ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಒಂದು ಸೆಮಿಸ್ಟರ್ ಪರೀಕ್ಷಾ ಶುಲ್ಕ 3300 ರು. ಹೆಚ್ಚಳ ಮಾಡಿರುವ ಮೈಸೂರು ವಿಶ್ವ ವಿದ್ಯಾನಿಲಯದ ವ್ಯಾಪಾರಿ ಧೋರಣೆ ಖಂಡಿಸಿ ಎಐಡಿಎಸ್ಒ ಸಂಘಟನೆಯ ನೇತೃತ್ವದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ನಗರದ ಕ್ರಾಫರ್ಡ್ ಹಾಲ್ ಮುಂಭಾಗದಲ್ಲಿ ಸೋಮವಾರ ಪ್ರತಿಭಟಿಸಿದರು.ಮೈಸೂರು ವಿವಿಗೆ ವಿವಿಧ ಜಿಲ್ಲೆ, ರಾಜ್ಯಗಳಿಂದ ಎಷ್ಟೋ ಬಡ, ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಹಲವು ಕನಸುಗಳನ್ನು ಹೊತ್ತು ಉನ್ನತ ಶಿಕ್ಷಣ ವ್ಯಾಸಂಗಕ್ಕಾಗಿ ಬರುತ್ತಾರೆ. ಆದರೆ, ವಿವಿ ತನ್ನ ವ್ಯಾಪಾರಿ ಧೋರಣೆಯಿಂದಾಗಿ ಪ್ರತಿ ವರ್ಷ ಶೇ.10 ಪರೀಕ್ಷಾ ಶುಲ್ಕ ಹೆಚ್ಚುಸುತ್ತಿರುವುದರಿಂದ ಪ್ರಸ್ತುತ ಮತ್ತು ಭವಿಷ್ಯದಲ್ಲಿ ಉನ್ನತ ಶಿಕ್ಷಣದಿಂದ ಬಡ ವಿದ್ಯಾರ್ಥಿಗಳು ದೂರ ಉಳಿಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ಆರೋಪಿಸಿದರು.
ಒಂದು ಸೆಮಿಸ್ಟರ್ ಪರೀಕ್ಷಾ ಶುಲ್ಕ 3300 ದಾಟಿದೆ. ಎಷ್ಟೋ ಸರ್ಕಾರಿ ಕಾಲೇಜುಗಳಲ್ಲಿ ವಾರ್ಷಿಕ ಶುಲ್ಕ 3 ರಿಂದ 4 ಸಾವಿರ ರೂ. ಇದೆ. ಇದು ಅತ್ಯಂತ ದುಬಾರಿ ಪರೀಕ್ಷಾ ಶುಲ್ಕವಾಗಿದ್ದು, ಬಹುಸಂಖ್ಯಾತ ವಿದ್ಯಾರ್ಥಿಗಳು ಹಾಗೂ ಪೋಷಕರು ಆರ್ಥಿಕ ಬಿಕ್ಕಟ್ಟಿನಿಂದಾಗಿ ಶುಲ್ಕ ಪಾವತಿ ಮಾಡಲು ಅಸಾಧ್ಯವಾಗಿದೆ. ಅಲ್ಲದೇ, ವಿದ್ಯಾರ್ಥಿಗಳ ಶಿಕ್ಷಣದ ನಿರಂತರತೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಯೊಬ್ಬ ಬಡ ವಿದ್ಯಾರ್ಥಿಗಳಿಗೂ ಶಿಕ್ಷಣ ಸಿಗಬೇಕೆಂಬುದು ಮೈಸೂರು ವಿವಿ ಸ್ಥಾಪನೆಯ ಆಶಯವಾಗಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿ ವಿವಿ ವಿದ್ಯಾರ್ಥಿಗಳ ಪರ ನಿಲುವು ತೆಗೆದುಕೊಳ್ಳದೆ, ವಿದ್ಯಾರ್ಥಿಗಳಿಂದ ಸುಲಿಗೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ವರ್ಷವೂ ಹೆಚ್ಚುತ್ತಿರುವ ಶೇ.10 ಶುಲ್ಕವನ್ನು ಹಿಂಪಡೆಯಬೇಕು. ಹಾಗೂ ಪ್ರಸ್ತುತ ಸೆಮಿಸ್ಟರ್ ಪರೀಕ್ಷಾ ಶುಲ್ಕ ಹೆಚ್ಚಳವನ್ನು ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.
ಎಐಡಿಎಸ್ಒ ರಾಜ್ಯ ಖಜಾಂಚಿ ಸುಭಾಷ್, ಜಿಲ್ಲಾಧ್ಯಕ್ಷೆ ಚಂದ್ರಕಲಾ, ಕಾರ್ಯದರ್ಶಿ ನಿತಿನ್, ಉಪಾಧ್ಯಕ್ಷೆ ಸ್ವಾತಿ, ಮೈಸೂರು ವಿವಿ ಪಿಜಿ ವಿದ್ಯಾರ್ಥಿಗಳಾದ ಸುಭಿಕ್ಷಾ, ಆರ್. ರಕ್ಷಿತಾ, ಸುಕೃತಾ, ಬಿ.ಟಿ. ರಕ್ಷಿತಾ, ಹರ್ಷ, ಆದರ್ಶ, ಹರ್ಷಿತಾ, ರಾಘವೇಂದ್ರ, ಚಂದನ ಮೊದಲಾದವರು ಇದ್ದರು.