ಬೆಂಗಳೂರು : ಹಸಿರು ವಿಸ್ತೃತ ಮಾರ್ಗ ನಾಗಸಂದ್ರ - ಮಾದಾವರ ಮೆಟ್ರೋ ಶುರುವಿಗೆ ನಿರ್ಲಕ್ಷ್ಯ

| Published : Nov 04 2024, 12:51 AM IST / Updated: Nov 04 2024, 07:52 AM IST

ಬೆಂಗಳೂರು : ಹಸಿರು ವಿಸ್ತೃತ ಮಾರ್ಗ ನಾಗಸಂದ್ರ - ಮಾದಾವರ ಮೆಟ್ರೋ ಶುರುವಿಗೆ ನಿರ್ಲಕ್ಷ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಹಸಿರು ಮೆಟ್ರೋ ವಿಸ್ತೃತ ಮಾರ್ಗದ ಆರಂಭಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿಲ್ಲ. ಇದರಿಂದ ಜನರ ಓಡಾಟಕ್ಕೆ ತೊಂದರೆ ಆಗಿದೆ.

 ಬೆಂಗಳೂರು : ನಮ್ಮ ಮೆಟ್ರೋ ಹಸಿರು ಮಾರ್ಗದ ವಿಸ್ತರಿತ ಭಾಗ ನಾಗಸಂದ್ರ - ಮಾದಾವರ ನಡುವೆ ರೈಲುಗಳ ವಾಣಿಜ್ಯ ಸಂಚಾರಕ್ಕೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ ಅನುಮೋದನೆ ದೊರೆತು ತಿಂಗಳು ಸಮೀಪಿಸಿದರೂ ಇನ್ನೂ ಪ್ರಯಾಣಿಕ ಸೇವೆ ಆರಂಭವಾಗದಿರುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ರೈಲು ಸಂಚಾರಕ್ಕೆ ಕೇಂದ್ರ, ರಾಜ್ಯ ಸರ್ಕಾರದ ಒಪ್ಪಿಗೆ ಬಾಕಿ ಇರುವುದರಿಂದ ಈ ಮಾರ್ಗದಲ್ಲಿ ಇನ್ನೂ ಮೆಟ್ರೋ ರೈಲು ಓಡಾಡುತ್ತಿಲ್ಲ. ಬೆಂಗಳೂರು ಮೆಟ್ರೋ ರೈಲು ನಿಮಗವು ಒಪ್ಪಿಗೆ ಕೋರಿ ಅ.18ರಂದು ರಾಜ್ಯದ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿತ್ತು. ಅಲ್ಲಿಂದ ಕೇಂದ್ರ ನಗರ ವ್ಯವಹಾರ ಮತ್ತು ವಸತಿ ಸಚಿವಾಲಯಕ್ಕೆ ಅನುಮತಿ ಕೋರಿದೆ. ಆದರೆ, ಕೇಂದ್ರದಿಂದ ಇನ್ನೂ ಉತ್ತರ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಅಕ್ಟೋಬರ್‌ ತಿಂಗಳಾಂತ್ಯಕ್ಕೆ ಈ ಮಾರ್ಗದಲ್ಲಿ ಪ್ರಯಾಣಿಕ ಸೇವೆ ಆರಂಭವಾಗುವ ನಿರೀಕ್ಷೆ ಹುಸಿಯಾಗಿದೆ.

