ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯ ಮತ್ತು ದೇಶದ ಪ್ರತಿಷ್ಠಿತ ವಿವಿಗಳಲ್ಲಿ ಒಂದಾದ ಮೈಸೂರು ವಿವಿಯು ಪ್ರಸಕ್ತ ಸಾಲಿನಲ್ಲಿ 107.72 ಕೋಟಿ ಕೊರತೆಯ ಬಜೆಟ್ ಮಂಡಿಸಿದ್ದು, ಅದನ್ನು ಸರಿದೂಗಿಸಲು ಏನೆಲ್ಲ ಕ್ರಮ ಕೈಗೊಳ್ಳಬಹುದು ಎಂಬ ಜಿಜ್ಞಾಸೆಯಲ್ಲಿದೆ.ಮೈಸೂರು ವಿವಿಗೆ ಸೇರಿದ ಹಾಸ್ಟೆಲ್‌ಗಳನ್ನು ಸಮಾಜ ಕಲ್ಯಾಣ ಇಲಾಖೆ ಬಿಸಿಎಂ ಇಲಾಖೆಗೆ ವಹಿಸುವುದು, ಪಿಂಚಣಿಯನ್ನು ಸರ್ಕಾರದಿಂದಲೇ ಕೊಡಲು ಒತ್ತಡ ಹೇರುವುದು ಸೇರಿದಂತೆ ವಿವಿಧ ಕ್ರಮ ಕೈಗೊಳ್ಳಲು ಶುಕ್ರವಾರ ಕ್ರಾಫರ್ಡ್ ಭವನದಲ್ಲಿ ನಡೆದ ಶಿಕ್ಷಣ ಮಂಡಳಿ ವಿಶೇಷ ಸಭೆಯಲ್ಲಿ ಚರ್ಚಿಸಲಾಯಿತು.
2025-26ನೇ ಸಾಲಿನ ವಿವಿಯ ಆಯವ್ಯಯದ ಅಂದಾಜುಗಳಲ್ಲಿ ಒಟ್ಟಾರೆ ನಿರೀಕ್ಷಿತ ಆದಾಯ 295.59 ಕೋಟಿ ಮತ್ತು ಒಟ್ಟಾರೆ ನಿರೀಕ್ಷಿತ ವೆಚ್ಚ 403.31 ಕೋಟಿಯಾಗಿದ್ದು, 107.72 ಕೋಟಿ ರು. ಕೊರತೆ ಎದುರಿಸಲಾಗುತ್ತಿದೆ ಎಂದು ಹಣಕಾಸು ಅಧಿಕಾರಿ ಕೆ.ಎಸ್. ರೇಖಾ ತಿಳಿಸಿದರು.ಅಂತೆಯೇ 2025-26ನೇ ಸಾಲಿಗೆ ರಾಜ್ಯ ಸರ್ಕಾರವು ಪಿಂಚಣಿ ಅನುದಾನ 157,74,42,030 ಸಂಪೂರ್ಣ ಬಿಡುಗಡೆ ಮಾಡಿದ ಪಕ್ಷದಲ್ಲಿ 18 ಲಕ್ಷ ಮಾತ್ರ ಕೊರತೆ ಆಗುತ್ತಿತ್ತು. ಆದರೆ 50 ಕೋಟಿ ಮಾತ್ರ ನೀಡಿರುವುದರಿಂದ 107.72 ಕೋಟಿ ಕೊರತೆಯಾಗಿದೆ ಎಂದರು.
ಮೈಸೂರು ವಿವಿಯ ಆಯವ್ಯಯ ಅಂದಾಜಿನಲ್ಲಿ ಖಾಯಂ ಸಿಬ್ಬಂದಿ ವೇತನ ಮತ್ತು ಪಿಂಚಣಿಗಳ ಅನುದಾನದ ಕುರಿತಾಗಿ ರಾಜ್ಯ ಸರ್ಕಾರದಿಂದ ಒಟ್ಟಾರೆ 177,68,71,000 (ವೇತನಾನುದಾನ 127,68,71,000 ಮತ್ತು ಪಿಂಚಣಿ ಅನುದಾನ 50 ಕೋಟಿ ರು.) ಮಂಜೂರಾಗಿದೆ. 2025-26ನೇ ಸಾಲಿಗೆ ಅಭಿವೃದ್ಧಿ ಅನುದಾನ 3 ಕೋಟಿ ರು. ಮತ್ತು ಪ.ಜಾತಿ, ಪ.ಪಂಗಡ ವಿದ್ಯಾರ್ಥಿಗಳಿಗೆ 4 ಕೋಟಿ ರು. ಅನುದಾನ ಮಂಜೂರಾತಿಯನ್ನು ರಾಜ್ಯ ಸರ್ಕಾರದಿಂದ ನಿರೀಕ್ಷಿಸಿ, ಒಟ್ಟಾರೆ 184,68,71,000 ರು. ಅದಾಯವಾಗಿ ಪರಿಗಣಿಸಲಾಗಿದೆ.ಆಂತರಿಕ ನೊಂದಣಿ, ಪ್ರವೇಶ, ಸಂಯೋಜನೆ, ಇತರ ಶುಲ್ಕಗಳು, ಸ್ಕೀಂ ಬಿ ಕೋರ್ಸ್, ಪರೀಕ್ಷಾ ಚಟುವಟಿಕೆ, ವಿವಿಯ ವಿವಿಧ ಆಸ್ತಿಗಳಿಂದ ಹಾಗೂ ಇತರೆ ಮೂಲಗಳಿಂದ ಒಟ್ಟಾರೆ 108.50 ಕೋಟಿ ನಿರೀಕ್ಷಿತ ಆಂತರಿಕ ಆದಾಯವಾಗಿದೆ.
