ಸಾರಾಂಶ
ಬೆಂಗಳೂರು : ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸಲು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತರಲಾಗಿದ್ದ ‘ಭಾಗ್ಯಲಕ್ಷ್ಮೀ’ ಯೋಜನೆಯ ಬಾಂಡ್‌ಗಳ ಅವಧಿ ಮುಗಿದ್ದರೂ ತಾಂತ್ರಿಕ ಅಡಚಣೆಯಿಂದಾಗಿ ರಾಜ್ಯದ ಸಹಸ್ರಾರು ಫಲಾನುಭವಿಗಳಿಗೆ ಇನ್ನೂ ಹಣ ವರ್ಗಾವಣೆಯಾಗಿಲ್ಲ.
ಕಳೆದ ಏಪ್ರಿಲ್‌ನಿಂದಲೇ ಭಾಗ್ಯಲಕ್ಷ್ಮೀ ಬಾಂಡ್‌ಗಳು ಮೆಚ್ಯೂರಿಟಿಯಾಗಲು ಆರಂಭವಾಗಿದ್ದು, ತಾಂತ್ರಿಕ ತೊಡಕಿನಿಂದಾಗಿ ಇಲ್ಲಿಯವರೆಗೆ ಯಾವೊಬ್ಬ ಫಲಾನುಭವಿಯ ಖಾತೆಗೂ ಹಣ ಜಮೆಯಾಗಿಲ್ಲ. ಕೆಲವೆಡೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ದಾಖಲೆಗಳನ್ನು ಸಲ್ಲಿಸಿ ತಿಂಗಳುಗಳಾದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಕೆಲವೆಡೆ ಅರ್ಜಿ ಸ್ವೀಕಾರ ಪ್ರಕ್ರಿಯೆಯೇ ಆರಂಭ ಮಾಡಿಲ್ಲ ಎಂಬ ದೂರುಗಳು ಕೇಳಿಬಂದಿವೆ.
ಕುಸಿಯುತ್ತಿರುವ ಲಿಂಗಾನುಪಾತವನ್ನು ಏರಿಕೆ ಮಾಡಲು ಹಾಗೂ ಹೆಣ್ಣುಮಕ್ಕಳ ಜನನವನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಜಾರಿಗೆ ತಂದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, 31 ಮಾರ್ಚ್ 2006ರ ನಂತರ ಬಡತನ ರೇಖೆಯ ಕೆಳಗಿರುವ (ಬಿಪಿಎಲ್) ಕುಟುಂಬದಲ್ಲಿ ಜನಿಸಿದ ಇಬ್ಬರು ಹೆಣ್ಣುಮಕ್ಕಳು ಯೋಜನೆಗೆ ಅರ್ಹರಾಗಿದ್ದರು. ತಾಯಿ-ತಂದೆ ಅಥವಾ ಪಾಲಕರು ಅರ್ಜಿ ಸಲ್ಲಿಸಿದರೆ ಎಲ್‌ಐಸಿ ಬಾಂಡ್ ನೀಡಲಾಗುತ್ತಿತ್ತು.ಬಾಂಡ್‌ನಲ್ಲಿ ನಮೂದಿಸಿದ ಮೊತ್ತವನ್ನು ಮಗುವಿಗೆ 18 ವರ್ಷ ತುಂಬಿದ ಬಳಿಕ ನೀಡುವ ಈ ಯೋಜನೆಯಡಿ, 32ರಿಂದ 45 ಸಾವಿರ ರುಪಾಯಿ ಮೌಲ್ಯದ ಬಾಂಡ್‌ಗಳನ್ನು ಆರಂಭದ ವರ್ಷಗಳಲ್ಲಿ ವಿತರಿಸಲಾಗಿದೆ. 2008ರಲ್ಲಿ ನಿಯಮಗಳನ್ನು ಪರಿಷ್ಕರಿಸಲಾಗಿದ್ದು, ಬಾಂಡ್ ಮೌಲ್ಯ ಹೆಚ್ಚಿಸಲಾಗಿದೆ.
2008ರ ಆಗಸ್ಟ್‌ನಲ್ಲಿ ಜನಿಸಿದ ಮೊದಲ ಮಗುವಿಗೆ 19,300 ರು. ಎಲ್‌ಐಸಿಯಲ್ಲಿ ಡೆಪಾಸಿಟ್ ಇರಿಸಿದ್ದು, 18 ವರ್ಷದ ಬಳಿಕ 1,00,097 ರು. ಹಾಗೂ ಎರಡನೇ ಮಗುವಿಗೆ 18,350 ರು. ಡೆಪಾಸಿಟ್ ಇರಿಸಿದ್ದು, 18 ವರ್ಷದ ಬಳಿಕ 100,052 ರು. ನೀಡಲಾಗುತ್ತದೆ. ಚೈಲ್ಡ್ ಟ್ರ್ಯಾಕಿಂಗ್ ಸಿಸ್ಟಂ ಮೂಲಕ ವಿದ್ಯಾರ್ಥಿನಿಯ ಶೈಕ್ಷಣಿಕ ಮಾಹಿತಿ, ವಲಸೆ ಮತ್ತಿತರ ಮಾಹಿತಿ ಕಲೆ ಹಾಕಲಾಗುತ್ತದೆ.
