ಸಾರಾಂಶ
ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ದ ನಾಗಾರಾಧನಾ ಕ್ಷೇತ್ರವಾಗಿರುವ ಘಾಟಿ ಸುಬ್ರಮಣ್ಯದಲ್ಲಿ ಶುಕ್ರವಾರ ನಾಗರ ಪಂಚಮಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಮಾಡಲಾಗಿತ್ತು.
ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ದ ನಾಗಾರಾಧನಾ ಕ್ಷೇತ್ರವಾಗಿರುವ ಘಾಟಿ ಸುಬ್ರಮಣ್ಯದಲ್ಲಿ ಶುಕ್ರವಾರ ನಾಗರ ಪಂಚಮಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಮಾಡಲಾಗಿತ್ತು.
ಕ್ಷೇತ್ರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳೂ ಸೇರಿದಂತೆ ಹೊರರಾಜ್ಯಗಳಿಂದಳು ಸಹಸ್ರಾರು ಭಕ್ತಾದಿಗಳು ಆಗಮಿಸಿ ಶ್ರೀಸ್ವಾಮಿಯ ದರ್ಶನ ಪಡೆದರು. ಬೆಳಗಿನಿಂದಲೂ ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದರು. ನಾಗ ಪಂಚಮಿಯಂದು ಸುಬ್ರಹ್ಮಣ್ಯನ ದರ್ಶನ ಪಡೆದರೆ ದೋಷ ನಿವಾರಣೆಯಾಗುವ ನಂಬಿಕೆ ಇದೆ. ಹೀಗಾಗಿ ಜನಸಂದಣಿ ಹೆಚ್ಚಿತ್ತು.ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮೀ. ಆದಿಶೇಷನ್ನು ಈ ಭೂಮಿಯನ್ನು ಹೊತ್ತಿದ್ದಾನೆ ಎಂದು ಪುರಾಣಗಳು ಹೇಳುತ್ತವೆ. ಭೂಮಿಯನ್ನು ರಕ್ಷಿಸಬೇಕಾದರೆ ಭೂಮಿಯನ್ನು ಹೊತ್ತ ಸರ್ಪಗಳ ರಾಜನನ್ನು ಪೂಜಿಸಬೇಕು. ಅಲ್ಲದೆ ಆದಿಶೇಷನು ವಿಷ್ಣುವಿನ ವಾಹನವೂ ಹೌದು. ಹೀಗಾಗಿ ಸರ್ಪ ಪೂಜೆಗೆ ವಿಶೇಷ ಮಹತ್ವವಿದೆ ಎಂಬ ಪ್ರತೀತಿ ಇದೆ.
ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗಿರುವ ಸಹಸ್ರಾರು ನಾಗಶಿಲೆಗಳಿಗೆ ಭಕ್ತರು ಪೂಜಿಸಿ ನಮಿಸಿದರು. ಹುತ್ತಗಳಿಗೆ ಹಾಲೆರೆದು ಹರಕೆ ತೀರಿಸಿದರು. ನಾಗಾರಾಧನೆಯ ವಿಧಿಗಳನ್ನು ಶ್ರದ್ದಾಭಕ್ತಿಯಿಂದ ನೆರವೇರಿಸಿದರು. ಹೊಸದಾಗಿ ಮದುವೆಯಾದ ದಂಪತಿಗಳು ವಿಶೇಷವಾಗಿ ನಾಗರ ಶಿಲೆಗಳಿಗೆ ಪೂಜಿಸಿ, ಹುತ್ತಕ್ಕೆ ಹಾಲೆದರು.ನಾಗಪಂಚಮಿ ಅಂಗವಾಗಿ ದೇವಾಲಯದಲ್ಲಿ ಪ್ರಾಕಾರೋತ್ಸವ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು, ಧಾರ್ಮಿಕ ವಿಧಿಗಳು ನಡೆದವು.