ಮೊಬೈಲ್‌ ಗಳು ಯುವ ಜನರ ದಿಕ್ಕು ಬದಲಿಸಿದೆ

| Published : Sep 09 2025, 01:00 AM IST

ಸಾರಾಂಶ

ರಾಷ್ಟ್ರೀಯ ಸೇವಾ ಯೋಜನೆಯನ್ನು ರಾಷ್ಟ್ರವನ್ನು ಕಟ್ಟುವ ಸಲುವಾಗಿ ಅನುಷ್ಠಾನಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಮೊಬೈಲ್‌ ಗಳು ಎಲ್ಲರ ದಿಕ್ಕನ್ನು ಬದಲಿಸಿದ್ದಲ್ಲದೇ ವಿದ್ಯಾರ್ಥಿಗಳ ಬದುಕನ್ನು ಆಳುತ್ತಿದೆ. ನಾವು ನಡೆದು ಬಂದ ಹಿಂದಿನ ಬದುಕನ್ನು ಮರೆಯುತ್ತಿದ್ದೇವೆ ಎಂದು ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ.ಎಂ. ರುದ್ರಯ್ಯ ಹೇಳಿದರು.

ಎಸ್‌.ಬಿ.ಆರ್‌.ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವತಿಯಿಂದ 2025-26ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಸೇವಾ ಯೋಜನೆಯನ್ನು ರಾಷ್ಟ್ರವನ್ನು ಕಟ್ಟುವ ಸಲುವಾಗಿ ಅನುಷ್ಠಾನಗೊಳಿಸಲಾಯಿತು. ದೇಶದಲ್ಲಿ ಯುವಜನರ ಸಂಖ್ಯೆ ಅಧಿಕವಾಗಿರುವುದರಿಂದ ಭವಿಷ್ಯದಲ್ಲಿ ದೇಶವು ಸುಭದ್ರವಾಗಿರುತ್ತದೆ. ಭಾರತದಲ್ಲಿ ಹತ್ತಾರು ಧರ್ಮ, ಸಾವಿರಾರು ಭಾಷೆ, ಜಾತಿಗಳಿದ್ದರೂ ನಾವೆಲ್ಲರೂ ಒಟ್ಟಾಗಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆಲ್ಲ ಶಿಕ್ಷಣವೇ ಕಾರಣ. ಪ್ರಸ್ತುತ ದಿನಗಳಲ್ಲಿ ಜೀವನವನ್ನು ಕಲಿಸುವ ಶಿಕ್ಷಣದ ಅವಶ್ಯಕತೆ ಹೆಚ್ಚಿದೆ, ಅಂತಹ ಶಿಕ್ಷಣ ವ್ಯಕ್ತಿಯ ಬೆಳವಣಿಗೆಯ ಮೂಲವಾಗಿದೆ ಎಂದರು.

ಎನ್‌.ಎಸ್‌.ಎಸ್‌. ಈ ರೀತಿಯ ಶಿಕ್ಷಣ ಮತ್ತು ಜೀವನದ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡುತ್ತದೆ ಭೂಮಿ ಮಾನವನ ಅವಶ್ಯಕತೆಯನ್ನು ಪೂರೈಸುತ್ತದೆ. ಆದರೆ ಆತನ ಆಸೆಗಳನ್ನಲ್ಲಾ ಎಂಬ ಗಾಂಧಿ ನುಡಿಯನ್ನು ಮೆಲಕು ಹಾಕಿದರು. ಆಸೆಗಳನ್ನು ನಿಗ್ರಹಿಸಿ, ಶಿಸ್ತಿನಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಂಪ್ಯೂಟರ್ ಯುಗದಲ್ಲಿ ತೇಲುತ್ತಿರುವ ನಾವು ಸಾಮಾಜಿಕ ಬದುಕನ್ನು ರೂಢಿಸಿಕೊಳ್ಳಬೇಕಾಗಿದೆ. ಉತ್ತಮ ಸಮಾಜವನ್ನು ನಿರ್ಮಿಸಲು ಹೃದಯವಂತಿಕೆ ಅಗತ್ಯ. ವಿದ್ಯಾರ್ಥಿಗಳು ಅಂತಹ ಗುಣಗಳನ್ನು ಮೈಗೂಡಿಸಿಕೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಬೇಕು ಎಂದು ಅವರು ಕಿವಿಮಾತು ಹೇಳಿದರು.

ಎನ್‌.ಎಸ್‌.ಎಸ್‌. ಪ್ರಶಸ್ತಿ ಪುರಸ್ಕೃತ ಡಾ.ಎಚ್.ಆರ್. ತಿಮ್ಮೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ಹೆಣ್ಣು ಗಂಡಿನ ನಡುವೆ ತಾರತಮ್ಯ ಹೋಗಲಾಡಿಸಿ ಉತ್ತಮ ಸಂಬಂಧ ಬೆಸೆಯುತ್ತ ವ್ಯಕ್ತಿತ್ವವನ್ನು ರೂಪಿಸುತ್ತದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಗುರಿಯನ್ನು ತಲುಪಲು ಮೆಟ್ಟಿಲಾಗಿರುತ್ತದೆ. ಪಠ್ಯಪುಸ್ತಕಗಳು ಕಲಿಸಲಾಗದ ಮೌಲ್ಯಗಳನ್ನು ರಾಷ್ಟ್ರೀಯ ಸೇವಾ ಯೋಜನೆ ಕಲಿಸುತ್ತದೆ. ಮಾನವನನ್ನು ತಿದ್ದುತ್ತಾ, ಸರ್ವೋತೋಮುಖ ಬೆಳವಣಿಗೆಗೆ ಸಹಕರಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಆರ್. ಜಯಕುಮಾರಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಬದುಕನ್ನು ಕಲಿಸುತ್ತದೆ. ನಮ್ಮ ಬಗ್ಗೆ ಹಾಗೂ ಸಮಾಜದ ಬಗ್ಗೆ ಪ್ರೀತಿ ಇದ್ದಾಗ ಮಾತ್ರ ಎನ್‌.ಎಸ್‌.ಎಸ್‌ ನಲ್ಲಿ ಪಾಲ್ಗೊಳ್ಳಬೇಕು. ಆಗ ಮಾತ್ರ ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.

ಎನ್‌ಎಸ್‌ಎಸ್ ಘಟಕಗಳ ಅಧಿಕಾರಿಗಳಾದ ಡಾ.ಜಿ. ದೊಡ್ಡರಸಯ್ಯ, ಎಲ್‌. ನಿರಂಜನ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರು ಭಾಗವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಡಾ.ಜಿ. ದೊಡ್ಡರಸಯ್ಯ ವಂದಿಸಿದರು. ಆರ್‌. ಅಂಕಿತಾ ನಿರೂಪಿಸಿದರು.