ಮತ ಎಣಿಕೆಗೆ ಜಿಲ್ಲಾಡಳಿತ ಸಿದ್ಧತೆ

| Published : May 31 2024, 02:15 AM IST

ಸಾರಾಂಶ

ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಶೇ. 70.62 ಮತ ಚಲಾವಣೆಯಾಗಿದೆ. ಒಟ್ಟಾರೆ 20,92,222 ಮತದಾರರ ಪೈಕಿ 14,77,571 ಮತದಾರರು ಮತ ಚಲಾಯಿಸಿದ್ದಾರೆ. ಕಳೆದ 2019 ರಲ್ಲಿ ಶೇ. 69.25 ಮತದಾನವಾಗಿತ್ತು. ಹಂಚಿಕೆಯಾಗಿದ್ದ 2088 ಸೇವಾ ಮತದಾರರ ಅಂಚೆ ಮತಗಳಲ್ಲಿ 1012 ಮತಪತ್ರ ಸ್ವೀಕೃತವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯವು ಜೂ. 4 ರಂದು ನಗರದ ವಾಲ್ಮೀಕಿ ರಸ್ತೆಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ನಡೆಯಲಿದ್ದು, ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.

ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಶೇ. 70.62 ಮತ ಚಲಾವಣೆಯಾಗಿದೆ. ಒಟ್ಟಾರೆ 20,92,222 ಮತದಾರರ ಪೈಕಿ 14,77,571 ಮತದಾರರು ಮತ ಚಲಾಯಿಸಿದ್ದಾರೆ. ಕಳೆದ 2019 ರಲ್ಲಿ ಶೇ. 69.25 ಮತದಾನವಾಗಿತ್ತು. ಹಂಚಿಕೆಯಾಗಿದ್ದ 2088 ಸೇವಾ ಮತದಾರರ ಅಂಚೆ ಮತಗಳಲ್ಲಿ 1012 ಮತಪತ್ರ ಸ್ವೀಕೃತವಾಗಿದೆ. ಹೊರ ಜಿಲ್ಲೆಗಳಿಂದ 3,682 ಮತಪತ್ರ, ಮನೆಯಿಂದ ಮತಚಲಾಯಿಸಿದವರು ಸೇರಿ ಒಟ್ಟು 8606 ಮತಪತ್ರಗಳನ್ನು ಸ್ವೀಕರಿಸಲಾಗಿದೆ. ಜೂ. 4ರಂದು ಬೆಳಗ್ಗೆ 8 ಗಂಟೆವರೆಗೂ ಬರುವ ಅಂಚೆ ಮತಪತ್ರಗಳನ್ನು ಸ್ವೀಕರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜಿನ ನೆಲ ಮಹಡಿಯ ಕೊಠಡಿ ಸಂಖ್ಯೆ 11ರಲ್ಲಿ ಹುಣಸೂರು ಕ್ಷೇತ್ರ, ಮೊದಲ ಮಹಡಿಯ ಕೊಠಡಿ 103ರಲ್ಲಿ ಚಾಮರಾಜ, 111ರಲ್ಲಿ ಕೃಷ್ಣರಾಜ, 120ರಲ್ಲಿ ಚಾಮುಂಡೇಶ್ವರಿ, 126ರಲ್ಲಿ ಪಿರಿಯಾಪಟ್ಟಣ, ಎರಡನೇ ಮಹಡಿಯ ಕೊಠಡಿ ಸಂಖ್ಯೆ 203ರಲ್ಲಿ ವಿರಾಜಪೇಟೆ, 211 ಮಡಿಕೇರಿ, 218ರಲ್ಲಿ ನರಸಿಂಹರಾಜ, 220(1) ಪೋಸ್ಟಲ್‌ಬ್ಯಾಲೆಂಟ್‌, 220(2)ರಲ್ಲಿ ಇಟಿಪಿಬಿಎಂಎಸ್‌ಮತ ಎಣಿಕೆ ನಡೆಯಲಿದೆ ಎಂದು ಅವರು ಹೇಳಿದರು.

ಈ ಮತ ಎಣಿಕೆ ಕೇಂದ್ರದಲ್ಲಿ ಮೂರು ಹಂತದ ಭದ್ರತೆ ಒದಗಿಸಲಾಗಿದ್ದು, ಮೂರನೇ ಹಂತದ ಭದ್ರತೆಯ ವ್ಯಾಪ್ತಿಯ ನಂತರ ಭದ್ರತಾ ಕೊಠಡಿಯ ದ್ವಾರ ವೀಕ್ಷಿಸಲು ದೂರದರ್ಶನ, ಟಿವಿ ವ್ಯವಸ್ಥೆ ಮಾಡಲಾಗಿದೆ.

ಮತ ಎಣಿಕೆಯು ಜೂ. 4ರಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಮೊದಲಿಗೆ ಅಂಚೆ ಮತಪತ್ರ ಎಣಿಕೆ ಪೂರ್ಣಗೊಂಡ ಬಳಿಕ ಇವಿಎಂಗಳ ಎಣಿಕೆಯು 8.30ರ ನಂತರ ಪ್ರಾರಂಭವಾಗಲಿದೆ. ಮಡಿಕೇರಿಯ ಒಟ್ಟು 273 ಮತಗಟ್ಟೆಗೆ 20 ಟೇಬಲ್‌, ವಿರಾಜಪೇಟೆಯ 273 ಮತಗಟ್ಟೆಗೆ 20 ಟೇಬಲ್‌, ಪಿರಿಯಾಪಟ್ಟಣದ 235 ಮತಗಟ್ಟೆಗೆ 17 ಟೇಬಲ್‌, ಹುಣಸೂರಿನ 274 ಮತಗಟ್ಟೆಗೆ 20 ಟೇಬಲ್‌, ಚಾಮುಂಡೇಶ್ವರಿಯ 343 ಮತಗಟ್ಟೆಗೆ 25 ಟೇಬಲ್‌, ಕೃಷ್ಣರಾಜ ಕ್ಷೇತ್ರದ 265 ಮತಗಟ್ಟೆಗೆ 19 ಟೇಬಲ್‌, ಚಾಮರಾಜ ಕ್ಷೇತ್ರದ 248 ಮತಗಟ್ಟೆಗೆ 18 ಟೇಬಲ್‌ ಮತ್ತು ನರಸಿಂಹರಾಜ ಕ್ಷೇತ್ರದ 291 ಮತಗಟ್ಟೆಗೆ 21 ಟೇಬಲ್‌ ನೀಡಲಾಗಿದೆ.

ಎಣಿಕೆಗಾಗಿ ಎಲ್ಲಾ ಅಭ್ಯರ್ಥಿಗಳು ಟೇಬಲ್‌ಗೆ ಒಬ್ಬರಂತೆ ಎಣಿಕೆ ಏಜೆಂಟರನ್ನು ನೇಮಿಸಬಹುದು. ಈ ಏಜೆಂಟರು ಮತ ಎಣಿಕೆ ಕೇಂದ್ರದಲ್ಲಿ ಅವರಿಗೆ ನಿಯೋಜಿಸಿರುವ ಸ್ಥಳದಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಂದು ಟೇಬಲಿಗೆ ಒಬ್ಬ ಅಭ್ಯರ್ಥಿಯ ಒಬ್ಬ ಏಜೆಂಟ್‌ ಮಾತ್ರ ಇರಲು ಅವಕಾಶವಿದೆ ಎಂದು ಹೇಶಿದರು..ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಡಿಸಿಪಿಗಳಾದ ಮುತ್ತುರಾಜ್‌, ಜಾಹ್ನವಿ ಇದ್ದರು.-- ಬಾಕ್ಸ್‌1--

