ದಸರಾ ಮಹೋತ್ಸವ ಹಿನ್ನೆಲೆ ವಿದ್ಯುತ್ ದೀಪಗಳಿಂದ ಪ್ರಜ್ವಲಿಸುತ್ತಿದೆ ಸಾಂಸ್ಕೃತಿಕ ನಗರಿ ಮೈಸೂರು

| Published : Oct 06 2024, 01:29 AM IST / Updated: Oct 06 2024, 12:56 PM IST

ದಸರಾ ಮಹೋತ್ಸವ ಹಿನ್ನೆಲೆ ವಿದ್ಯುತ್ ದೀಪಗಳಿಂದ ಪ್ರಜ್ವಲಿಸುತ್ತಿದೆ ಸಾಂಸ್ಕೃತಿಕ ನಗರಿ ಮೈಸೂರು
Share this Article
  • FB
  • TW
  • Linkdin
  • Email

ಸಾರಾಂಶ

ಸಾಂಸ್ಕೃತಿಕ ನಗರಿ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಬೆಳಕಿನ ಸೌಂದರ್ಯದಿಂದ ಝಗಮಗಿಸುತ್ತಿದೆ. ನಗರದ ಪ್ರಮುಖ ರಸ್ತೆಗಳು ಬೆಳಕಿನ ತೋರಣಗಳಿಂದ, ವೃತ್ತಗಳು ವಿದ್ಯುತ್ ದೀಪಗಳಿಂದ ಪ್ರಜ್ವಲಿಸುತ್ತಿದೆ.  

ಬಿ.ಶೇಖರ್‌ಗೋಪಿನಾಥಂ

  ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಬೆಳಕಿನ ಸೌಂದರ್ಯದಿಂದ ಝಗಮಗಿಸುತ್ತಿದೆ. ನಗರದ ಪ್ರಮುಖ ರಸ್ತೆಗಳು ಬೆಳಕಿನ ತೋರಣಗಳಿಂದ, ವೃತ್ತಗಳು ವಿದ್ಯುತ್ ದೀಪಗಳಿಂದ ಪ್ರಜ್ವಲಿಸುತ್ತಿದೆ.

ಒಂದೆಡೆ ವಿಶ್ವವಿಖ್ಯಾತಿ ಗಳಿರುವ ಮೈಸೂರು ಅರಮನೆಯ ದೀಪಾಲಂಕಾರ, ಮತ್ತೊಂದೆಡೆ ದಸರಾ ಹಿನ್ನೆಲೆಯಲ್ಲಿ ನಗರದಲ್ಲಿ ಮಾಡಲಾಗಿರುವ ದೀಪಾಲಂಕಾರವು ಪ್ರವಾಸಿಗರು, ಸಾರ್ವಜನಿಕರ ಕಣ್ಣಿಗೆ ಹಬ್ಬವಾಗಿದೆ.

ಹೊಂಬೆಳಕಿನ ವೈಯ್ಯಾರ ಹೊದ್ದಿರುವ ಮೈಸೂರು ಅರಮನೆ ಸುತ್ತಮುತ್ತಲಿರುವ ರಸ್ತೆಗಳು, ವೃತ್ತಗಳಲ್ಲಿ ಸಹ ಬೆಳಕಿನ ಲೋಕ ಸೃಷ್ಟಿಯಾಗಿದೆ. ಕೆ.ಆರ್. ವೃತ್ತ, ಚಾಮರಾಜ ವೃತ್ತ, ಜಯಚಾಮರಾಜ (ಹಾರ್ಡಿಂಜ್) ವೃತ್ತ, ಗನ್ ಹೌಸ್ ವೃತ್ತಗಳು ದೀಪಾಲಂಕಾರದಿಂದ ಪ್ರಜ್ವಲಿಸುತ್ತಿವೆ.

ಗನ್ ಹೌಸ್ ವೃತ್ತದಲ್ಲಿ ಚಾಮುಂಡೇಶ್ವರಿ ದೇವಿಯ ಮೂರ್ತಿಯುಳ್ಳ ಅಂಬಾರಿ ಹೊತ್ತು ಸಾಗುತ್ತಿರುವ ಆನೆ ಮತ್ತು ಕುಮ್ಕಿ ಆನೆಗಳ ಮಾದರಿ, ಜಯಚಾಮರಾಜೇಂದ್ರ ಒಡೆಯರ್ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಕೃತಿ, ಹಾರ್ಡಿಂಜ್ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಕೃತಿ ಗಮನ ಸೆಳೆಯುತ್ತಿವೆ.

ಅರಮನೆ ಮುಂಭಾಗದ ದೊಡ್ಡಕೆರೆ ಮೈದಾನದಲ್ಲಿ ವಾಹನಗಳ ಪಾರ್ಕಿಂಗ್ ಜಾಗದಲ್ಲಿರು ಹಾಕಲಾಗಿರುವ ಭಾರತ ಸಂವಿಧಾನ ಮತ್ತು ಡಾ.ಬಿ.ಆರ್. ಅಂಬೇಡ್ಕರ್, ಕರ್ನಾಟಕ ನಕ್ಷೆಯಲ್ಲಿ ಕರ್ನಾಟಕ ಸಂಭ್ರಮ 50 ಹಾಗೂ ವಿಧಾನಸೌಧ ಪ್ರತಿಕೃತಿಯು ನಾಡಿನ ಇತಿಹಾಸವನ್ನು ಸಾರುತ್ತಿವೆ.

