕಾಂಗ್ರೆಸ್)

1962- ಎಂ. ಶಂಕರಯ್ಯ ( ಕಾಂಗ್ರೆಸ್)

1962- ಎಚ್.ಡಿ. ತುಳಸೀದಾಸ್ (ಕಾಂಗ್ರೆಸ್)

1971- ಎಚ್.ಡಿ. ತುಳಸೀದಾಸ್ ( ಕಾಂಗ್ರೆಸ್)

1977- ಎಚ್.ಡಿ. ತುಳಸೀದಾಸ್ (ಕಾಂಗ್ರೆಸ್)

1980- ಎಂ. ರಾಜಶೇಖರಮೂರ್ತಿ (ಕಾಂಗ್ರೆಸ್-ಐ)

1984- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ( ಕಾಂಗ್ರೆಸ್)

1989- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್)

1991- ಚಂದ್ರಪ್ರಭ ಅರಸು ( ಕಾಂಗ್ರೆಸ್)

1996- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್)

1998- ಸಿ.ಎಚ್. ವಿಜಯಶಂಕರ್ (ಬಿಜೆಪಿ)

1999- ಶ್ರೀಕಂಠದತ್ತನರಸಿಂಹರಾಜ ಒಡೆಯರ್ ( ಕಾಂಗ್ರೆಸ್)

2004- ಸಿ.ಎಚ್. ವಿಜಯಶಂಕರ್ (ಬಿಜೆಪಿ)

2009- ಎಚ್. ವಿಶ್ವನಾಥ್ (ಕಾಂಗ್ರೆಸ್)

2014- ಪ್ರತಾಪ್ಸಿಂಹ (ಬಿಜೆಪಿ)

2019- ಪ್ರತಾಪ್ ಸಿಂಹ (ಬಿಜೆಪಿ)

-----

ಚಾಮರಾಜನಗರ- ಈವರೆಗೆ ಗೆದ್ದಿರುವವರು

ಫೋಟೋ 1ಡಿ

---

1962- ಎಸ್.ಎಂ. ಸಿದ್ದಯ್ಯ (ಕಾಂಗ್ರೆಸ್)

1967- ಎಸ್.ಎಂ. ಸಿದ್ದಯ್ಯ (ಕಾಂಗ್ರೆಸ್)

1971- ಎಸ್.ಎಂ. ಸಿದ್ದಯ್ಯ ( ಕಾಂಗ್ರೆಸ್)

1977- ಬಿ. ರಾಚಯ್ಯ (ಕಾಂಗ್ರೆಸ್)

1980- ವಿ. ಶ್ರೀನಿವಾಸಪ್ರಸಾದ್ (ಕಾಂಗ್ರೆಸ್- ಐ)

1984- ವಿ. ಶ್ರೀನಿವಾಸಪ್ರಸಾದ್ ( ಕಾಂಗ್ರೆಸ್)

1989- ವಿ. ಶ್ರೀನಿವಾಸಪ್ರಸಾದ್ (ಕಾಂಗ್ರೆಸ್)

1991- ವಿ. ಶ್ರೀನಿವಾಸಪ್ರಸಾದ್ ( ಕಾಂಗ್ರೆಸ್)

1996- ಎ. ಸಿದ್ದರಾಜು (ಜನತಾದಳ)

1998- ಎ. ಸಿದ್ದರಾಜು ( ಜನತಾದಳ)

1999- ವಿ. ಶ್ರೀನಿವಾಸಪ್ರಸಾದ್ (ಜೆಡಿಯು)

2004- ಕಾಗಲವಾಡಿ ಎಂ. ಶಿವಣ್ಣ (ಜೆಡಿಎಸ್)

2009- ಆರ್. ಧ್ರುವನಾರಾಯಣ (ಕಾಂಗ್ರೆಸ್)

2014- ಆರ್. ಧ್ರುವನಾರಾಯಣ (ಕಾಂಗ್ರೆಸ್)

2019- ವಿ. ಶ್ರೀನಿವಾಸಪ್ರಸಾದ್ (ಬಿಜೆಪಿ)

----

ಮೈಸೂರು ಸಾಮಾನ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿ

ಮೈಸೂರು ನಗರದ ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ, ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳು.

2009 ರ ಪುನರ್ ವಿಂಗಡಣೆಯಿಂದಾಗಿ ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರವು ಚಾಮರಾಜನಗರಕ್ಕೂ, ಕೆ.ಆರ್. ನಗರ ವಿಧಾನಸಭಾ ಕ್ಷೇತ್ರವು ಮಂಡ್ಯಕ್ಕೂ ಸೇರಿದವು. ಹೀಗಾಗಿ ಅಲ್ಲಿಯವರೆಗೆ ಮಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಕೊಡಗು ಜಿಲ್ಲೆಯು ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿತು.

--

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು, ಮೈಸೂರು ಜಿಲ್ಲೆಯ ವರುಣ, ಟಿ. ನರಸೀಪುರ, ನಂಜನಗೂಡು, ಹೆಗ್ಗಡದೇವನ ಕೋಟೆ ವಿಧಾನಸಭಾ ಕ್ಷೇತ್ರಗಳು.

2008 ರಲ್ಲಿ ಬನ್ನೂರು, ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರಗಳು ರದ್ದಾದವು. ಹೊಸದಾಗಿ ಸೃಜಿಸಲಾದ ವರುಣ ಜೊತೆಗೆ ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರವನ್ನು ಚಾಮರಾಜನಗರಕ್ಕೆ ಸೇರಿಸಲಾಯಿತು.

ಮಂಡ್ಯಕ್ಕೇ ಸೇರಿರುವ ಕೆ.ಆರ್. ನಗರ

ಮೈಸೂರು ಜಿಲ್ಲೆಯ ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರವು ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದೆ.