ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ವಿವಿಧ ಸೆಕ್ಟರ್ಗಳಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮಂಗಳವಾರ ನವನಗರದ ಸೆಕ್ಟರ್ ನಂ.8ರಲ್ಲಿರುವ ಅಂಗನವಾಡಿ ಕೇಂದ್ರ ಸಂಖ್ಯೆ 58ಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಳಿಗ್ಗೆ 10.30 ಗಂಟೆಯಾದರೂ ಅಂಗನವಾಡಿ ಕಾರ್ಯಕರ್ತರು ಇರಲಿಲ್ಲ. ಸಹಾಯಕಿ ಮೂಲಕ ಸಂಪರ್ಕಿಸಿ ಕೇಂದ್ರಕ್ಕೆ ಬರಲು ತಿಳಿಸಿದಾಗ ಕೇಂದ್ರದಲ್ಲಿ ಸ್ವಚ್ಛತೆ, ಸಮಯಕ್ಕೆ ಸರಿಯಾಗಿ ಬರದೇ ಇರುವುದು, ಮಕ್ಕಳಿಗೆ ಗುಣಮಟ್ಟದ ಊಟ ಸಹ ನೀಡದೇ ಇರುವುದನ್ನು ಮಾಹಿತಿ ಪಡೆದು ಅಸಮಾಧಾನ ವ್ಯಕ್ತಪಡಿಸಿದರು.
ಅಡುಗೆ ಕೋಣೆ, ಆಹಾರ ಪದಾರ್ಥಗಳು ಪರಿಶೀಲನೆ ಮಾಡಿದಾಗ ಗುಣಮಟ್ಟವಾಗಿರಿಲ್ಲ. ಈ ಬಗ್ಗೆ ಕೇಳಿದಾಗ ಜಾಣ ಕುರುಡುತನ ಪ್ರದರ್ಶನ ಮಾಡಿದರು. ಮಕ್ಕಳ ಹಾಜರಾತಿ ಪ್ರತಿದಿನ ಹಾಕದಿರುವುದು ಕಂಡುಬಂದಿತು. ಹಾಜರಾತಿಯಲ್ಲಿ 16 ಮಕ್ಕಳಿದ್ದರೆ, ಕೇಂದ್ರಕ್ಕೆ ಬರುವ ಮಕ್ಕಳ ಸಂಖ್ಯೆ 5 ರಿಂದ 6 ಜನ ಮಾತ್ರ ಇರುವುದು ಕಂಡುಬಂದಿತು. ಸರಿಯಾದ ದಾಖಲಾತಿ ಸಹ ಇರುವುದಿಲ್ಲ. ಗರ್ಭಿಣಿ, ಭಾಣಂತಿಯರ ಮಾಹಿತಿ ಇರುವದಿಲ್ಲ. ಮೇನುವಿನ ಪ್ರಕಾರ ಮಕ್ಕಳಿಗೆ ಆಹಾರ ನೀಡದೇ ಇರುವುದು ತಿಳಿದು ಬಂದಿತು.ಧವಸ, ದಾನ್ಯ ಒಂದೆರಡು ದಿನಗಳವರೆಗೆ ಆಗುವಷ್ಟು ಮಾತ್ರ ಇದ್ದು, ಅದು ಕೂಡಾ ಬಹಳ ದಿನದ ತೊಗರಿ ಹಾಗೂ ಅಕ್ಕಿಗಳನ್ನು ಪರಿಶೀಲಿಸಿದರು. ಕಾನೂನು ಸೇವಾ ಪ್ರಾಧಿಕಾರದ ಹಿಂದಿನ ಸದಸ್ಯ ಕಾರ್ಯದರ್ಶಿಗಳು ಅಂಗನವಾಡಿ ವ್ಯವಸ್ಥೆ ಸರಿಪಡಿಸುವಂತೆ ಸೂಚನೆ ನೀಡಿದ್ದರೂ ಬದಲಾವಣೆ ಆಗಿಲ್ಲವೆಂದು ನ್ಯಾ.ಹೇಮಾ ಪಸ್ತಾಪೂರ ತಿಳಿಸಿದರು.
ಪರಶೀಲನೆ ವೇಳೆಯಲ್ಲಿ ಹಾಜರಾತಿ ಬಿಟ್ಟು ಉಳಿದ ಆಹಾರ ವಿತರಣೆ ಮತ್ತು ಖರ್ಚಿನ ಪುಸ್ತಕ, ಮನೆ ಭೇಟಿ ಪುಸ್ತಕ, ಮಕ್ಕಳ ತೂಕದ ವಿವರ ದಾಖಲಾತಿ, ಮನೆ ಆಹಾರ ವಿತರಣೆ ಪುಸ್ತಕ, ಸಲಹಾ, ಸಂದರ್ಶನಕರ ಪುಸ್ತಕ, ಭಾಗ್ಯಲಕ್ಷ್ಮೀ ಅರ್ಜಿಗಳ ಪುಸ್ತಕ, ಮಾತೃವಂದನಾ ಅರ್ಜಿಗಳ ಪುಸ್ತಕ, ಬಾಲವಿಕಾಸ ಸಮಿತಿ ಪುಸ್ತಕ, ತಾಯಂದಿರ ಸಭೆ, ಪೌಷ್ಟಿಕ ಆಹಾರ ಸಭೆ ಪುಸ್ತಕ ಹಾಗೂ ಸಾದಿಲ್ವಾರು ಪುಸ್ತಕ ವಹಿ ಸಹ ಇಲ್ಲದಿರುವುದು ಕಂಡುಬಂದಿತು.ಇದಕ್ಕೂ ಪೂರ್ವದಲ್ಲಿ ಸೆಕ್ಟರ್ ನಂ.35 ರಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಮಯವಾದರೂ ಬೀಗ ತೆರೆಯದೇ ಇರುವುದು ಕಂಡು ಬಂದಿತು. ಇನ್ನೊಂದು ಕೇಂದ್ರಕ್ಕೆ ಭೇಟಿ ನೀಡಿದಾಗ ಅಂಗನವಾಡಿ ಸಹಾಯಕಿ ಹಾಗೂ ಕಾರ್ಯಕರ್ತರು ಇರದೇ ಮಕ್ಕಳು ಸಹ ಬರದೇ ಇರುವುದು ಕಂಡುಬಂದಿತು. ಈ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಮಾಡುವಂತೆ ಸೂಚಿಸಲಾಯಿತು. ಭೇಟಿ ಸಮಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಾ ಪಸ್ತಾಪೂರ ಇದ್ದರು.