ಸಾರಾಂಶ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಲವಕ್ಕೆ ಅ.3 ರಂದು ಬೆಳಗ್ಗೆ 9.15 ರಿಂದ 9.45 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಹಿರಿಯ ಸಾಹಿತಿ ಪ್ರೊ.ಹಂಪ ನಾಗರಾಜಯ್ಯ ಚಾಲನೆ ನೀಡುವರು.
ಅಂಶಿ ಪ್ರಸನ್ನಕುಮಾರ್
ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅ.3 ರಂದು ಬೆಳಗ್ಗೆ 9.15 ರಿಂದ 9.45 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಹಿರಿಯ ಸಾಹಿತಿ ಪ್ರೊ.ಹಂಪ ನಾಗರಾಜಯ್ಯ ಚಾಲನೆ ನೀಡುವರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಫ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಎಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ ಜೋಶಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ರಾಜ್ಯದ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಶಿವರಾಜ್ ತಂಗಡಗಿ, ಎಚ್.ಕೆ. ಪಾಟೀಲ್, ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಈಶ್ವರ ಖಂಡ್ರೆ, ಭೈರತಿ ಸುರೇಶ್ ಭಾಗವಹಿಸುವರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸುವರು.
ಅದೇ ದಿನ ಸಂಜೆ 6ಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡುವರು. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಭಾಗವಹಿಸುವರು. ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅಧ್ಯಕ್ಷತೆ ವಹಿಸುವರು.
ಮೊದಲ ದಿನದ ಕಾರ್ಯಕ್ರಮಗಳು
ಅ.3 ರಂದು ಬೆಳಗ್ಗೆ 11.30ಕ್ಕೆ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಚಲನಚಿತ್ರೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಅದೇ ಸಮಯಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಉದ್ಘಾಟಿಸುವರು.
ಮಧ್ಯಾಹ್ನ 12.30ಕ್ಕೆ ಕುಪ್ಪಣ್ಣ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ, ಸಂಜೆ 4ಕ್ಕೆ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಜೆ 4ಕ್ಕೆ ಸಿದ್ದಾರ್ಥನಗರದ ಕಾವಾದಲ್ಲಿ ರಾಜ್ಯಮಟ್ಟದ ಶಿಲ್ಪಕಲೆ ಮತ್ತು ಚಿತ್ರಕಲಾ ಶಿಬಿರದಲ್ಲಿ ರಚಿಸಲಾದ ಕಲಾಕೃತಿಗಳ ಪ್ರದರ್ಶನ, ಲಲಿತಕಲೆ, ಕರಕುಶಲ ಕಲೆಗಳ ಕಲಾಕೃತಿಗಳ ಪ್ರದರ್ಶನ, ರಾಷ್ಟ್ರ ಮಟ್ಟದ ಕಲಾಕೃತಿಗಳ ಕಲಾ ಪ್ರದರ್ಶನ, ಸಂಜೆ 5ಕ್ಕೆ ರಂಗಾಯಣದಲ್ಲಿ ನವರಾತ್ರಿ ಜಾನಪದ ರಂಗ ಉತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಸಂಜೆ 6.30ಕ್ಕೆ ಸಯ್ಯಾಜಿರಾವ್ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರವನ್ನು ಇಂಧನ ಸಚಿವ ಕೆ.ಜೆ. ಜಾರ್ಜ್. ಸಂಜೆ 7.30ಕ್ಕೆ ವಸ್ತು ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು.
ಇತರೆ ಕಾರ್ಯಕ್ರಮಗಳು
ಅ.4 ರಂದು ಬೆಳಗ್ಗೆ 7ಕ್ಕೆ ಪುರಭವನದ ಬಳಿ ಪಾರಂಪರಿಕ ಜಾವಾ ಮೋಟಾರ್ ಸೈಕಲ್ ಸವಾರಿಯನ್ನು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್, 7.30ಕ್ಕೆ ಅರಮನೆ ಒಳಾವರಣದಲ್ಲಿ ರಂಗೋಲಿ ಸ್ಪರ್ಧೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, 9.30ಕ್ಕೆ ಅರಮನೆ ಉತ್ತರ ದ್ವಾರದಲ್ಲಿ ಮಕ್ಕಳ ದಸರಾ ಕಲಾಥಾನ್ , 10ಕ್ಕೆ ಚಲನಚಿತ್ರ ಹಾಗೂ ಸಿನಿಮಾ ಫೋಟ್ ಪ್ರದರ್ಶನವನ್ನು ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, 10ಕ್ಕೆ ಜೆ.ಕೆ. ಮೈದಾನದಲ್ಲಿ ಮಹಿಳಾ ದಸರಾವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಂಜೆ 5ಕ್ಕೆ ಜೆ.ಕೆ. ಮೈದಾನದ ಅಮೃತ ಮಹೋತ್ಸವ ಭವನದಲ್ಲಿ ಯೋಗ ದಸರಾ, ಯೋಗ ನೃತ್ಯರೂಪಕಗಳ ಮನರಂಜನಾ ಕಾರ್ಯಕ್ರವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸುವರು.
