ಕನ್ನಡ ನಾಡಿನ ಕುಲಪುತ್ರ ಸಂಗೊಳ್ಳಿ ರಾಯಣ್ಣ

| Published : Sep 01 2024, 01:53 AM IST

ಸಾರಾಂಶ

ರಾಯಣ್ಣನನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದರೆ ಆತನೆ ದೊಡ್ಡ ಸೈನ್ಯವನ್ನು ಕಟ್ಟಿ ಕ್ರಾಂತಿಕಾರಿಯಾಗಿ ಹೋರಾಡುತ್ತಾನೆ.

ಕನ್ನಡಪ್ರಭ ವಾರ್ತೆ ಮೈಸೂರು

ಸ್ವಾತಂತ್ರ್ಯ ಹೋರಾಟಗಾರ, ವೀರ, ದೇಶಭಕ್ತ ರಕ್ಷಕ, ಕನ್ನಡ ನಾಡಿನ ಕುಲಪುತ್ರ ಸಂಗೊಳ್ಳಿ ರಾಯಣ್ಣ ಎಂದು ಹುಣಸೂರಿನ ಸರ್ಕಾರಿ ಮಹಿಳಾ ಕಾಲೇಜು ಸಹ ಪ್ರಾಧ್ಯಾಪಕ ಡಾ. ನಂಜುಂಡಸ್ವಾಮಿ ಹರದನಹಳ್ಳಿ ತಿಳಿಸಿದರು.

ನಗರದ ಹೊಯ್ಸಳ ಭವನದಲ್ಲಿ ಮೈಸೂರು ಕನ್ನಡ ವೇದಿಕೆಯು ಶನಿವಾರ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಿತ್ತೂರು ಸಂಸ್ಥಾನದ ವೀರ ರಾಯಣ್ಣನ ಶೌರ್ಯ ಪರಾಕ್ರಮ ಇಂಗ್ಲೆಂಡ್ ನ ಬ್ರಿಟಿಷರ ಆಡಳಿತವನ್ನು ನಿದ್ದೆಗೆಡಿಸುತ್ತದೆ ಎಂದರು.

ರಾಯಣ್ಣನನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದರೆ ಆತನೆ ದೊಡ್ಡ ಸೈನ್ಯವನ್ನು ಕಟ್ಟಿ ಕ್ರಾಂತಿಕಾರಿಯಾಗಿ ಹೋರಾಡುತ್ತಾನೆ. ಹುಟ್ಟಿದ ಕುಲಕ್ಕೆ ನಂದಾ ದೀಪವಾಗಿ, ಕಿತ್ತೂರು ಸಂಸ್ಥಾನಕ್ಕೆ ರಕ್ಷಕನಾಗಿ, ಕನ್ನಡ ನಾಡಿಗೆ ಕೆಚ್ಚೆದೆಯ ವೀರನಾಗಿ, 1857 ಕ್ಕಿಂತ ಮೊದಲು ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ. ವಿಕ್ಟೋರಿಯ ರಾಣಿಗೆ ಸಿಂಹ ಸ್ವಪ್ನವಾಗಿದ್ದ ವೀರ ಎಂದು ಅವರು ಬಣ್ಣಿಸಿದರು.

ಗೆರಿಲ್ಲಾ ಮಾದರಿಯ ಯುದ್ಧ ಮಾಡಿದ ಪ್ರಮುಖರಲ್ಲಿ ಶಿವಾಜಿ ಮಹಾರಾಜ್ ಮತ್ತು ಸಂಗೊಳ್ಳಿ ರಾಯಣ್ಣ. ಭಾರತದಂತಹ ದೊಡ್ಡ ದೇಶಕ್ಕೆ ದೇಶಭಕ್ತಿ, ನಾಡಿನ ಪ್ರೇಮ, ಸಮಾನತೆ, ಸ್ವಾತಂತ್ರವನ್ನು ಯುವಜನಾಂಗದಲ್ಲಿ ಉಳಿಸಿ ಬೆಳೆಸಬೇಕಾದರೆ ನಮಗೆ ಸಂಗೊಳ್ಳಿ ರಾಯಣ್ಣನ ಚರಿತ್ರೆ ಮುಖ್ಯ. ಜನವರಿ 26, 1831 ರಂದು ಗಲ್ಲಿಗೇರಿಸಿದ 10 ನಿಮಿಷದ ನಂತರ ಮದ್ರಾಸಿನ ಈಸ್ಟ್ ಇಂಡಿಯಾ ಕಂಪನಿಯಿಂದ ಒಂದು ಪತ್ರ ಬರುತ್ತದೆ, ರಾಯಣ್ಣ ಸಿಕ್ಕರೆ ಆತನನ್ನು ಕೊಲ್ಲದೆ ಗೌರವಯುತವಾಗಿ ಸೆರೆ ಹಿಡಿದು ಆತನನ್ನು ಗೌರವಯುತವಾಗಿ ನೋಡಿಕೊಳ್ಳಬೇಕು ಎಂದು. ಇಂತಹ ವೀರನನ್ನು ಬ್ರಿಟಿಷರು ಕೊಂದರು ಎಂದರೆ ಈ ಭಾರತ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಬರೆದಿರುತ್ತದೆ. ಇದು ಸಂಗೊಳ್ಳಿ ರಾಯಣ್ಣ ಶೌರ್ಯ ಪರಾಕ್ರಮ ಎಂದು ಅವರು ತಿಳಿಸಿದರು.

ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಾದ ಎನ್. ಚೇತನ್ ರಾಜ್, ಶ್ರೀಷಾ ಭಟ್, ಆರ್. ಶ್ರೀಪಾಲ್, ಬಿದ್ದಪ್ಪ, ರವಿ, ಲೋಕೇಶ್, ಎನ್. ಪ್ರಜ್ವಲ್, ಪುರುಷೋತ್ತಮ್, ಕಾವೇರಿ ಪ್ರಕಾಶ್, ಸೌಮ್ಯಮೂರ್ತಿ, ರೇಖಾ ಮನಃಶಾಂತಿ, ವಿಜಯಶ್ರೀ, ಎಚ್.ಕೆ. ಕೋಮಲಾ, ಭಾರತಿ ಶಿರೂರು, ಎಸ್. ಪ್ರಿಯಾ ಅವರಿಗೆ ರಾಯಣ್ಣ ಪ್ರಶಸ್ತಿಯನ್ನು ಕೆ.ಆರ್. ಠಾಣೆಯ ಇನ್ಸ್ ಪೆಕ್ಟರ್ ಎನ್.ಸಿ. ನಾಗೇಗೌಡ ಪ್ರದಾನ ಮಾಡಿದರು.

ನಿವೃತ್ತ ಯೋಧ ಬಿದ್ದಪ್ಪ, ಕ್ಯಾತನಹಳ್ಳಿ ಪ್ರಕಾಶ್, ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ, ಬಸವಣ್ಣ, ನಾಲಾಬೀದಿ ರವಿ ಮೊದಲಾದವರು ಇದ್ದರು.