ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಕೋಮು ಗಲಭೆಯಿಂದ ಪ್ರಕ್ಷುಬ್ದಗೊಂಡಿದ್ದ ಪಟ್ಟಣ ಸಹಜ ಸ್ಥಿತಿಗೆ ಮರಳಿದ್ದು, ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಜನರು ಬಹುತೇಕ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟುಗಳನ್ನು ಸುಗಮವಾಗಿ ನಡೆಸಿದರು.ಪಟ್ಟಣದೆಲ್ಲೆಡೆ ಸಂಪೂರ್ಣ ಶಾಂತಿಯುತ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರ ಭದ್ರತೆ ಮುಂದುವರೆದಿದ್ದು ಆಯಕಟ್ಟಿನ ಸ್ಥಳಗಳಲ್ಲಿ ಮಾತ್ರ ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಇನ್ನುಳಿದಂತೆ ಇಡೀ ಪಟ್ಟಣ ಹಿಂದಿನಂತೆ ಸಹಜ ಸ್ಥಿತಿಗೆ ಬಂದಿದೆ.
ಶನಿವಾರ ಬೆಳಗ್ಗೆ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಪಟ್ಟಣಕ್ಕೆ ಭೇಟಿ ಕೊಟ್ಟು ಮೈಸೂರು ರಸ್ತೆ, ಮಂಡ್ಯ ರಸ್ತೆ ಹಾಗೂ ಕೆಎಸ್‌ಟಿ ರಸ್ತೆಯಲ್ಲಿ ಸಂಚರಿಸಿ ಪರಿಸ್ಥಿತಿ ವೀಕ್ಷಣೆ ಮಾಡಿದರು.ಔಷಧಿ, ಹಣ್ಣು, ತರಕಾರಿ, ಹೂವು ಮತ್ತು ದಿನಸಿ ಸೇರಿದಂತೆ ಬಹುತೇಕ ಅಂಗಡಿ ಮುಂಗಟ್ಟುಗಳಲ್ಲಿ ಎಂದಿನಂತೆ ವ್ಯಾಪಾರ- ವಹಿವಾಟು ನಡೆದರೆ, ರಾಜಸ್ಥಾನ ಮೂಲದವರಿಗೆ ಸೇರಿದ ಬಟ್ಟೆ ಹಾಗೂ ಚಿನ್ನ- ಬೆಳ್ಳಿ ಅಂಗಡಿಗಳನ್ನು ಶನಿವಾರವೂ ಮುಚ್ಚಲಾಗಿತ್ತು. ಮುಸ್ಲಿಂ ಸಮುದಾಯವೇ ಹೆಚ್ಚಾಗಿರುವ ಪಟ್ಟಣದ ಮಂಡ್ಯ ರಸ್ತೆ ಹಾಗೂ ಮೈಸೂರು ರಸ್ತೆಯಲ್ಲಿ ಬೆರಳೆಣಿಯಷ್ಟು ಅಂಗಡಿ ಮಾತ್ರ ತೆರೆದಿದ್ದವು. ಇದರಿಂದ ಎರಡೂ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಕಂಡುಬಂತು.
ಗ್ಯಾರೇಜ್ ಪಂಚರ್ ಶಾಪ್‌ಗಳಿಲ್ಲದೆ ಪರದಾಟ:ಬುಧವಾರ ರಾತ್ರಿ ಕಿಡಿಗೇಡಿಗಳು ನಡೆಸಿದ ಪುಂಡಾಟಕ್ಕೆ ಮುಸ್ಲಿಂ ಜನಾಂಗಕ್ಕೆ ಸೇರಿದ ಬಹುತೇಕ ಸ್ಕೂಟರ್ ಗ್ಯಾರೇಜ್‌ಗಳು ಮತ್ತು ಪಂಚರ್ ಶಾಪ್‌ಗಳು ಸುಟ್ಟು ಭಸ್ಮವಾಗಿರುವ ಹಿನ್ನೆಲೆಯಲ್ಲಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಬೈಕ್ ಸವಾರರು ತಮ್ಮ ದ್ವಿಚಕ್ರ ವಾಹನಗಳನ್ನು ರಿಪೇರಿ ಮಾಡಿಸಿಕೊಳ್ಳಲು ಪರದಾಡುವಂತಾಗಿತ್ತು. ಗಲಭೆ ಪ್ರಕರಣದಿಂದ ಭಯಭೀತರಾಗಿರುವ ಮುಸ್ಲೀಂ ಸಮುದಾಯದ ಸಣ್ಣ, ಪುಟ್ಟ ವ್ಯಾಪಾರಿಗಳು ತಾಲೂಕಿನ ಗ್ರಾಮೀಣ ಪ್ರದೇಶದತ್ತ ಸುಳಿದಿಲ್ಲ.