2024-25ನೇ ಸಾಲಿನ ಆಯವ್ಯ ಅಂದಾಜಿನ ಅನ್ವಯ 2,40,48,187 ಕೋಟಿ ಉಳಿಯುವ ಸಂಭವವಿದ್ದು, ಇದನ್ನೇ ಆರಂಭಿಕ ಶಿಲ್ಕು ಎಂದು ಪರಿಗಣಿಸಲಾಗಿದೆ. 2025-26ರಲ್ಲಿ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನವು 184.68 ಕೋಟಿಯಾದರೆ, ವಿವಿಯ ಆಂತರಿಕ ಆದಾಯ, ಆರಂಭಿಕ ಶಿಲ್ಕು ಸೇರಿ 295.59 ಕೋಟಿ ರು. ಆಗಿದೆ.ಒಗ್ಗಟ್ಟಾಗಿ ಏನಾದರೂ ಮಾಡಬೇಕು:
ಬಜೆಟ್ ಮಂಡನೆ ಬಳಿಕ ಮಾತನಾಡಿದ ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಪಿಂಚಣಿ, ಗ್ರಾಚ್ಯುಟಿಯಿಂದ ಕೊರತೆ ಪ್ರಮಾಣ ಹೆಚ್ಚಾಗಿದೆ. ಪಿಂಚಣಿಯನ್ನು ಸರ್ಕಾರ ಕೊಡದಿದ್ದರೆ ಕಷ್ಟವಾಗುತ್ತದೆ. ಮಾರ್ಚ್ ಅಂತ್ಯವರೆಗೆ ನಾವು ಪಿಂಚಣಿ ನೀಡಿದ್ದೇವೆ. ಆದರೆ ಏಪ್ರಿಲ್ ತಿಂಗಳಿಂದ ತೊಂದರೆ ಆಗುತ್ತದೆ. ನಾವೆಲ್ಲರೂ ಒಗ್ಗಟ್ಟಾಗಿ ವೆಚ್ಚ ನಿಯಂತ್ರಿಸದಿದ್ದರೆ ಕಷ್ಟ ಎಂದರು.ಸರ್ಕಾರ ಹೊಸದಾಗಿ ಪ್ರಾಧ್ಯಾಪಕರ ನೇಮಕ ಮಾಡಿದರೆ ಅತಿಥಿ ಉಪನ್ಯಾಸಕರಿಗೆ ನೀಡುವ ಹಣ ಉಳಿತಾಯವಾಗುತ್ತದೆ. ಪಿಂಚಣಿ ನೀಡುವುದು ಮತ್ತು ಬೋಧಕರ ನೇಮಕ ಸಂಬಂಧ ನಾನು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಈಗ ನಾವು ಆದಾಯದ ಮೂಲ ಹೆಚ್ಚಿಸಿಕೊಳ್ಳದಿದ್ದರೆ ಬೇರೆ ದಾರಿ ಇಲ್ಲ. ಪಿಂಚಣಿ ಕೊಡಲು ಕಷ್ಟವಾದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
2019 ರವರೆಗೆ ಸರ್ಕಾರವೇ ಪಿಂಚಣಿ ನೀಡುತ್ತಿತ್ತು. ಕೋವಿಡ್ ಬಳಿಕ ಎಲ್‌ಐಸಿ ಪೆನ್ಷನ್ ಫಂಡ್ ಮೂಲಕ ಕೊಡಲಾಗುತ್ತಿತ್ತು. ಈಗ ನಾವೇ ಅದನ್ನು ಭರಿಸಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಸಂಕಷ್ಟವಿದೆ. ಮುಂದಿನ ದಿನಗಳಲ್ಲಿ ಉಳಿದ ವಿವಿಗಳೂ ಇದೇ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದರು.ಪ್ರೊ. ಗುರುಸಿದ್ದಯ್ಯ ಮಾತನಾಡಿ, ಹಂಪಿ ಮತ್ತು ಬೆಂಗಳೂರು ನಗರ ವಿವಿಯಲ್ಲಿ ಹಾಸ್ಟೆಲ್ ಅನ್ನು ಸಮಾಜ ಕಲ್ಯಾಣ ಇಲಾಖೆ ಮೂಲಕ ನಿರ್ವಹಿಸಲಾಗುತ್ತಿದೆ. ನಮ್ಮಲ್ಲಿಯೂ ಹೀಗೆಯೇ ಆದರೆ ಒಂದಷ್ಟು ಅನುದಾನ ಉಳಿಸಬಹುದು. ಅಂತೆಯೇ ಅಧ್ಯಾಪಕರು ಮತ್ತು ಸಿಬ್ಬಂದಿಗೆ ನೀಡಿರುವ ವಸತಿಗೃಹಗಳಿಗೆ ಒಂದು ನಿರ್ದಿಷ್ಟ ಮಾನದಂಡದ ಆಧಾರದ ಮೇಲೆ ಬಾಡಿಗೆ ನಿಗದಿಪಡಿಸಬೇಕು ಎಂದರು.