ಎಣಿಕೆ ಕಾರ್ಯಕ್ಕೆ ಅನುಕೂಲವಾಗಲು ಹೆಚ್ಚುವರಿಯಾಗಿ 25 ಮಂದಿ ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳ ನೇಮಕಕ್ಕೆ ಅನುಮತಿ ಕೋರಲಾಗಿದೆ. ಇವಿಎಂ ಮತ ಎಣಿಕೆ ಮತ್ತು ಅಂಚೆ ಮತಪತ್ರ, ಇಟಿಪಿಬಿಎಂಎಸ್‌ ಮತ ಎಣಿಕೆ ಕಾರ್ಯಕ್ಕೆ ಮೀಸಲು ಸಿಬ್ಬಂದಿ ಸೇರಿ ಒಟ್ಟು 160 ಮತ ಎಣಿಕೆ ಮೇಲ್ವಿಚಾರಕರು, 187 ಮತ ಎಣಿಕೆ ಸಹಾಯಕರು ಮತ್ತು 171 ಮತ ಎಣಿಕೆ ಮೈಕ್ರೋ ಅಬ್ಸರ್ವರ್‌ ನೇಮಕಾತಿ ಮಾಡಿಕೊಳ್ಳಲಾಗಿದೆ. ಇವರಿಗೆ ಒಂದು ಸುತ್ತಿನ ತರಬೇತಿ ಪೂರ್ಣಗೊಂಡಿದ್ದು, ಜೂ. 2ರಂದು ಎರಡನೇ ಸುತ್ತಿನ ತರಬೇತಿ ನೀಡಲಾಗುವುದು ಎಂದು ಅವರು ವಿವರಿಸಿದರು.

ಮತ ಎಣಿಕೆ ಕೇಂದ್ರಕ್ಕೆ ಏಜೆಂಟರು ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು. ಮೊಬೈಲ್‌ ಫೋನ್‌ಕೊಂಡೊಯ್ಯುವುದು ನಿಷೇಧಿಸಲಾಗಿದೆ. ಏಜೆಂಟರು ಪೆನ್ನು ಮತ್ತು ಹಾಳೆ ತೆಗೆದುಕೊಂಡು ಹೋಗಬಹುದು. ಮತ ಎಣಿಕ ಕೇಂದ್ರಕ್ಕೆ ನಿರ್ಬಂಧಿಸಿರುವ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ

-- ಬಾಕ್ಸ್‌2--

ಜಿಲ್ಲೆ ವ್ಯಾಪ್ತಿಯಲ್ಲಿ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ 2 ಎಫ್‌ಐಆರ್‌, ಅಬಕಾರಿ ಕಾಯ್ದೆ ಉಲ್ಲಂಘನೆ ಸಂಬಂಧ 110 ಎಫ್‌ಐಆರ್‌ದಾಖಲಾಗಿದೆ. ಒಟ್ಟಾರೆ 3,18,23,871 ರೂ. ನಗದು ವಶಕ್ಕೆ ಪಡೆಯಲಾಗಿದೆ. ಈ ಪೈಕಿ 2,13,14,533 ನಗದನ್ನು ಬಿಡುಗಡೆಗೊಳಿಸಿದ್ದು, 1.05 ಕೋಟಿಯನ್ನು ಆದಾಯ ತೆರಿಗೆ ಇಲಾಖೆ ವಶಕ್ಕೆ ನೀಡಲಾಗಿದೆ. 1.25 ಕೋಟಿ ಲೀಟರ್‌ಅಕ್ರ ಮದ್ಯ ವಶಕ್ಕೆ ಪಡೆದಿದ್ದು, ಇದರ ಅಂದಾಜು ಮೌಲ್ಯಯು 108.13 ಕೋಟಿ ಎಂದು ಅಂದಾಜಿಸಲಾಗಿದೆ. ಅಲ್ಲದೆ 46.69 ಗ್ರಾಂ. ಚಿನ್ನ, 1,728 ಸೀರೆ ಸೇರಿ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಅವರು ತಿಳಿಸಿದರು.ಬಾಕ್ಸ್‌--

-- ಬಾಕ್ಸ್‌ 3--

ಬಿಗಿ ಬಂದೋಬಸ್ತ್

ಮುಂಜಾಗ್ರತ ಕ್ರಮವಾಗಿ ಎಣಿಕೆ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್‌ಆಯುಕ್ತ ಬಿ. ರಮೇಶ್‌ ತಿಳಿಸಿದರು.