ಯಶಸ್ವಿಯಾದ ಶಾಂತಿ ಸಭೆ:ಕೋಮು ಗಲಭೆಯಿಂದ ವೈರತ್ವ ಮೂಡಿದ್ದ ಹಿಂದೂ ಹಾಗೂ ಮುಸ್ಲಿಂ ಸಮುದಾಯವನ್ನು ಒಟ್ಟುಗೂಡಿಸಿ ಶಾಂತಿ- ಸೌಹಾರ್ದತೆ ಮೂಡಿಸಲು ಪಟ್ಟಣದ ಬಿಂಡಿಗನವಿಲೆ ರಸ್ತೆಯ ಕೃಷ್ಣಪ್ಪ ಸಮುದಾಯ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಶನಿವಾರ ನಡೆದ ಶಾಂತಿ ಸಭೆ ಯಶಸ್ವಿಯಾಯಿತು.
ಘಟನೆ ಮರೆತು ಎಲ್ಲರೂ ಅಣ್ಣ ತಮ್ಮಂದಿರಂತೆ ಬದುಕೋಣ. ಘಟನೆಗೆ ಕಾರಣವಾದ ಕಿಡಿಗೇಡಿಗಳು ಯಾರೇ ಆಗಲಿ ಅವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಬೇಕು. ಆದರೆ, ಬಂಧನಕ್ಕೊಳಗಾಗಿರುವ ಮತ್ತು ಭೀತಿಯಿಂದ ಊರು ತೊರೆದಿರುವ ಅಮಾಯಕರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಅಭಿಪ್ರಾಯ ವ್ಯಕ್ತವಾಯಿತು.ಶಾಂತಿ ಸಭೆಯಲ್ಲಿ ಮುಖಂಡರ ಅಭಿಪ್ರಾಯ
ಕಳೆದ 50 ವರ್ಷದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಬುಧವಾರ ರಾತ್ರಿ ಪಟ್ಟಣದಲ್ಲಿ ನಡೆದ ಘಟನೆ ಮತ್ತೆ ನಡೆಯಬಾರದು. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಂಡಿದ್ದರಿಂದ ಯಾರಿಗೂ ಸಣ್ಣ- ಪುಟ್ಟ ಗಾಯ ಮತ್ತು ಸಾವು- ನೋವು ಸಂಭವಿಸಿಲ್ಲ. ಘಟನೆ ಸಂಬಂಧ ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕ್ಕೆ ಸೂಚಿಸಿರುವ ಜಿಲ್ಲಾ ಮಂತ್ರಿಗಳು ಸೂಚಿಸಿದ್ದು, ಪ್ರಚೋದನೆಗೆ ಯಾರೂ ಒಳಗಾಗುವುದು ಬೇಡ.-ನರಸಿಂಹಮೂರ್ತಿ, ಕರ್ನಾಟಕ ಸ್ವಾಭಿಮಾನಿ ಸಮಸಮಾಜದ ರಾಜ್ಯಾಧ್ಯಕ್ಷ.