ಕೇಂದ್ರದಿಂದ ಸಬ್ಸಿಡಿ ಪಡೆದು ವಿವಿ ಕಟ್ಟಡದ ಮೇಲೆ ಸೋಲಾರ್ ಅಳವಡಿಸಿ, ವಿದ್ಯುತ್‌ಉತ್ಪಾದಿಸಿ ಮಾರಾಟ ಮಾಡಬಹುದು ಎಂದು ಸಲಹೆ ನೀಡಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಹಾಸ್ಟೆಲ್‌ಗಳನ್ನು ಸಮಾಜ ಕಲ್ಯಾಣ ಇಲಾಖೆ ಮೂಲಕ ನಿರ್ವಹಿಸುವುದಾದರೆ ಆಗಲಿ, ಅದರ ಬಗ್ಗೆ ಪರಿಶೀಲಿಸಿ ಮಾಹಿತಿ ಕೊಡಿ. ಆದರೆ ಸೋಲಾರ್‌ಅಳವಡಿಕೆಗೆ ನಾವು ಮೊದಲು ಬಂಡವಾಳ ಹಾಕಬೇಕಲ್ಲವೇ ಆದ್ದರಿಂದ ಅದು ಅಸಾಧ್ಯ ಎಂದರು.
ಪ್ರೊ.ಡಿ. ಆನಂದ್, ಪ್ರೊ.ಎಂ.ಎಸ್. ಶೇಖರ್ ಸೇರಿದಂತೆ ಹಲವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಎನ್‌ಇಪಿಗೆ ಪಠ್ಯಕ್ರಮ ರೂಪಿಸಿಪದವಿಯಲ್ಲಿ ದ್ವಿತೀಯ ಮತ್ತು ತೃತೀಯ ವರ್ಷಕ್ಕೆ ಮಾಡಿಫೈಯ್ಡ್ ಎನ್.ಇ.ಪಿ ಅನ್ವಯ ಪಠ್ಯಕ್ರಮ ಸಿದ್ಧಪಡಿಸಬೇಕು. ಹಾಗೆಯೇ ಮುಂದಿನ ಸಾಲಿನಿಂದ ಸಂಪೂರ್ಣವಾಗಿ ಎನ್.ಇ.ಪಿ ಅನುಸಾರವೇ ಬೋಧನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಲೋಕನಾಥ್ ಸೂಚಿಸಿದರು.20 ಲಕ್ಷ ರು. ಅನುದಾನ ಕಡಿಮೆ
ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ವೆಂಕಟೇಶ್ ಮಾತನಾಡಿ, ಈ ಬಾರಿ ನಮ್ಮ ವಿಭಾಗಕ್ಕೆ 20 ಲಕ್ಷ ರು. ಅನುದಾನ ಕೊರತೆಯಾಗಿದೆ. ಅಲ್ಲದೇ, ವಿದ್ಯಾರ್ಥಿ ವೇತನದಲ್ಲಿ ಸ್ವಲ್ಪ ಇಳಿಕೆಯಾಗಿದೆ. ಅದನ್ನು ಸರಿಪಡಿಸಿಕೊಳ್ಳಬೇಕು ಎಂದರು.ಈ ಬಗ್ಗೆ ಪ್ರತಿಕ್ರಿಯಿಸಿದ ಕುಲಪತಿ ಲೋಕನಾಥ್ ಅವರು, ಎಲ್ಲಾ ಕ್ರೀಡೆಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಲು ಆಗದು. ಕೆಲವು ಕ್ರೀಡೆಗೆ ಮಾತ್ರ ಸೀಮಿತಗೊಳಿಸಿ. ಪ್ರತಿ ಜಿಲ್ಲೆಯಲ್ಲಿ ವಿವಿಗಳು ಸ್ಥಾಪನೆಯಾದ ಮೇಲೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಆದ್ದರಿಂದ ಅದಾಯವೂ ಇಲ್ಲ ಏನು ಮಾಡುವುದು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.