ಡಿ.ದೇವರಾಜ ಅರಸು ರಸ್ತೆಯಲ್ಲಿ ಬೆಳಕಿನ ತುಂತುರುವಿನಂತಹ ತೋರಣ ಜನರನ್ನು ಆಕರ್ಷಿಸಿದರೆ, ಸಯ್ಯಾಜಿರಾವ್ ರಸ್ತೆಯಲ್ಲಿ ಹಾಕಲಾಗಿರುವ ಹಸಿರು ಚಪ್ಪರ, ಆಲ್ಬರ್ಟ್ ವಿಕ್ಟರ್ ರಸ್ತೆ, ನ್ಯೂ ಸಯ್ಯಾಜಿರಾವ್ ರಸ್ತೆ, ಅಶೋಕ ರಸ್ತೆ, ಬಿ.ಎನ್. ರಸ್ತೆ, ಚಾಮರಾಜ ಜೋಡಿ ರಸ್ತೆ, ಜೆಎಲ್ ಬಿ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಬೆಳಕಿನ ತೋರಣ ಹಾಕಿ ವೈಯಾರ ಸೃಷ್ಟಿಸಲಾಗಿದೆ.

ವಿದ್ಯುತ್‌ ದೀಪಗಳನ್ನು ಮುಟ್ಟದಿರಿ

ನಗರದಲ್ಲಿ ಕಳೆದ ಕೆಲವು ದಿನಗಳಿಂದ ಸಾಕಷ್ಟು ಮಳೆಯಾಗುತ್ತಿದೆ. ಇದರಿಂದಾಗಿ ಕೆಲವೊಮ್ಮೆ ವಿದ್ಯುತ್‌ಸೋರಿಕೆ ಉಂಟಾಗುವ ಸಾಧ್ಯತೆ ಇರಲಿದೆ. ಹೀಗಾಗಿ, ಸಾರ್ವಜನಿಕರು ದೀಪಾಲಂಕಾರ ವೀಕ್ಷಿಸುವ ವೇಳೆ ಹಾಗೂ ಫೋಟೋಗಳನ್ನು ತೆಗೆಸಿಕೊಳ್ಳುವ ಸಂದರ್ಭದಲ್ಲಿ ವಿದ್ಯುತ್‌ದೀಪಗಳನ್ನು ಮುಟ್ಟದಂತೆ ಎಚ್ಚರವಹಿಸಬೇಕು.

- ಮುನಿಗೋಪಾಲರಾಜು, ಸೆಸ್ಕ್‌ತಾಂತ್ರಿಕ ವಿಭಾಗದ ನಿರ್ದೇಶಕ

ಇಂದು, ನಾಳೆ ದಸರಾ ಡ್ರೋನ್‌ ಪ್ರದರ್ಶನ

ದಸರಾ ದೀಪಾಲಂಕಾರ ಅಂಗವಾಗಿ ಅ.6, 7 ಮತ್ತು 11, 12 ರಂದು ಡ್ರೋನ್‌ಪ್ರದರ್ಶನವನ್ನು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಆಯೋಜಿಸಿದ್ದು, ಅ.6 ಮತ್ತು 7 ರಂದು ಉಚಿತವಾಗಿ ಡ್ರೋನ್ ಶೋ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಸೆಸ್ಕ್‌ತಾಂತ್ರಿಕ ವಿಭಾಗದ ನಿರ್ದೇಶಕ ಮುನಿಗೋಪಾಲರಾಜು ತಿಳಿಸಿದರು.

ಈ ಬಾರಿ ದಸರಾ ಡ್ರೋನ್ ಶೋ‌ವಿಶೇಷ ಅನುಭವ ನೀಡಲಿದೆ. ಅ.11 ಮತ್ತು 12 ರಂದು ನಡೆಯುವ ಡ್ರೋನ್‌ಶೋ ವೀಕ್ಷಣೆಗೆ ಪಾಸ್ ವ್ಯವಸ್ಥೆ ಇರಲಿದೆ. ಮೊದಲ ಬಾರಿಗೆ ಈ ಮಟ್ಟದಲ್ಲಿ ಮಾಡಲಾಗಿರುವ ಡ್ರೋನ್‌ಶೋನಲ್ಲಿ 1500 ಡ್ರೋನ್‌ಆಗಸದಲ್ಲಿ ಬೆಳಕಿನ‌ಚಿತ್ತಾರ ಮೂಡಿಸಲಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದಸರಾ ದೀಪಾಲಂಕಾರ ಉಪ ಸಮಿತಿ ಅಧ್ಯಕ್ಷ ಸೈಯ್ಯದ್ ಇಕ್ಬಾಲ್, ಸೆಸ್ಕ್‌ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ, ಅಧೀಕ್ಷಕ ಎಂಜಿನಿಯರ್‌ಸುನಿಲ್‌ಮೊದಲಾದವರು ಇದ್ದರು.