ಸಾರಾಂಶ
ಹಣಕಾಸು ಸಮಸ್ಯೆಯಿಂದಾಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಮೈಸೂರಿನ ವಿಶ್ವೇಶ್ವರನಗರದ ಸಂಕಲ್ಪ್ ಸೇರಿನ್ ಅಪಾರ್ಟ್‌ಮೆಂಟ್‌ನಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.
ಮೈಸೂರು : ಹಣಕಾಸು ಸಮಸ್ಯೆಯಿಂದಾಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಮೈಸೂರಿನ ವಿಶ್ವೇಶ್ವರನಗರದ ಸಂಕಲ್ಪ್ ಸೇರಿನ್ ಅಪಾರ್ಟ್‌ಮೆಂಟ್‌ನಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.
ವಿದೇಶಗಳಿಗೆ ಮ್ಯಾನ್ ಪವರ್ ಪೂರೈಕೆ ಕೆಲಸ ಮಾಡಿಕೊಂಡಿದ್ದ ಚೇತನ್ (45), ಅವರ ತಾಯಿ ಪ್ರಿಯಂವದಾ (67), ಪತ್ನಿ ರೂಪಾಲಿ (42) ಮತ್ತು ಪುತ್ರ ಕುಶಾಲ್ (16) ಮೃತಪಟ್ಟಿದ್ದಾರೆ. ತಾಯಿ, ಪತ್ನಿ ಮತ್ತು ಪುತ್ರನ ಹತ್ಯೆಗೈದು ಬಳಿಕ ಚೇತನ್ ನೇಣು ಹಾಕಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಆತ್ಮಹತ್ಯೆಗೂ ಮುನ್ನ ಚೇತನ್ ಸೋಮವಾರ ಬೆಳಗಿನ ಜಾವ ಅಮೆರಿಕದಲ್ಲಿರುವ ಸಹೋದರ ಭರತ್‌ಗೆ, ಆರ್ಥಿಕ ಸಮಸ್ಯೆಯಿಂದಾಗಿ ಕುಟುಂಬದರೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಾಟ್ಸಪ್ ವಾಯ್ಸ್ ಮೇಸೆಜ್ ಕಳುಹಿಸಿದ್ದಾರೆ. ಭರತ್ ಕೂಡಲೇ ಮೈಸೂರಿನಲ್ಲಿದ್ದ ಚೇತನ್ ಮಾವ ಸೇತುರಾಮ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬೆಳಗಿನ ಜಾವ 4ರ ಹೊತ್ತಿಗೆ ಸೇತುರಾಮ್ ಬಂದು ನೋಡಿದಾಗ ಅದಾಗಲೇ ನಾಲ್ವರು ಮೃತಪಟ್ಟಿದ್ದರು. ಪೊಲೀಸರಿಗೆ ತಿಳಿಸಿದ್ದಾರೆ.
ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಬಂದು ಪರಿಶೀಲಿಸಿದಾಗ ಡೆತ್ ನೋಟ್ ಸಿಕ್ಕಿದೆ. ಹಣಕಾಸಿನ ಸಮಸ್ಯೆಯಿಂದಾಗಿ ನಾವು ಸಾಯುತ್ತಿದ್ದೇವೆ. ನಮ್ಮ ಸಾವಿಗೆ ಬೇರೆ ಯಾರೂ ಕಾರಣರಲ್ಲ ಎಂದು ಚೇತನ್ ಬರೆದಿದ್ದಾರೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ಪ್ಲಾಟ್ ಖರೀದಿ, ವಿಪರೀತ ಸಾಲ
ಹಾಸನ ಜಿಲ್ಲೆ ಗೊರೂರು ಮಂಜುನಾಥ್ ಎಂಬುವರ ಪುತ್ರ ಚೇತನ್ ಮೆಕಾನಿಕಲ್ ಎಂಜಿನಿಯರ್. ಸೌದಿ ಆರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದು ಕೊರೋನಾ ಸಂದರ್ಭ ಕುಟುಂಬ ಸಮೇತ ವಾಪಸ್ ಆಗಿ ಮೈಸೂರು ವಿಶ್ವೇಶ್ವರನಗರದಲ್ಲಿರುವ ಸಂಕಲ್ಪ್ ಸೇರಿನ್ ಅಪಾರ್ಟ್ ಮೆಂಟ್‌ನಲ್ಲಿ ಎರಡು ಪ್ಲಾಟ್ ಖರೀದಿಸಿದ್ದರು, ಒಂದದಲ್ಲಿ ಚೇತನ್ ಕುಟುಂಬ, ಮತ್ತೊಂದರಲ್ಲಿ ತಾಯಿ ವಾಸವಿದ್ದರು. ಚೇತನ್ ಗಲ್ಫ್ ಸೇರಿ ವಿದೇಶಗಳಿಗೆ ಮ್ಯಾನ್ ಪವರ್ ಪೂರೈಕೆ ಕೆಲಸ ಮಾಡುತ್ತಿದ್ದು, ಕೋವಿಡ್ ಬಳಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರೆನ್ನಲಾಗಿದೆ.