ಅ.5 ರಂದು ಬೆಳಗ್ಗೆ 7ಕ್ಕೆ ಪುರಭವನದ ಬಳಿ ಪಾರಂಪರಿಕ ಉಡುಗೆಯಲ್ಲಿ ದಂಪತಿಗಳ ಪಾರಂಪರಿಕ ಟಾಂಗಾ ಸವಾರಿಯನ್ನು ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, 9ಕ್ಕೆ ವಸ್ತು ಪ್ರದರ್ಶನದ ಕಾಳಿಂಗರಾವ್ ಮಂಟಪದಲ್ಲಿ ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಯನ್ನು ಶಾಸಕ ಟಿ.ಎಸ್. ಶ್ರೀವತ್ಸ, 9.30ಕ್ಕೆ ಅರಮನೆ ಉತ್ತರ ದ್ವಾರದಲ್ಲಿ ರೈತ ದಸರಾ ಮೆರವಣಿಗೆಯನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, 11ಕ್ಕೆ ಜೆ.ಕೆ.ಮೈದಾನದಲ್ಲಿ ಕೃಷಿ ವಸ್ತು ಪ್ರದರ್ಶನವನ್ನು ಪಶುಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್, ಮತ್ಸ್ಯಮೇಳವನ್ನು ಮೀನುಗಾರಿಕೆ ಸಚಿವ ಮಂಕಾಳ ಎಸ್. ವೈದ್ಯ, ರೈತ ದಸರಾ ವೇದಿಕೆ ಕಾರ್ಯಕ್ರವನ್ನು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಉದ್ಘಾಟಿಸುವರು.
ಅ.6 ರಂದು ಬೆಳಗ್ಗೆ 7ಕ್ಕೆ ಪುರಭವನದಲ್ಲಿ ಪಾರಂಪರಿಕ ನಡಿಗೆಯನ್ನು ಶಾಸಕ ತನ್ವೀರ್ ಸೇಠ್, 10ಕ್ಕೆ ಕಲಾಮಂದಿರದಲ್ಲಿ ಮಕ್ಕಳ ದಸರಾವನ್ನು ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಜೆ.ಕೆ. ಮೈದಾನದಲ್ಲಿ ಮುದ್ದುಪ್ರಾಣಿಗಳ ಪ್ರದರ್ಶನವನ್ನು ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಉದ್ಘಾಟಿಸುವರು. ಸಂಜೆ 4ಕ್ಕೆ ಜೆ.ಕೆ. ಮೈದಾನದಲ್ಲಿ ಮುದ್ದು ಪ್ರಾಣಿಗಳ ಸ್ಪರ್ಧೆ ವಿಜೇತರಿಗೆ ಉಸ್ತುವಾರ ಸಚಿವ ಎಚ್.ಸಿ. ಮಹದೇವಪ್ಪ ಬಹುಮಾನ ವಿತರಿಸುವರು. ಸಂಜೆ 6ಕ್ಕೆ ಉತ್ತನಹಳ್ಳಿ ವರ್ತುಲ ರಸ್ತೆ ಬಳಿ ಯುವದಸೆರೆಗ ಅಶ್ವಿನಿ ಪುನೀತ್ ರಾಜ್ಕುಮಾರ್ ಚಾಲನೆ ನೀಡುವರು. ರಾತ್ರಿ 8ಕ್ಕೆ ಬನ್ನಿಮಂಟಪ ಕವಾಯತು ಮೈದಾನದಲ್ಲಿ ಡ್ರೋನ್ ಪ್ರದರ್ಶನಕ್ಕೆ ಎಚ್.ಸಿ. ಮಹದೇವಪ್ಪ ಚಾಲನೆ ನೀಡುವರು.