ಔಪಚಾರಿಕ ಉದ್ಘಾಟನೆಗೆ ಕಾಯದೆ, ರಾಜಕಾರಣ ಮಾಡಬಾರದು. ಜನತೆಯ ಅನುಕೂಲಕ್ಕಾಗಿ ಶೀಘ್ರ ಈ ಮಾರ್ಗದಲ್ಲಿ ಸಂಚಾರ ಆರಂಭಿಸಬೇಕು ಎಂದು ಈ ಭಾಗದ ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಕೇವಲ 3.7 ಕಿ.ಮೀ. ಉದ್ದದ ಈ ವಿಸ್ತರಿತ ಮಾರ್ಗದಲ್ಲಿ ಚಿಕ್ಕಬಿದರಕಲ್ಲು (ಜಿಂದಾಲ್ ನಗರ), ಮಂಜುನಾಥನಗರ ಹಾಗೂ ಮಾದಾವರ (ಬಿಐಇಸಿ) ನಿಲ್ದಾಣಗಳಿವೆ. ಈ ಮಾರ್ಗಗಳಿಂದ ನೆಲಮಂಗಲ, ಮಾಕಳಿ ಸೇರಿ ಸುತ್ತಮುತ್ತಲ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಆದರೆ, ಕಳೆದ ಏಳು ವರ್ಷಗಳಿಂದ ಇಲ್ಲಿನ ನಿವಾಸಿಗಳು ಮೆಟ್ರೋ ವಿಸ್ತರಣಾ ಸೇವೆಗೆ ಕಾಯುತ್ತಲೇ ಇದ್ದು, ಇದೀಗ ಕಾಮಗಾರಿ ಮುಗಿದರೂ ಸಂಚಾರ ಮಾತ್ರ ಪ್ರಾರಂಭವಾಗಿಲ್ಲ.

2017ರಲ್ಲಿ ಸುಮಾರು ₹298 ಕೋಟಿ ವೆಚ್ಚದಲ್ಲಿ ವಿಸ್ತರಿತ ಮಾರ್ಗದ ಕಾಮಗಾರಿ ಆರಂಭವಾಗಿತ್ತು. ಎರಡು ವರ್ಷದಲ್ಲಿ ಮುಗಿಯಬೇಕಿದ್ದ ಏಳು ವರ್ಷಗಳ ವಿಳಂಬ ಕಾಮಗಾರಿ ಅಂತಿಮವಾಗಿ ಸೆಪ್ಟೆಂಬರ್‌ನಲ್ಲಿ ಮುಗಿದಿತ್ತು. ಅಕ್ಟೋಬರ್‌ ಮೊದಲ ವಾರ ಸಿಎಂಆರ್‌ಎಸ್‌ ತನ್ನ ತಪಾಸಣೆ ಮುಗಿಸಿತ್ತು.

ಬೆಂಗಳೂರು ಮೆಟ್ರೋ ರೈಲು ನಿಗಮವು ಕೇಂದ್ರ, ರಾಜ್ಯ ಸರ್ಕಾರದಡಿ ಬರುವುದರಿಂದ ಎರಡೂ ಸರ್ಕಾರಗಳ ಪರವಾನಗಿ ಅಗತ್ಯ. ಹಿಂದೆ ನೇರಳೆ ಮಾರ್ಗದಲ್ಲಿ ಬೈಯಪ್ಪನಹಳ್ಳಿ-ಕೆ.ಆರ್‌.ಪುರ ಮಾರ್ಗದಲ್ಲಿ ಸಂಚಾರ ಆರಂಭಿಸುವಾಗ ಒಪ್ಪಿಗೆಗೆ ಕಾಯದೆ ಜನರ ಅನುಕೂಲಕ್ಕೆ ಆರಂಭಿಸುವಂತೆ ಕೇಂದ್ರದಿಂದ ಸೂಚನೆ ಬಂದಿತ್ತು. ಆದರೆ, ಈಗ ಅಂತಹ ಯಾವುದೇ ಸೂಚನೆ ಬಂದಿಲ್ಲ. ಹೀಗಾಗಿ ಅನುಮತಿಗೆ ಕಾಯುತ್ತಿದ್ದೇವೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳಿದರು.

ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದರೆ ನಗರದಲ್ಲಿ ನಮ್ಮ ಮೆಟ್ರೋ ಜಾಲ 77 ಕಿ.ಮೀ. ವಿಸ್ತರಣೆಯಾಗಲಿದೆ. ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆಯೂ ಕಡಿಮೆಯಾಗುವ ನಿರೀಕ್ಷೆಯಿದೆ.