ಸಾರಾಂಶ
ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಸತತ 5 ಬಾರಿ ಅಂಬಾರಿ ಹೊರಲಿರುವ ಅಭಿಮನ್ಯು ಆನೆಯೇ 2024ನೇ ಸಾಲಿನ ಬಲ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ತಾನೇ ಬಲಶಾಲಿ ಎಂಬುದನ್ನು ಸಾಬೀತುಪಡಿಸಿದೆ.
ಬಿ. ಶೇಖರ್ ಗೋಪಿನಾಥಂ
ಮೈಸೂರು : ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಸತತ 5 ಬಾರಿ ಅಂಬಾರಿ ಹೊರಲಿರುವ ಅಭಿಮನ್ಯು ಆನೆಯೇ 2024ನೇ ಸಾಲಿನ ಬಲ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ತಾನೇ ಬಲಶಾಲಿ ಎಂಬುದನ್ನು ಸಾಬೀತುಪಡಿಸಿದೆ.
ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಮೊದಲ ತಂಡದಲ್ಲಿ ಕಾಡಿನಿಂದ ನಾಡಿಗೆ ಆಗಮಿಸಿ ಮೈಸೂರು ಅರಮನೆ ಸೇರಿಕೊಂಡಿರುವ 9 ಆನೆಗಳ ತೂಕವನ್ನು ಪರಿಶೀಲಿಸಲಾಯಿತು. ಇದರಲ್ಲಿ ಅಭಿಮನ್ಯು ಆನೆಯು ತಾನೇ ಭುಜಬಲದಲ್ಲೂ ಕ್ಯಾಪ್ಟನ್ ಎಂಬುದನ್ನು ಸಾರಿತು.
ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಆನೆಯ ತೂಕವನ್ನು ಮೊದಲು ಪರೀಕ್ಷಿಸಲಾಯಿತು. ನಂತರ ವರಲಕ್ಮಿ, ಭೀಮ, ಏಕಲವ್ಯ, ಲಕ್ಷ್ಮಿ, ರೋಹಿತ್, ಗೋಪಿ, ಕಂಜನ್ ಮತ್ತು ಧನಂಜಯ ಆನೆಗಳ ತೂಕವನ್ನು ಪರೀಕ್ಷಿಸಲಾಯಿತು.
ಈ ತೂಕ ಪರೀಕ್ಷೆಯಲ್ಲಿ 58 ವರ್ಷದ ಅಂಬಾರಿ ಆನೆ ಅಭಿಮನ್ಯು 5560 ಕೆ.ಜಿ. ತೂಕದೊಂದಿಗೆ ಮೊದಲ ಸ್ಥಾನ ಪಡೆಯಿತು. 45 ವರ್ಷದ ಧನಂಜಯ ಆನೆಯು 5155 ಕೆ.ಜಿ. ತೂಕದೊಂದಿಗೆ 2ನೇ ಸ್ಥಾನ, 43 ವರ್ಷದ ಗೋಪಿ ಆನೆಯು 4970 ಕೆ.ಜಿ. ತೂಕದೊಂದಿಗೆ 3ನೇ ಸ್ಥಾನ, 24 ವರ್ಷದ ಭೀಮ ಆನೆಯು 4945 ಕೆ.ಜಿ. ತೂಕದೊಂದಿಗೆ 4ನೇ ಸ್ಥಾನ ಪಡೆಯಿತು.
ಇದೇ ಮೊದಲ ಬಾರಿಗೆ ದಸರೆಗೆ ಆಗಮಿಸಿರುವ 39 ವರ್ಷದ ಏಕಲವ್ಯ ಆನೆಯು 4730 ಕೆ.ಜಿ. ತೂಕದೊಂದಿಗೆ 5ನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆಯಿತು. ಇನ್ನೂ 25 ವರ್ಷದ ಕಂಜನ್ ಆನೆಯು 4515 ಕೆ.ಜಿ. ತೂಕದೊಂದಿಗೆ 6ನೇ ಸ್ಥಾನ, 22 ವರ್ಷದ ರೋಹಿತ್ ಆನೆಯು 3625 ಕೆ.ಜಿ. ತೂಕದೊಂದಿಗೆ 7ನೇ ಸ್ಥಾನ ಪಡೆಯಿತು. 68 ವರ್ಷದ ವರಲಕ್ಷ್ಮಿ ಆನೆಯು 3495 ಕೆ.ಜಿ. ತೂಕದೊಂದಿಗೆ 8ನೇ ಸ್ಥಾನ ಹಾಗೂ 23 ವರ್ಷದ ಲಕ್ಷ್ಮೀ ಆನೆಯು 2480 ಕೆ.ಜಿ. ತೂಕದೊಂದಿಗೆ 9ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.
