ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ತೀವ್ರ ಕುತೂಹಲ ಮೂಡಿಸಿದ್ದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ 10 ಮಂದಿ ಸದಸ್ಯರಿದ್ದ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವ ಮೂಲಕ ಪುರಸಭೆ ಅಧಿಕಾರದ ಚುಕ್ಕಾಣಿ ಹಿಡಿದು ಪಾರುಪತ್ಯ ಮೆರೆದಿದೆ.23 ಮಂದಿ ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ ನ 10 ಮಂದಿ ಹಾಗೂ ಜೆಡಿಎಸ್ ನ 13 ಮಂದಿ ಸದಸ್ಯರಿದ್ದರು. ಸುಲಭವಾಗಿ ಅಧಿಕಾರ ಹಿಡಿಯಲು ಬಹುಮತ ಹೊಂದಿದ್ದ ಜೆಡಿಎಸ್ ಗೆ ತೀವ್ರ ಮುಖಭಂಗ ಉಂಟಾಗಿದೆ.
ಸ್ಥಳೀಯ ಶಾಸಕರೂ ಆಗಿರುವ ಜಿಲ್ಲಾ ಉಸ್ತವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಎರಡು ಮತಗಳು ಸೇರಿ ಮತದಾನದ ಸಂಖ್ಯಾಬಲ ಒಟ್ಟು 25 ಇತ್ತು.ಚುನಾವಣೆಯಲ್ಲಿ ಕಾಂಗ್ರೆಸ್ ನ 12ನೇ ವಾರ್ಡ್ ಸದಸ್ಯ ಅಲಿ ಅನ್ಸರ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ 19ನೇ ವಾರ್ಡ್ ಸದಸ್ಯೆ ವಸಂತಲಕ್ಷ್ಮೀ ನಾಮಪತ್ರ ಸಲ್ಲಿಸಿದರೆ, ಜೆಡಿಎಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ 7ನೇ ವಾರ್ಡ್ ಸದಸ್ಯೆ ಚಂದ್ರಕಲಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 3ನೇ ವಾರ್ಡ್ ಸದಸ್ಯೆ ಸೌಮ್ಯ ನಾಮಪತ್ರ ಸಲ್ಲಿಸಿದ್ದರು.
ನಂತರ ನಡೆದ ಪ್ರಕ್ರಿಯೆಯಲ್ಲಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ 11 ಮಂದಿ ಅಲಿ ಅನ್ಸರ್ ಮತ್ತು ವಸಂತಲಕ್ಷ್ಮೀ ಪರವಾಗಿ ಕೈ ಎತ್ತುವ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡು ಗೆಲುವು ಸಾಧಿಸಿದರು. ಜೆಡಿಎಸ್‌ನ ಚಂದ್ರಕಲಾ ಹಾಗೂ ಸೌಮ್ಯ ಪರವಾಗಿ 10 ಮಂದಿ ಕೈ ಎತ್ತಿದ ಹಿನ್ನಲೆಯಲ್ಲಿ ಎರಡೂ ಸ್ಥಾನಗಳಲ್ಲಿ ಸೋಲನುಭವಿಸಿದರು. ತಹಸೀಲ್ದಾರ್ ನಯೀಂಉನ್ನೀಸಾ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.ಇಬ್ಬರು ಗೈರು, ಇಬ್ಬರು ತಟಸ್ಥ :
ಅಧಿಕಾರ ಕೈತಪ್ಪುವ ಮುನ್ಸೂಚನೆಯಿಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಗೈರಾಗಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಪಕ್ಷದ ಅಭ್ಯರ್ಥಿ ಪರ ಕಡ್ಡಾಯವಾಗಿ ಮತ ಚಲಾಯಿಸುವಂತೆ ಜೆಡಿಎಸ್ ಪಕ್ಷದ ಎಲ್ಲಾ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿತ್ತಾದರೂ 13ನೇ ವಾರ್ಡ್ ಸದಸ್ಯೆ ಆಶಾ ಗೈರಾಗಿದ್ದರು.ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರೂ ಕೂಡ ಜೆಡಿಎಸ್‌ನ 4ನೇ ವಾರ್ಡ್ ಸದಸ್ಯೆ ಭಾರತಿ ಮತ್ತು 2ನೇ ವಾರ್ಡ್ ಸದಸ್ಯೆ ರತ್ನಮ್ಮ ತಟಸ್ಥವಾಗಿ ಕುಳಿತಿದ್ದರು. ಇದರಿಂದ ತಮ್ಮ ರಾಜಕೀಯ ಚಾಣಕ್ಷ್ಯತನದಿಂದ ಸುಲಭವಾಗಿ ಪುರಸಭೆಯ ಅಧಿಕಾರ ಹಿಡಿಯುವಲ್ಲಿ ಸಚಿವ ಚಲುವರಾಯಸ್ವಾಮಿ ಯಶಸ್ವಿಯಾದರು.
ಬಳಿಕ ಮಾತನಾಡಿದ ಸಚಿವರು, ರಾಜ್ಯದ ಎಲ್ಲಾ ಪುರಸಭೆ, ಪಟ್ಟಣ ಪಂಚಾಯ್ತಿ ಹಾಗೂ ನಗರ ಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿ ತೀರ್ಮಾನ ಹೊರಬರುವುದು ತಡವಾದ್ದರಿಂದ ಕಳೆದ 14 ತಿಂಗಳಿಂದ ಚುನಾವಣೆ ನಡೆದಿರಲಿಲ್ಲ ಎಂದರು.ಸರ್ಕಾರ ನಿಗಧಿಪಡಿಸಿದ್ದ ಮೀಸಲಾತಿಯಂತೆ ಚುನಾವಣೆ ನಡೆಸುವಂತೆ ಕಳೆದ ಒಂದು ತಿಂಗಳ ಹಿಂದೆ ಸುರ್ಪಿಂಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಮೀಸಲಾತಿ ಪ್ರಕ್ರಿಯೆ ಬದಲಾಯಿಸುವಂತೆ ಸರ್ಕಾರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರೆ ಈಗಾಗಲೇ 14 ತಿಂಗಳಿಂದ ಅಧಿಕಾರ ಕಳೆದುಕೊಂಡಿರುವ ಚುನಾಯಿತ ಪ್ರತಿನಿಧಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಕೊರತೆಯಾಗುತ್ತದೆಂದು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ ಚುನಾವಣೆ ನಡೆಸುತ್ತಿದೆ ಎಂದು ಹೇಳಿದರು.
ನಾಗಮಂಗಲ ಪುರಸಭೆಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಇನ್ನುಳಿದ ಅವಧಿಯಲ್ಲಿ ಪುರಸಭಾ ವ್ಯಾಪ್ತಿಯ ಎಲ್ಲ ವಾರ್ಡ್‌ಗಳ ಅಭಿವೃದ್ಧಿಗೆ ಪೂರಕವಾಗಿ ಪ್ರಾಮಾಣಿಕವಾಗಿ ಶ್ರಮಿಸಲಿದ್ದಾರೆ ಎಂದರು.ವಿಜಯೋತ್ಸವ: ಪುರಸಭೆ ಅಧಿಕಾರದ ಚುಕ್ಕಾಣಿಯನ್ನು ಕಾಂಗ್ರೆಸ್ ಬೆಂಬಲಿತರು ಹಿಡಿಯುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪುರಸಭೆ ಕಚೇರಿ ಮುಂಭಾಗದ ಚಾಮರಾಜನಗರ - ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಟಿ.ಮರಿಯಪ್ಪ ವೃತ್ತದಲ್ಲಿ ಬೃಹತ್ ಪಟಾಕಿ ಸಿಡಿಸುವ ಜೊತೆಗೆ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಪಕ್ಷದ ವರಿಷ್ಠರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪರ ಜಯಘೋಷ ಮೊಳಗಿಸಿ ವಿಜಯೋತ್ಸವ ಆಚರಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್ :ಚುನಾವಣೆ ಪ್ರಕ್ರಿಯೆ ವೇಳೆ ಯಾವುದೇ ಸಣ್ಣ- ಪುಟ್ಟ ಅಹಿತಕರ ಘಟನೆಗಳು ಸಂಭವಿಸದಂತೆ ಪುರಸಭೆ ಕಚೇರಿ ಸುತ್ತ ಮುತ್ತ ಡಿವೈಎಸ್‌ಪಿ ಎ.ಆರ್.ಸುಮಿತ್, ಸಿಪಿಐ ನಿರಂಜನ್, ಇನ್ಸ್‌ಪೆಕ್ಟರ್ ಅಶೋಕ್‌ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮಾಜಿ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಪುರಸಭೆ ಸದಸ್ಯರಾದ ರಮೇಶ್, ತಿಮ್ಮಪ್ಪ ಸೇರಿ ಕಾಂಗ್ರೆಸ್‌ನ ಎಲ್ಲ ಸದಸ್ಯರು, ಮುಖಂಡರಾದ ಉಪ್ಪಾರಹಳ್ಳಿ ಅಶೋಕ್, ಶರತ್‌ರಾಮಣ್ಣ, ರವಿಕಾಂತೇಗೌಡ, ಸಂಪತ್‌ಕುಮಾರ್, ಪ್ರವೀಣ್‌ಕುಮಾರ್, ಸ್ಟಾರ್‌ಗ್ರೂಪ್ ಮಾಲೀಕ ಅಮೀರುಲ್ ಮುರ್ತುಜಾ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನರಸಿಂಹಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಆರ್.ಕೃಷ್ಣೇಗೌಡ ಸೇರಿ ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದು, ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷೆಯನ್ನು ಅಭಿನಂದಿಸಿದರು.