ನವ ನಗರ ಬ್ಯಾಂಕ್‌ 3.01 ಕೋಟಿ ನಿವ್ವಳ ಲಾಭದಲ್ಲಿದೆ

| Published : Sep 16 2024, 01:56 AM IST

ನವ ನಗರ ಬ್ಯಾಂಕ್‌ 3.01 ಕೋಟಿ ನಿವ್ವಳ ಲಾಭದಲ್ಲಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಂಕಿನಲ್ಲಿ ಸದಸ್ಯತ್ವ ಪಡೆದಿರುವ 4600 ಮಂದಿ ಷೇರುದಾರ ಸದಸ್ಯರ ಪೈಕಿ 1300 ಮಂದಿ ಪೂರ್ಣ ಪ್ರಮಾಣದ ಷೇರು ಹಣ ಪಾವತಿ ಮಾಡಿಲ್ಲ.

ಫೋಟೋ- 15ಎಂವೈಎಸ್‌ 56- ಕೆ.ಆರ್. ನಗರದ ಆರ್.ಆರ್. ಕಲ್ಯಾಣ ಮಂಟಪದಲ್ಲಿ ನಡೆದ ನವ ನಗರ ಅರ್ಬನ್ ಬ್ಯಾಂಕಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಬ್ಯಾಂಕಿನ ಅಧ್ಯಕ್ಷ ಕೆ.ಎನ್. ಬಸಂತ್‌ ನಂಜಪ್ಪ ಉದ್ಘಾಟಿಸಿದರು. ಎಂಡಿ ಸಿ. ಸುರೇಶ್ ಮೊದಲಾದವರು ಇದ್ದರು.

---

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಕಳೆದ 27 ವರ್ಷಗಳಿಂದ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ನವ ನಗರ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ 400 ಕೋಟಿ ವಹಿವಾಟು ನಡೆಸುತ್ತಿದ್ದು, 3.01 ಕೋಟಿ ನಿವ್ವಳ ಲಾಭದಲ್ಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೆ.ಎನ್. ಬಸಂತ್ ಹೇಳಿದರು.

ಪಟ್ಟಣದ ಮಧುವನಹಳ್ಳಿ ರಸ್ತೆಯಲ್ಲಿನ ಆರ್.ಆರ್. ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿದ ಅವರು ಬ್ಯಾಂಕಿನಲ್ಲಿ 4600 ಮಂದಿ ಸದಸ್ಯರಿದ್ದು 285 ಕೋಟಿ ಸಾಲ ವಿತರಿಸಲಾಗಿದ್ದು, ಮುಂದಿನ ದಿನಗಳಲ್ಲಿ 425 ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಿದ್ದು 4 ಕೋಟಿ ಲಾಭಗಳಿಸಲು ಕಾರ್ಯಯೋಜನೆ ರೂಪಿಸಲಾಗಿದೆ ಎಂದರು.

ಬ್ಯಾಂಕಿನಲ್ಲಿ ಸದಸ್ಯತ್ವ ಪಡೆದಿರುವ 4600 ಮಂದಿ ಷೇರುದಾರ ಸದಸ್ಯರ ಪೈಕಿ 1300 ಮಂದಿ ಪೂರ್ಣ ಪ್ರಮಾಣದ ಷೇರು ಹಣ ಪಾವತಿ ಮಾಡಿಲ್ಲ. ಹಾಗಾಗಿ ಅವರು 5 ಸಾವಿರಕ್ಕಿಂತ ಹೆಚ್ಚು ಹಣ ಪಾವತಿಸಿ ಪೂರ್ಣ ಪ್ರಮಾಣದ ಷೇರುದಾರರಾಗಬೇಕು ಎಂದು ಅವರು ಮನವಿ ಮಾಡಿದರು.

ಸರ್ವ ಸದಸ್ಯರ ಹಿತಕಾಯ್ದು ಬ್ಯಾಂಕಿನ ಏಳಿಗೆಗೆ ಕಂಕಣ ಬದ್ದರಾಗಿ ಕೆಲಸ ಮಾಡಲು ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದ್ದು ನಮಗೆ ಎಲ್ಲರೂ ಅಗತ್ಯ ಸಲಹೆ ಮತ್ತು ಮಾರ್ಗದರ್ಶ ನೀಡಬೇಕು ಎಂದು ಕೋರಿದ ಅಧ್ಯಕ್ಷರು ಸಣ್ಣ ವ್ಯಾಪಾರಸ್ಥರ ಸಾಲದಿಂದ ಆರಂಭಿಸಿ ಉದ್ಯಮಕ್ಕೂ ಬೃಹತ್ ಪ್ರಮಾಣದಲ್ಲಿ ಬ್ಯಾಂಕಿನ ವತಿಯಿಂದ ಸಾಲ ವಿತರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಹಳೇ ಮೈಸೂರು ಭಾಗದ ಐದು ಜಿಲ್ಲೆಗಳ ಪೈಕಿ ನಮ್ಮ ಬ್ಯಾಂಕ್ ಪಾರದರ್ಶಕ ಆಡಳಿತ ನಡೆಸುತ್ತಿದ್ದು ಇದರ ಜತೆಗೆ ಪೋನ್‌ ಪೇ, ಗೂಗಲ್ ಪೇ ಮತ್ತು ಎಟಿಎಂ ಸವಲತ್ತು ಕಲ್ಪಿಸಿದ್ದು ಇದರೊಂದಿಗೆ ಮೊಬೈಲ್ ಬ್ಯಾಂಕಿಂಗ್ ಅನುಕೂಲ ಮಾಡಿರುವುದರಿಂದ ಸರ್ವರಿಗೂ ಅನುಕೂಲವಾಗುತ್ತಿದ್ದು ಮುಂದಿನ ದಿನಗಳಲ್ಲಿ ಷೇರು ಬಂಡವಾಳವನ್ನು ಹೆಚ್ಚು ಮಾಡಿ ಬ್ಯಾಂಕಿನ ವ್ಯಾಪ್ತಿಯ ಜನರಿಗೆ ಅತ್ತ್ಯುತ್ತಮ ಸೇವೆ ನೀಡಲು ನಿರ್ಧರಿಸಲಾಗಿದೆ ಎಂದು ಅವರು ವಿವರಿಸಿದರು.

ಬ್ಯಾಂಕಿನ ಷೇರುದಾರ ಸದಸ್ಯರಾಗಿದ್ದು ಮರಣ ಹೊಂದಿದರೆ ಅವರ ಕುಟುಂಬಕ್ಕೆ ಪ್ರಸ್ತುತ 10 ಸಾವಿರ ಮರಣ ನಿಧಿ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಹೆಚ್ಚು ಮಾಡಲು ಚಿಂತಿಸಲಾಗಿದೆ. ಸದಸ್ಯರಿಗೆ ಶೇ. 10 ಡಿವಿಡೆಂಟ್ ನೀಡುತ್ತಿದ್ದು ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು. ಇದರೊಂದಿಗೆ ಉಡುಗೊರೆ ಕೂಪನ್ ವಿತರಿಸಲಾಗುತ್ತಿದೆ ಎಂದರು.

ಬ್ಯಾಂಕಿನಲ್ಲಿ 41 ಕೋಟಿ ರೂ ಠೇವಣಿ ಹಣವಿದ್ದು ಅದನ್ನು ದ್ವಿಗುಣಗೊಳಿಸಲು ಆಡಳಿತ ಮಂಡಳಿ ತೀರ್ಮಾನಿಸಿದ್ದು ಸಾರ್ವಜನಿಕರು ಹೆಚ್ಚಾಗಿ ನಮ್ಮ ಬ್ಯಾಂಕಿನಲ್ಲಿಯೇ ಠೇವಣಿ ಇಡಬೇಕು ಎಂದು ಕೋರಿದ ಕೆ.ಎನ್. ಬಸಂತ್ ಷೇರು ಬಂಡವಾಳ ಪ್ರಸ್ತುತ 12 ಕೋಟಿ ಇದ್ದು ಅದನ್ನು 15 ಕೋಟಿಗೆ ಏರಿಸುವ ಗುರಿ ಇಟ್ಟುಕೊಂಡಿದ್ದು ನಮಗೆ ಸದಾ ಪ್ರೋತ್ಸಾಹ ನೀಡುತ್ತಿರುವ ಷೇರುದಾರ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ಈ ವೇಳೆ ಬ್ಯಾಂಕಿನ ಷೇರುದಾರ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ತಂಬಾಕು ಮಂಡಳಿ ನಿವೃತ್ತ ಅಧೀಕ್ಷಕ ಕೆ.ಎನ್. ದಿನೇಶ್, ಬ್ಯಾಂಕಿನ ಉಪಾಧ್ಯಕ್ಷ ಸರೋಜಾ ನಾರಾಯಣ್, ನಿರ್ದೇಶಕರಾದ ಕೇಶವ್, ವೈ.ಎಸ್. ಕುಮಾರ್, ಅಪ್ಸರ್‌ ಬಾಬು, ಎಸ್. ಮಹದೇವಯ್ಯ, ಎ. ಚಂದ್ರಶೇಖರ್, ಚಂದ್ರಕುಮಾರ್, ಕೆ. ರಮೇಶ್‌ ರಾವ್, ಸುಬ್ಬನಾಯಕ, ಎಂಡಿ ಸಿ. ಸುರೇಶ್, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಎನ್.ಎಸ್. ವಿಶ್ವನಾಥ್, ಎಚ್.ಟಿ. ಅನಂತರಾಮಯ್ಯ, ವಿ. ಶ್ರೀನಿವಾಸಮೂರ್ತಿ, ಕೆ.ಆರ್. ನಗರ ಶಾಖಾ ವ್ಯವಸ್ಥಾಪಕ ಎಂ.ಪಿ. ಸುಹಾಸ್, ಪಿರಿಯಾಪಟ್ಟಣ ಶಾಖಾ ವ್ಯವಸ್ಥಾಪಕ ಮಂಚನಾಯಕ, ಹುಣಸೂರು ಶಾಖಾ ವ್ಯವಸ್ಥಾಪಕ ಎ.ವಿ. ಮಂಜುನಾಥ್, ಹೂಟಗಳ್ಳಿ ಶಾಖಾ ವ್ಯವಸ್ಥಾಪಕ ಕೆ.ಎಸ್. ಪ್ರಮೋದ್, ಸಾಲ ವಸೂಲಿ ವಿಭಾಗದ ಹಿರಿಯ ವ್ಯವಸ್ಥಾಪಕ ಎಚ್.ವಿ. ಚನ್ನಕೇಶವ ಇದ್ದರು.