ಮೈಸೂರು ಚಾಮುಂಡಿಬೆಟ್ಟದಲ್ಲಿ ಬೆಂಕಿ : 200 ಎಕರೆ ಅರಣ್ಯ ನಾಶ - ಬೆಂಕಿ ನಂದಿಸಲು ಹರಸಾಹಸ

| N/A | Published : Feb 22 2025, 11:18 AM IST

Nainital forest fire Top 10 updates  IAF helicopter deployed to fight the fire bsm

ಸಾರಾಂಶ

ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ಮಧ್ಯಾಹ್ನ 12.30ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 200 ಎಕರೆ ಅರಣ್ಯ ಭಸ್ಮವಾಗಿದೆ. ಚಾಮುಂಡಿಬೆಟ್ಟದ ತಪ್ಪಲಿನ ಉತ್ತನಹಳ್ಳಿ ಭಾಗದಲ್ಲಿ ಬೆಂಕಿ ಹೊತ್ತಿ ಲಲಿತಾದ್ರಿಪುರ ಭಾಗದವರೆಗೂ ಹರಡಿತ್ತು

  ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ಮಧ್ಯಾಹ್ನ 12.30ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 200 ಎಕರೆ ಅರಣ್ಯ ಭಸ್ಮವಾಗಿದೆ. ಚಾಮುಂಡಿಬೆಟ್ಟದ ತಪ್ಪಲಿನ ಉತ್ತನಹಳ್ಳಿ ಭಾಗದಲ್ಲಿ ಬೆಂಕಿ ಹೊತ್ತಿ ಲಲಿತಾದ್ರಿಪುರ ಭಾಗದವರೆಗೂ ಹರಡಿತ್ತು. ಗಾಳಿ ಜೋರಾಗಿ ಬೀಸುತ್ತಿದ್ದುದರಿಂದ ಶರವೇಗದಲ್ಲಿ ಬೆಟ್ಟದೆಲ್ಲೆಡೆ ವ್ಯಾಪಿಸಿ, ದಟ್ಟ ಹೊಗೆ ಆವರಿಸಿ ಜನರಲ್ಲಿ ಆತಂಕ ಮೂಡಿಸಿತು.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಸತತ 4 ಗಂಟೆಗೂ ಹೆಚ್ಚು ಕಾಲ ಶ್ರಮಿಸಿದರೂ ಬೆಂಕಿ ನಿಯಂತ್ರಣಕ್ಕೆ ಬಾರಲಿಲ್ಲ. ಒಂದೆಡೆ ಬೆಂಕಿ‌ ಆರಿಸಿದರೇ ಮತ್ತೊಂದು ಕಡೆ ಕಾಣಿಸಿಕೊಳ್ಳುತ್ತಿತ್ತು. ಗಾಳಿ ಪದೇಪದೆ ಪಥ ಬದಲಿಸುತ್ತಿದ್ದರಿಂದ ಬೆಂಕಿ ನಂದಿಸಲು ಕಷ್ಟವಾಗಿತ್ತು. ಕುರುಚಲು ಗಿಡ, ಒಣ ಹುಲ್ಲು, ಸಣ್ಣ ಸಣ್ಣ ಗಿಡಗಳಿಂದಾಗಿ ಬೆಂಕಿ ಪ್ರಮಾಣ ಹೆಚ್ಚಾಗಿತ್ತು.

ನಂಜನಗೂಡು, ಸರಸ್ವತಿಪುರಂ, ಶ್ರೀರಂಗಪಟ್ಟಣ, ಬನ್ನಿಮಂಟಪ ಹಾಗೂ ಹೆಬ್ಬಾಳದ ಅಗ್ನಿಶಾಮಕ ಠಾಣೆ 9 ವಾಹನಗಳಲ್ಲಿ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸಂಜೆ ವೇಳೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರೂ, ಬೆಂಕಿ ನಂದಿಸುವ ಕಾರ್ಯ ಮುಂದುವರಿದಿತ್ತು. ರಾತ್ರಿಯೂ ನಿಗಾ ವಹಿಸಲಾಗುವುದು ಎಂದು ಡಿಸಿಎಫ್ ಡಾ.ಕೆ.ಎನ್. ಬಸವರಾಜ ತಿಳಿಸಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯ ಎಂದು ಶಂಕಿಸಲಾಗಿದೆ.