ದಸರಾ ಆನೆಗಳ ಪಯಣ
ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ವೀರನಹೊಸಹಳ್ಳಿಯಿಂದ ಬುಧವಾರ ಪಯಣ ಹೊರಟ ದಸರಾ ಆನೆಗಳು ಅದೇ ದಿನ ಸಂಜೆಯ ಹೊತ್ತಿಗೆ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನ ಆವರಣಕ್ಕೆ ತಲುಪಿ 2 ದಿನ ವಿಶ್ರಾಂತಿ ಪಡೆದವು. ಶುಕ್ರವಾರ ಅರಣ್ಯ ಭವನದಿಂದ ಹೊರಟ ಆನೆಗಳನ್ನು ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಬಳಿಕ ಅರಮನೆ ಆವರಣದಲ್ಲಿ ಬಿಡಾರ ಹೂಡಿದ್ದವು.
ಶನಿವಾರ ಬೆಳಗ್ಗೆ ಅರಮನೆ ಆವರಣದಿಂದ 9 ಆನೆಗಳನ್ನು ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ ಮೂಲಕ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಂ ಅಂಡ್ ಕೋ- ಎಲೆಕ್ಟ್ರಾನಿಕ್ ತೂಕದ ಯಂತ್ರದ ಮೇಲೆ ನಿಲ್ಲಿಸಿ ತೂಕ ಮಾಡಲಾಯಿತು.
ಈ ಬಲ ಪರೀಕ್ಷೆಯ ಬಳಿಕ ಧನ್ವಂತ್ರಿ ರಸ್ತೆ, ಶೇಷಾದ್ರಿ ಅಯ್ಯರ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಕೆ.ಆರ್. ವೃತ್ತ, ಚಾಮರಾಜ ವೃತ್ತದ ಮೂಲಕ ಮತ್ತೆ ಅರಮನೆ ಆವರಣದ ಆನೆ ಬಿಡಾರ ತಲುಪಿದವು.
ತೂಕ ಪರೀಕ್ಷೆ ಏಕೆ?
ದಸರಾ ಆನೆಗಳನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢಗೊಳಿಸಲು ಅರಣ್ಯ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿ ದಿನನಿತ್ಯ ಪೌಷ್ಟಿಕ ಆಹಾರ ನೀಡಿ ತಾಲೀಮು ನಡೆಸುತ್ತಾರೆ. ಈ ಹಿನ್ನೆಲೆಯಲ್ಲಿ ಆನೆಗಳ ತೂಕ ಹಾಗೂ ಆರೋಗ್ಯದ ತಪಾಸಣೆ ನಡೆಸಿ ಸಮಸ್ಯೆಗಳು ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಶಕ್ತಿ ಬರುವಂತೆ ತಯಾರು ಮಾಡಲಾಗುತ್ತದೆ. ಇದಕ್ಕಾಗಿ ಆನೆಗಳಿಗೆ ವಿಶೇಷ ಭಕ್ಷ್ಯವನ್ನು ನೀಡಲಾಗುತ್ತದೆ.
ಆನೆಗಳಿಗೆ ವಿಶೇಷ ಆಹಾರ
ದಸರಾ ಗಜಪಡೆಗೆ ಮೊಳಕೆ ಕಾಳು, ಭತ್ತ, ಬೆಲ್ಲ, ಬೆಣ್ಣೆ ವಿವಿಧ ಬಗೆಯ ಸೊಪ್ಪ್ಪುಗಳ ಜೊತೆಗೆ ಕೊಬ್ಬರಿ, ತೆಂಗಿನ ಕಾಯಿಯನ್ನು ಪ್ರತಿದಿನ ಎರಡು ಬಾರಿ ನೀಡಲಾಗುತ್ತದೆ. ಅದರಲ್ಲೂ ಅಂಬಾರಿ ಹೊರುವ ಅಭಿಮನ್ಯು ಆನೆಗೆ ವಿಶೇಷ ಆಹಾರದ ಜೊತೆಗೆ ಹೆಚ್ಚಿನ ಬೆಣ್ಣೆ, ಬೆಲ್ಲ ಹಾಗೂ ಕೊಬ್ಬರಿ, ಕಬ್ಬು ನೀಡಿ ಜಂಬೂಸವಾರಿಯ ವೇಳೆಗೆ ಮತ್ತಷ್ಟು ಬಲಶಾಲಿಯಾಗಿ ಮಾಡಲಾಗುತ್ತದೆ.
