ಸಾರಾಂಶ
ಹುಬ್ಬಳ್ಳಿ:ನಾಗರ ಪಂಚಮಿ ಅಂಗವಾಗಿ ಮಹಾನಗರ ಸೇರಿದಂತೆ ಎಲ್ಲೆಡೆ ಗುರುವಾರ ಭಕ್ತಿಯಿಂದ ನಾಗದೇವರ ಮೂರ್ತಿಗೆ ಹಾಲೆರೆಯಲಾಯಿತು.ಗೋಕುಲ ರಸ್ತೆಯ ರಾಜಧಾನಿ ಕಾಲನಿಯ ಗಣೇಶ ದೇವಸ್ಥಾನ, ಹಳೇ ಹುಬ್ಬಳ್ಳಿ ಪರಮೇಶ್ವರ ದೇವಸ್ಥಾನ, ಚೆನ್ನಪೇಟೆಯ ಬನ್ನಿ ಮಹಾಂಕಾಳಿ ದೇವಸ್ಥಾನ ಸೇರಿದಂತೆ ಬಹುತೇಕ ಎಲ್ಲ ದೇವಸ್ಥಾನದಲ್ಲಿನ ನಾಗದೇವರಿಗೆ ಸಾರ್ವಜನಿಕರು ಹಾಲನ್ನೆರೆದು ಭಕ್ತಿ ಮೆರೆದರು.ಪಂಚಮಿ ನಿಮಿತ್ತ ಮಹಿಳೆಯರು, ಮಕ್ಕಳು, ಪುರುಷರು ಸೇರಿದಂತೆ ಕುಟುಂಬದವರೆಲ್ಲ ಮನೆಯಲ್ಲಿ ಪ್ರತಿಷ್ಠಾಪಿಸಿದ ಮಣ್ಣಿನ ನಾಗ ದೇವರಿಗೆ ಹಾಲೆರೆದರು. ಮನೆಯಲ್ಲಿ ಮಹಿಳೆಯರು ಅಳ್ಳಿಟ್ಟಿನಿಂದ ನಾಗದೇವರ ಮೂರ್ತಿ ತಯಾರಿಸಿ, ಅದನ್ನು ದೇವರ ಕೋಣೆಯಲ್ಲಿಟ್ಟು, ಅರಿಷಿಣ-ಕುಂಕುಮ, ಹೂವುಗಳಿಂದ ಪೂಜಿಸಿದರು. ಸದಸ್ಯರೆಲ್ಲ ಸೇರಿ ಎಲ್ಲರ ಹೆಸರನ್ನು ನೆನೆದು ಹಾಲೆರೆದರು. ಕುಟುಂಬದವರೆಲ್ಲ ಅರಿಷಿಣ ಲೇಪಿತ ನೂಲಿನ ದಾರ ಧರಿಸಿದ್ದರು. ಅಳ್ಳಿಟ್ಟು, ನಾನಾ ವಿಧದ ಉಂಡಿ, ಕುಚಕಡುಬು, ಕಡಲೆಕಾಯಿ ಪಲ್ಯ, ಅಳ್ಳು ಸೇರಿದಂತೆ ವಿವಿಧ ಖಾದ್ಯಗಳನ್ನು ನೈವೇದ್ಯ ಸಲ್ಲಿಸಿದರು. ನಂತರ ಕುಟುಂಬದ ಸದಸ್ಯರೆಲ್ಲ ಸೇರಿ ಖಾದ್ಯಗಳನ್ನು ಸವಿದು ಸಂಭ್ರಮಿಸಿದರು. ಮಹಾನಗರದ ಜನರು ತಮ್ಮ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಜತೆ ಉಂಡಿಗಳನ್ನು ವಿನಿಮಯ ಮಾಡಿಕೊಂಡರು.