ಅ.7 ರಂದು ಬೆಳಗ್ಗೆ 6ಕ್ಕ ಅರಮನೆ ಆವರಣದಲ್ಲಿ ಯೋಗ ಸರಪಳಿ- ಪ್ರಜಾಪ್ರಭುತ್ವಕ್ಕಾಗಿ ಯೋಗಕ್ಕೆ ಉಸ್ತುವಾರ ಸಚಿವ ಎಚ್.ಸಿ. ಮಹದೇವಪ್ಪ, ಸಂಜೆ 5.30ಕ್ಕೆ ಜೆ.ಕೆ. ಮೈದಾನದಲ್ಲಿ ಹಾಲು ಕರೆಯುವ ಸ್ಪರ್ಧೆ ವಿಜೇತರಿಗೆ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಬಹುಮಾನ ನೀಡುವರು.
ಅ.8 ರಂದು ಸಂಜೆ 4ಕ್ಕೆ ಐನೆಕ್ಸ್ ಚಿತ್ರಮಂದಿರದಲ್ಲಿ ಕಿರುಚಿತ್ರ ಸ್ಪರ್ಧೆ ಪ್ರಶಸ್ತಿಯನ್ನು ನಟ ಮಂಡ್ಯ ರಮೇಶ್ ಪ್ರದಾನ ಮಾಡುವರು.
ಅ.9 ರಂದು ಬೆಳಗ್ಗೆ 7ಕ್ಕೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರಕ್ಕೆ ಸಚಿವ ಕೆ. ವೆಂಕಟೇಶ್ ಚಾಲನೆ ನೀಡುವರು.
ಐದು ಕವಿಗೋಷ್ಠಿಗಳು
ಈ ಬಾರಿ ಪಂಚ ಕಾವ್ಯೋತ್ಸವ ಶೀರ್ಷಿಕೆಯಲ್ಲಿ ಐದು ಕವಿಗೋಷ್ಠಿಗಳು ಜಗನ್ಮೋಹನ ಅರಮನೆಯಲ್ಲಿ ಜರುಗಲಿವೆ.
ಅ.5 ರಂದು ಬೆಳಗ್ಗೆ 10.30ಕ್ಕೆ ದಸರಾ ಕವಿಗೋಷ್ಠಿ- ಪಂಚ ಕಾವ್ಯೋತ್ಸವನ್ನು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಅ.6 ರಂದು ಬೆಳಗ್ಗೆ 10.30ಕ್ಕೆ ಸಮಾನತಾ ಕವಿಗೋಷ್ಠಿಯನ್ನು ಸಾಹಿತಿ ದೇವು ಪತ್ತಾರ, ಅ.7 ರಂದು ಬೆಳಗ್ಗೆ 10.30ಕ್ಕೆ ಸಂತಸ ಕವಿಗೋಷ್ಠಿಗೆ ಸಾಹಿತಿ ಡಾ.ಹಂಪ ನಾಗರಾಜಯ್ಯ, ಅ.8 ರಂದು ಬೆಳಗ್ಗೆ 10.30ಕ್ಕೆ ಸಮಷ್ಠಿ ಕವಿಗೋಷ್ಠಿಗೆ ಕವಿ ಡಾ.ಎಚ್.ಎಸ್. ಶಿವಪ್ರಕಾಶ್, ಅ. 9 ರಂದು ಬೆಳಗ್ಗೆ 10.30ಕ್ಕೆ ಸಮೃದ್ಧ ಕವಿಗೋಷ್ಠಿಗೆ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್. ಪುಷ್ಪಾ ಉದ್ಘಾಟಿಸುವರು.
12 ರಂದು ಜಂಬೂಸವಾರಿ- ಪಂಜಿನ ಕವಾಯತು
ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯು ಅ.12 ರಂದು ನಡೆಯಲಿದೆ. ಅಂದು ಮಧ್ಯಾಹ್ನ 1.41 ರಿಂದ 2.10 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದೀಧ್ವಜಕ್ಕೆ ಪೂಜೆ ಸಲ್ಲಿಸುವರು. ಸಂಜೆ 4 ರಿಂದ 4.30 ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ಸಾಗುವ ನಾಡಿನ ಅಧಿದೇವತೆ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವರು. ಡಿಸಿಎಂ ಡಿ.ಕೆ. ಶಿವಕುಮಾರ್, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸುವರು.
ಅದೇ ದಿನ ಸಂಜೆ 7ಕ್ಕೆ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು ನಡೆಯಲಿದ್ದು. ರಾಜ್ಯಪಾಲ ಥಾವರ್ಚಂದ್ ಗೆಹ್ಲೋತ್ ಗೌರವ ವಂದನೆ ಸ್ವೀಕರಿಸುವರು. ಸಿಎಂ, ಡಿಸಿಎಂ ಮತ್ತಿತರರು ಭಾಗವಹಿಸುವರು. ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸುವರು.