ದಸರಾ ಗಜಪಡೆಯ ಮಹೇಂದ್ರ ಆನೆಯು ಹಿಂದೇಟು ಹಾಕಿದ್ದರಿಂದ ಇದೇ ಮೊದಲ ಬಾರಿಗೆ ಮರದ ಅಂಬಾರಿ ತಾಲೀಮು ರಾಜಮಾರ್ಗದಲ್ಲಿ ಅರ್ಧಕ್ಕೆ ಮೊಟಕುಗೊಂಡಿರುವ ಘಟನೆ ನಡೆದಿದೆ. ಮೈಸೂರು ಅರಮನೆಯಿಂದ ಮರದ ಅಂಬಾರಿ ಹೊತ್ತು ಸಾಗಿದ ಮಹೇಂದ್ರ ಆನೆಯು ಕೆ.ಆರ್.ವೃತ್ತದಲ್ಲಿ ಹಿಂದೇಟು ಹಾಕಿತು.

ಮೈಸೂರು : ದಸರಾ ಗಜಪಡೆಯ ಮಹೇಂದ್ರ ಆನೆಯು ಹಿಂದೇಟು ಹಾಕಿದ್ದರಿಂದ ಇದೇ ಮೊದಲ ಬಾರಿಗೆ ಮರದ ಅಂಬಾರಿ ತಾಲೀಮು ರಾಜಮಾರ್ಗದಲ್ಲಿ ಅರ್ಧಕ್ಕೆ ಮೊಟಕುಗೊಂಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ಮೈಸೂರು ಅರಮನೆಯಿಂದ ಮರದ ಅಂಬಾರಿ ಹೊತ್ತು ಸಾಗಿದ ಮಹೇಂದ್ರ ಆನೆಯು ಕೆ.ಆರ್.ವೃತ್ತದಲ್ಲಿ ಹಿಂದೇಟು ಹಾಕಿತು. ಕುಮ್ಕಿ ಆನೆಗಳ ಸಹಾಯದಿಂದ ಮುಂದೆ ಸಾಗಿದ ಮಹೇಂದ್ರ ಬಾಟಾ ಶೋರೂಂ ಜಂಕ್ಷನ್ ಬಳಿ ಮತ್ತೆ ನಿಧಾನವಾಯಿತು. ಅಲ್ಲಿಂದ ಮುಂದೆ ಸಾಗಿದ ಮಹೇಂದ್ರ, ಆಯುರ್ವೇದ ವೃತ್ತದಲ್ಲಿ ಮುಂದೇನೂ ಹೋಗದೇ ಹಿಂದೇನೂ ಬಾರದೇ ನಿಂತೇ ಬಿಟ್ಟಿತ್ತು.

ಹೀಗಾಗಿ, ಆನೆಯ ಸುರಕ್ಷತೆಯ ದೃಷ್ಟಿಯಿಂದ ರಸ್ತೆ ಬದಿಯ ಮರಕ್ಕೆ ಹಗ್ಗ ಕಟ್ಟಿ, ಮರದ ಅಂಬಾರಿಯನ್ನು ಮಹೇಂದ್ರ ಮೈಮೇಲಿಂದ ಇಳಿಸಿ, ಗೂಡ್ಸ್ ಆಟೋದಲ್ಲಿ ಇರಿಸಲಾಯಿತು. ಅಲ್ಲದೆ, ತಾಲೀಮನ್ನು ಅರ್ಧಕ್ಕೆ ಮೊಟಕುಗೊಳಿಸಿ ಎಲ್ಲ ಆನೆಗಳು ವಾಪಸ್ ಅರಮನೆಗೆ ಸಾಗಿದವು. ಮರದ ಅಂಬಾರಿಯನ್ನು ಗೂಡ್ಸ್ ಆಟೋದಲ್ಲಿ ಅರಮನೆಗೆ ಸುರಕ್ಷಿತವಾಗಿ ಸಾಗಿಸಲಾಯಿತು.

2ನೇ ಬಾರಿ ಮೊಟಕು:

ಕಳೆದ ಸೆ.25 ರಂದು ಮೊದಲ ದಿನ ಮರದ ಅಂಬಾರಿ ಹೊತ್ತಿದ್ದ ಮಹೇಂದ್ರ ಆನೆ ಜೋರು ಮಳೆಯ ನಡುವೆ ತಾಲೀಮಿಗೆ ತೆರಳಲು ಒಲ್ಲೆ ಎಂದ ಕಾರಣ ಮರದ ಅಂಬಾರಿಯ ತಾಲೀಮು ಬಲರಾಮ ದ್ವಾರದಲ್ಲಿ ಮೊಟಕುಗೊಂಡಿತ್ತು.

ಮಹೇಂದ್ರ ಆನೆಯ ಮೇಲೆ ಮೊದಲು ಮರದ ಅಂಬಾರಿ ಹೊರಿಸಿದಾಗ ಜೋರು ಮಳೆ ಕಾರಣ ಅರಮನೆ ಬಲರಾಮ ದ್ವಾರದ ಬಳಿಯೇ ನಿಂತುಕೊಂಡಿತ್ತು. ಆನೆಯ ಸುರಕ್ಷತೆಗೆ ಮರದ ಅಂಬಾರಿ ಇಳಿಸಲಾಗಿತ್ತು. ಗುರುವಾರ ಸಹ ಆಯುರ್ವೇದ ವೃತ್ತದ ಬಳಿ ನಿಂತುಕೊಂಡಿದ್ದರಿಂದ ಆನೆಯ ಸುರಕ್ಷತೆ ದೃಷ್ಟಿಯಿಂದ ಮರದ ಅಂಬಾರಿ ಇಳಿಸಿ, ವಾಪಸ್ ಕರೆ ತರಲಾಗಿದೆ. ಈವರೆಗೆ ಯಾವುದೇ ಕಾರಣ ತಿಳಿದು ಬಂದಿಲ್ಲ. ಹೀಗಾಗಿ, ಮಹೇಂದ್ರ ಆನೆಯ ಆರೋಗ್ಯ ಪರೀಕ್ಷೆ ಮಾಡಲಾಗುತ್ತಿದೆ.

-ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್