‘ಹಿಂದೂ ಮುಸ್ಲಿಂ ಎಂಬ ದ್ವೇಷ ಮುಂದುವರಿಸಿಕೊಂಡು ಹೋದರೆ ನಮ್ಮ ಮುಂದಿನ ಪೀಳಿಗೆಗೆ ನಾವೇನೂ ಕೊಡಲು ಆಗುವುದಿಲ್ಲ. ಪಟ್ಟಣ ವ್ಯಾಪ್ತಿಯಲ್ಲಿ ಇನ್ನೂ ಹತ್ತಾರು ಗಣಪತಿ ಮೂರ್ತಿಗಳು ಪೂಜೆಯಿಲ್ಲದೆ ವಿಸರ್ಜನೆಯಾಗದೆ ಕುಳಿತಿವೆ. ಎರಡೂ ಸಮುದಾಯದವರು ಒಂದೆಡೆ ಕುಳಿತು ಸಮಸ್ಯೆ ಬಗೆಹರಿಸಿಕೊಂಡರೆ ಕೋಮು ಸಂಘರ್ಷ ಎಂಬುದನ್ನು ಬೇರು ಸಮೇತ ಕಿತ್ತುಹಾಕಬಹುದು.’- ಸುಭಾಷ್ ಚಂದ್ರ, ಪಟ್ಟಣ ವಾಸಿ.
‘ಪಟ್ಟಣದಲ್ಲಿ ಹಲವು ವರ್ಷಗಳಿಂದ ಹಿಂದೂ ಹಾಗೂ ಮುಸ್ಲಿಂ ಸಮುದಾಯ ಪರಸ್ಪರ ಅಣ್ಣ- ತಮ್ಮಂದಿರಂತೆ ಸಹಬಾಳ್ವೆಯಂತೆ ಬದುಕುತ್ತಿದ್ದೇವೆ. ಹಿಂದು, ಮುಸ್ಲಿಂ ಹಬ್ಬಗಳಲ್ಲಿ ಪರಸ್ಪರ ಶುಭಾಶಯ ಕೋರಿ ಆಚರಣೆ ಮಾಡುತ್ತಿದ್ದೆವು. ಅದರಂತೆ ನಮ್ಮೆಲ್ಲರಲ್ಲೂ ವೈಮನಸ್ಸು ದೂರವಾಗಿ ಸದ್ಭಾವನೆ ಬೆಳೆಯಬೇಕು. ಈಗ ನಡೆದಿರುವ ಘಟನೆಯನ್ನು ಮರೆತು ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಂಡು ಸಂಯಮ ಸಹಕಾರ ಹಾಗೂ ಸಂತೋಷದಿಂದ ಒಂದೇ ತಾಯಿಯ ಮಕ್ಕಳಂತೆ ಬದುಕೋಣ. ಹಿಂದೂ ಮುಸ್ಲಿಂ ಸಮುದಾಯ ಒಗ್ಗಟ್ಟಾಗಬೇಕೆಂದರೆ ಎರಡೂ ಸಮುದಾಯದ ಮುಖಂಡರು ಸೇರಿ ಒಂದು ಸೌಹಾರ್ದ ಸಮಿತಿ ರಚಿಸಿಕೊಂಡು ಯಾವುದೇ ಹಬ್ಬ ಆಚರಣೆಗಳ ಸಂದರ್ಭದಲ್ಲಿ ಎಲ್ಲರೂ ಭಾಗಿಯಾಗಿ ಒಟ್ಟಾಗಿ ಆಚರಿಸುವಂತಾಗಬೇಕು.’ ಮುಸ್ಲಿಂ ಮುಖಂಡರ ಅಭಿಪ್ರಾಯ----------14ಕೆಎಂಎನ್ ಡಿ22,23ನಾಗಮಂಗಲ ಪಟ್ಟಣದಲ್ಲಿ ಶನಿವಾರ ಅಂಗಡಿ ತೆರೆದು ವ್ಯಾಪಾರಿಗಳು ವಹಿವಾಟು ನಡೆಸಿದರು.
ನಾಗಮಂಗಲದ ಮಂಡ್ಯ ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳು ಶನಿವಾರವೂ ಮುಚ್ಚಿದ್ದರಿಂದ ರಸ್ತೆ ಬಿಕೋ ಎನ್ನುತ್ತಿತ್ತು.