ಸ್ಥಳೀಯ ಮಾರುಕಟ್ಟೆಗಳಲ್ಲಿ ದೊರಕುವಂತಹ ತರಕಾರಿ ಮತ್ತು ಹಣ್ಣುಗಳು ಹೆಚ್ಚು ರಾಸಾಯನಿಕವಾಗಿದ್ದು, ಇದರಿಂದ ತನ್ನದೇ ಆದ ಸ್ವಾದಿಷ್ಟ, ಸುವಾಸನೆ ಮತ್ತು ತಾಜಾತನವು ಕಡಿಮೆಯಾಗಿರುತ್ತದೆ. ಅದಲ್ಲದೇ ಹೆಚ್ಚಿನ ಪೋಷಕಾಂಶಗಳ ಕೊರತೆಯು ಇರುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ವಿಸ್ತರಣಾ ಶಿಕ್ಷಣ ಘಟಕ, ಸಾವಯವ ಕೃಷಿ ಸಂಶೋಧನಾ ಕೇಂದ್ರ ವತಿಯಿಂದ ಪೌಷ್ಟಿಕ ಕೈತೋಟ ಮತ್ತು ಅಣಬೆ ಕೃಷಿ ತರಬೇತಿಯನ್ನು ಎಚ್.ಡಿ. ಕೋಟೆಯಲ್ಲಿ ಸೋಮವಾರ ಆಯೋಜಿಸಲಾಗಿತ್ತು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನಗಳ ವಿವಿ ವಿಸ್ತರಣಾ ನಿರ್ದೇಶಕ ಡಾ.ಸಿ. ರಾಮಚಂದ್ರ ಮಾತನಾಡಿ, ಸ್ಥಳೀಯ ಮಾರುಕಟ್ಟೆಗಳಲ್ಲಿ ದೊರಕುವಂತಹ ತರಕಾರಿ ಮತ್ತು ಹಣ್ಣುಗಳು ಹೆಚ್ಚು ರಾಸಾಯನಿಕವಾಗಿದ್ದು, ಇದರಿಂದ ತನ್ನದೇ ಆದ ಸ್ವಾದಿಷ್ಟ, ಸುವಾಸನೆ ಮತ್ತು ತಾಜಾತನವು ಕಡಿಮೆಯಾಗಿರುತ್ತದೆ. ಅದಲ್ಲದೇ ಹೆಚ್ಚಿನ ಪೋಷಕಾಂಶಗಳ ಕೊರತೆಯು ಇರುತ್ತದೆ ಎಂದರು.

ಆದ ಕಾರಣ ತಮ್ಮದೇ ಆದ ಪೌಷ್ಟಿಕ ಕೈತೋಟದಲ್ಲಿ ಬೆಳೆದ ಉತ್ಪನ್ನಗಳನ್ನು ಬಳಸುವುದರಿಂದ ಕೊಯ್ಲು ಮತ್ತು ಬಳಕೆಯ ಸಮಯದ ಅಂತರ ಕಡಿಮೆಯಾಗಿ ಉತ್ತಮ ದರ್ಜೆಯಾಗಿದ್ದು, ಪೋಷಕಾಂಶಗಳು ಪೋಲಾಗುವುದಿಲ್ಲ. ಅಲ್ಲದೆ ಬಿಡುವಿನ ವೇಳೆಗಳಲ್ಲಿ ಇಂತಹ ಕೈತೋಟದ ಕೆಲಸಗಳಲ್ಲಿ ನಿರತರಾಗುವುದರಿಂದ ಕುಟುಂಬದ ಸದಸ್ಯರೆಲ್ಲರೂ ಒಳ್ಳೆಯ ಅಭಿರುಚಿಯಿಂದ ಭಾಗಿಗಳಾಗಬಹುದು ಎಂದರು.

ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ್ ಮಾತನಾಡಿ, ಮಾದರಿ ಪೌಷ್ಟಿಕ- ಕೈತೋಟದಲ್ಲಿ ಹಾಗೂ ಹಣ್ಣುಗಳನ್ನು ಬೇರೆ ಬೇರೆ ಜಾಗ ಅಥವಾ ಒಟ್ಟುಗೂಡಿಸಿ ಬೆಳೆಯಬಹುದು. ಇವುಗಳ ಬೇಸಾಯವನ್ನು ಲಾಭದಾಯಕವಾಗಿರಿಸಲು ಬಹಳ ಸಮಗ್ರ ರೀತಿಯಲ್ಲಿ ರೂಪಿಸುವುದು ಮುಖ್ಯ ಅಂಶ. ಇದರ ವಿಸ್ತೀರ್ಣವು ಅಲ್ಲಿ ಸಿಗುವ ಸ್ಥಳ, ತರಕಾರಿ ಹಾಗೂ ಹಣ್ಣುಗಳ ದಿನದ ಬೇಡಿಕೆ, ಉಸ್ತುವಾರಿಯ ಸಮಯ ಇವುಗಳ ಮೇಲೆ ಅವಲಂಬಿಸಿದೆ ಎಂದರು.

ಸರಾಸರಿ 4- 5 ಸದಸ್ಯರಿರುವ ಕುಟುಂಬಕ್ಕೆ ತರಕಾರಿಗಳನ್ನು ಒದಗಿಸಲು 15 ಚದರ ಮೀಟರ್‌ ಗಳ ವಿಸ್ತೀರ್ಣದ ಸ್ಥಳ ಲಭ್ಯತೆ ಮತ್ತು ಕುಟುಂಬದ ಸದಸ್ಯರ ಸಂಖ್ಯೆಯ ಮೇಲೆ ಸಣ್ಣ, ಮಧ್ಯಸ್ಥ ಹಾಗೂ ದೊಡ್ಡ ಕೈತೋಟಗಳನ್ನಾಗಿ ಯೋಜಿಸಿ ಬೆಳೆಸಬಹುದು. ತೋಟದ ರಚನೆ ಮಾಡುವಾಗ ತರಕಾರಿ ಬೆಳೆದ ಪೂರ್ಣ ಬೆಳವಣಿಗೆಗೆ ಅವಶ್ಯಕವಾದ ಸೂರ್ಯನ ಶಾಖ ಸಿಗುವಂತಾಗಲು ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳ ಜಾಗಗಳನ್ನು ತರಕಾರಿ ಬೆಳೆಗಳಿಗೆ ಮೀಸಲಿಡುವುದು ಉತ್ತಮ. ಆದಷ್ಟು ಚದುರಾಕಾರದ ಮಡಿಗಳನ್ನಾಗಿ ವಿಂಗಡಿಸುವುದು ಸೂಕ್ತ ಎಂದು ಅವರು ತಿಳಿಸಿದರು.

ಅಣಬೆಯು ಅಧಿಕ ಪ್ರೋಟೀನು, ನಾರಿನಂಶ, ಜೀವಸತ್ವ, ಕ್ಯಾಲ್ಷಿಯಂ, ಕಬ್ಬಿಣ ಮತ್ತು ಸತುವಿನಂಶವನ್ನು ಹೊಂದಿದ್ದು, ಕಡಿಮೆ ಪ್ರಮಾಣದ ಜಿಡ್ಡಿನಾಂಶ ಹಾಗೂ ಶರ್ಕರವನ್ನು ಹೊಂದಿರುವುದು. ಬಹುಪಾಲು ಜನರು ಅಣಬೆ ಮಾಂಸಹಾರವೆಂಬ ತಪ್ಪು ತಿಳುವಳಿಕೆಯಿಂದ ಉಪಯೋಗಿಸುತ್ತಿಲ್ಲ. ಆದರೆ, ಇದು ಸಸ್ಯಹಾರವಾಗಿದ್ದು ಫಂಗೈ ಎಂಬ ಸೂಕ್ಷ್ಮಜೀವಿಗಳ ಗುಂಪಿಗೆ ಸೇರಿದೆ. ಅಣಬೆಗಳು ಔಷಧಿ ಗುಣಗಳಿಗೂ ಹೆಸರುವಾಸಿಯಾಗಿದ್ದು, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಸಕ್ಕರೆ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡ ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ ಎಂದರು.

ಪೀಪಲ್‌ ಟ್ರೀ ಸಂಸ್ಥೆಯ ಲತಾ, ಚನ್ನರಾಜು, ಡ್ಯಾನಿಯಲ್, ಕ್ಷೇತ್ರ ಸಹಾಯಕ ಧರಣೇಶ್ ಮೊದಲಾದವರು ಇದ್ದರು.