ಕುಂಟುತ್ತಾ ಸಾಗಿದ ಕಂಜನ್
ಅರಮನೆಯ ಆನೆ ಬಿಡಾರದಿಂದ ಆರಾಮವಾಗಿ ತೂಕ ಪರೀಕ್ಷೆ ಆಗಮಿಸಿದ್ದ ಕಂಜನ್ ಆನೆಯು, ತೂಕ ಪರೀಕ್ಷೆ ಬಳಿಕ ಮುಂಭಾಗದ ಬಲಗಾಲು ಕುಂಟಲು ಆರಂಭಿಸಿತು.
ಈ ವೇಳೆ ಸ್ಥಳದಲ್ಲಿ ಆನೆ ವೈದ್ಯ ಡಾ. ಮುಜೀಬ್ ರೆಹಮಾನ್, ಮಾವುತರು ಮತ್ತು ಕಾವಾಡಿಗಳು ಆನೆಯ ಕಾಲನ್ನು ಪರೀಕ್ಷಿಸಿದರು. ಆನೆಯ ಪಾದದಲ್ಲಿ ಯಾವುದೇ ಕಲ್ಲು, ಮುಳ್ಳು ಯಾವುದೂ ಇರಲಿಲ್ಲ. ತೂಕದ ವೇಳೆ ಕಬ್ಬಿಣ ಬ್ರಿಡ್ಜ್ ಮೇಲೆ ಕಾಲನ್ನು ಇರಿಸುವಾಗ ಅಥವಾ ನಡೆದುಕೊಂಡು ಬಂದಾಗ ಕಲ್ಲು ಒತ್ತಿ ಇಟ್ಟಿದ್ದರಿಂದ ಸ್ವಲ್ಪ ಮಟ್ಟಿಗೆ ನೋವು ಕಾಣಿಸಿಕೊಂಡು ಕುಂಟುತ್ತಿರಬಹುದು ಎಂದು ಗೊತ್ತಾಗಿದೆ.
ದಸರಾ ಆನೆಗಳ ದೈಹಿಕ ಸಾಮರ್ಥ್ಯವನ್ನು ತಿಳಿದುಕೊಳ್ಳಲುವ ಸಲುವಾಗಿ ಮೊದಲ ತಂಡದ 9 ಆನೆಗಳ ತೂಕ ಪರೀಕ್ಷೆ ಮಾಡಲಾಗಿದೆ. ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ಪೌಷ್ಟಿಕ ಆಹಾರವನ್ನು ನೀಡಲಾಗುವುದು. ಸದ್ಯ ಎಲ್ಲಾ ಆನೆಗಳ ಆರೋಗ್ಯವು ಸ್ಥಿರವಾಗಿದ್ದು, ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ. ಭಾನುವಾರದಿಂದ ನಡಿಗೆ ತಾಲೀಮು ಆರಂಭವಾಗಲಿದೆ.
- ಡಾ.ಐ.ಬಿ. ಪ್ರಭುಗೌಡ, ಡಿಸಿಎಫ್, ಮೈಸೂರು ವನ್ಯಜೀವಿ ವಿಭಾಗ
ದಸರಾ ಆನೆಗಳು ತೂಕ ಹೀಗಿದೆ (ಕೆ.ಜಿ.ಗಳಲ್ಲಿ)
1. ಅಭಿಮನ್ಯು- 5560
2. ಧನಂಜಯ- 5155
3. ಗೋಪಿ- 4970
4. ಭೀಮ- 4945
5. ಏಕಲವ್ಯ- 4730
6. ಕಂಜನ್- 4515
7. ರೋಹಿತ್- 3625
8. ವರಲಕ್ಷ್ಮಿ- 3495
9. ಲಕ್ಷ್ಮೀ- 2480