ಸಾರಾಂಶ
ಬ್ರಹ್ಮಾವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಜಪುರ ಕರ್ನಾಟಕ ಸಂಘದ 69ನೇ ವರ್ಷದ ನಾಡಹಬ್ಬ ನಡೆಯಿತು. ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಸಂಘ ಸಂಸ್ಥೆಗಳಿಗೆ 60 ವರ್ಷ ತುಂಬುತ್ತಿರುವುದು ಒಂದು ಮಹಾ ಸಾಧನೆಯೇ ಆಗಿದೆ. ಈ ನಿಟ್ಟಿನಲ್ಲಿ ಬ್ರಹ್ಮಾವರದ ಅಜಪುರ ಕರ್ನಾಟಕ ಸಂಘಕ್ಕೆ 69 ವರ್ಷ ತುಂಬುತ್ತಿರುವುದು ಹಾಗೂ ಅದಕ್ಕೆ ಕಾರಣೀಭೂತರಾದ ಸಂಸ್ಥೆಯ ಸರ್ವರೂ ಅಭಿನಂದನಾರ್ಹರು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಅವರು ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಜಪುರ ಕರ್ನಾಟಕ ಸಂಘದ 69ನೇ ವರ್ಷದ ನಾಡಹಬ್ಬದಲ್ಲಿ ಭಾಗವಹಿಸಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷನಾಗಿ ಯಕ್ಷಗಾನಕ್ಕೆ ಕೊಡುಗೆ ನೀಡುತ್ತಿರುವ ಸಂಘಸಂಸ್ಥೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಕಾರ್ಯ ಮಾಡುತ್ತಿದ್ದೇನೆ. ಪ್ರಮುಖವಾಗಿ ಮಕ್ಕಳಿಗೆ ಯಕ್ಷಗಾನವನ್ನು ಕಲಿಸುವ ಸಂಘಸಂಸ್ಥೆಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು. ಈ ಮೂಲಕ ಯಕ್ಷಗಾನ ಕಲೆಯ ಉಳಿವು ಬೆಳವಣಿಗೆ ನಿರಾಂತಕವಾಗಿ ನಡೆಯಬೇಕೇನ್ನುವುದೇ ಅಕಾಡೆಮಿಯ ಹೆಬ್ಬಯಕೆ ಎಂದು ಅವರು ವಿವರಿಸಿದರು.ಅಜಪುರ ಕರ್ನಾಟಕ ಸಂಘದ ಅಧ್ಯಕ್ಷ ಎಚ್.ನಿತ್ಯಾನಂದ ಶೆಟ್ಟಿ ಮಾತನಾಡಿ, ಅಜಪುರ ಕರ್ನಾಟಕ ಸಂಘವನ್ನು ಬೆಳೆಸುವಲ್ಲಿ ಶ್ರಮಿಸಿದ ಹಂದೆ, ಸುಬ್ಬಣ್ಣ ಭಟ್, ಬಿ.ವಿ.ಆಚಾರ್ಯ ಮೊದಲಾದವರ ದೂರದೃಷ್ಟಿತ್ವದ ಫಲವೇ ಸಂಘ 69 ವರ್ಷಗಳಿಗೆ ಪದಾರ್ಪಣೆ ಮಾಡುವಂತಾಗಿದೆ ಎಂದರು.ಉದ್ಯಮಿ ಚೇತನ್ ಕುಮಾರ್ ಶೆಟ್ಟಿ ಮತ್ತು ಬಿಎಸ್‌ಎನ್‌ಎಲ್‌ನ ನಿವೃತ್ತ ಮಹಾ ಪ್ರಬಂಧಕ ಎಂ.ಚಂದ್ರಶೇಖರ ಕಲ್ಕೂರ ಅವರು ಅಜಪುರ ಯಕ್ಷಗಾನ ಸಂಘ ನಡೆದು ಬಂದ ದಾರಿ ಹಾಗೂ ಸಾಧನೆಯನ್ನು ಶ್ಲಾಘಿಸಿದರು.ಕಾರ್ಯಕ್ರಮದಲ್ಲಿ ಖ್ಯಾತ ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಅವರಿಗೆ ಸುವರ್ಣ ನಿಧಿ ಸನ್ಮಾನದೊಂದಿಗೆ ಗೌರವಿಸಲಾಯಿತು. ಕೃಷ್ಣಸ್ವಾಮಿ ಜೋಯಿಸ ಅವರಿಗೆ ಅಜಪುರ ಯಕ್ಷ ಪುರಸ್ಕಾರ ಪ್ರದಾನ ಮಾಡಲಾಯಿತು.ಸಭಾ ಕಾರ್ಯಕ್ರಮದ ಬಳಿಕ ಜಾಂಬವತಿ ಕಲ್ಯಾಣ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಸಂಪನ್ನಗೊಂಡಿತು.