28.96 ಲಕ್ಷ ಬಾಂಡ್ ವಿತರಣೆ:
ಭಾಗ್ಯಲಕ್ಷ್ಮೀ ಯೋಜನೆಯಡಿ ರಾಜ್ಯದಲ್ಲಿ 2006-07ರಿಂದ 2019-20ರವರೆಗೂ ಒಟ್ಟಾರೆ 28,96, 979 ಬಾಂಡ್ ವಿತರಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ, 2,42,894 ಬಾಂಡ್ ನೀಡಲಾಗಿದೆ. ಎರಡನೇ ಸ್ಥಾನದಲ್ಲಿ ಕಲಬುರಗಿ (1,62,144), ಬೆಂಗಳೂರು ನಗರ ಮೂರನೇ ಸ್ಥಾನದಲ್ಲಿದೆ (1,56,979).ಹೆಣ್ಣು ಮಗುವಿನ ತಾಯಿ ಬಾಲ ಕಾರ್ಮಿಕಳಾಗಿರಬಾರದು, 18 ವರ್ಷಕ್ಕೂ ಮುನ್ನ ವಿವಾಹವಾಗಿರಬಾರದು ಮತ್ತಿತರ ನಿಬಂಧನೆಗಳಿವೆ. 2025ರ ಮಾರ್ಚ್‌ಗೆ 2,39,702 ಬಾಂಡ್ ಮೆಚ್ಯೂರಿಟಿಯಾಗಲಿದ್ದು, ಈಗಾಗಲೇ ಸಹಸ್ರಾರು ಬಾಂಡ್‌ಗಳ ಅವಧಿ ಮುಗಿದಿದ್ದರೂ ಹಣ ಸಂದಾಯವಾಗಿಲ್ಲ.
ಭಾಗ್ಯಲಕ್ಷ್ಮೀ ಯೋಜನೆಯ ಬಾಂಡ್‌ಗಳು ಮೆಚ್ಯೂಟಿಯಾಗಿದ್ದರೂ ತಾಂತ್ರಿಕ ಸಮಸ್ಯೆಯಿಂದಾಗಿ ಹಣ ಸಂದಾಯವಾಗಿಲ್ಲ. ಎಲ್‌ಐಸಿ ಅಧಿಕಾರಿಗಳು ಹಾಗೂ ನಮ್ಮ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರೊಂದಿಗೆ ಈಗಾಗಲೇ ಸಭೆ ನಡೆಸಲಾಗಿದೆ. ಎನ್‌ಐಸಿ ಪೋರ್ಟಲ್ ಅಪ್‌ಡೇಟ್ ಮಾಡಿದ್ದಾರೆ. ಶೀಘ್ರದಲ್ಲೇ ಹಣ ಪಾವತಿಯಾಗಲಿದೆ.
- ಎನ್.ಸಿದ್ದೇಶ್ವರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ
2006ರಿಂದ 2020ರ ವರೆಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಿಸಿರುವ ಕೆಲ ಜಿಲ್ಲೆಗಳ ಮಾಹಿತಿ
ಜಿಲ್ಲೆ ಬಾಂಡ್ ವಿತರಣೆ ಮಾರ್ಚ್ 2025ಕ್ಕೆ ಅರ್ಹ ಪಲಾನುಭವಿಗಳು
ಬೆಳಗಾವಿ 2,42,894 19,965
ತುಮಕೂರು 1,54,188 13,471
ವಿಜಯಪುರ 1,36,337 12,304
ಮೈಸೂರು 1,41,197 12,027
ಬೆಂಗಳೂರು ನಗರ 1,56,979 11,513
ಕಲಬುರಗಿ 1,62,144 11,384
ಬಳ್ಳಾರಿ 1,29,974 10,510
ಹಾವೇರಿ 1,10,945 9851
ಬಾಗಲಕೋಟೆ 1,05,128 9073
ಮಂಡ್ಯ 1,08,861 8923
ಚಿತ್ರದುರ್ಗ 1,04,599 8883
ಧಾರವಾಡ 1,01,652 8874
ರಾಯಚೂರು 1,20,589 8827
- ಹೆಣ್ಣುಮಕ್ಕಳ ಜನನ ಉತ್ತೇಜಿಸಲು 2006ರಲ್ಲಿ ಅಂದು ಡಿಸಿಎಂ ಆಗಿದ್ದ ಯಡಿಯೂರಪ್ಪ ಭಾಗ್ಯಲಕ್ಷ್ಮಿ ಯೋಜನೆ ರೂಪಿಸಿದ್ದರು- ಹೆಣ್ಣುಮಕ್ಕಳಿಗೆ 18 ವರ್ಷವಾದಾಗ ಹಣ ನೀಡುವ ಯೋಜನೆ ಇದು. 2006ರಲ್ಲಿ ನೀಡಿದ್ದ ಬಾಂಡ್‌ಗಳು ಈಗ ಮೆಚ್ಯೂರ್ ಆಗಿವೆ- ಯಾವೊಬ್ಬ ಫಲಾನುಭವಿಯ ಖಾತೆಗೂ ಹಣ ಜಮೆಯಾಗಿಲ್ಲ. ದಾಖಲೆ ಸಲ್ಲಿಸಿ ತಿಂಗಳಾದರೂ ಹಣ ಫಲಾನುಭವಿಗಳಿಗೆ ಸಿಕ್ಕಿಲ್ಲ- ತಾಂತ್ರಿಕ ಸಮಸ್ಯೆಯಿಂದ ಈ ರೀತಿ ಆಗಿದೆ. ಶೀಘ್ರದಲ್ಲೇ ಫಲಾನುಭವಿಗಳಿಗೆ ಹಣ ಸಿಗಲಿದೆ ಎನ್ನುತ್ತಾರೆ ಸರ್ಕಾರಿ ಅಧಿಕಾರಿಗಳು
--ಸಿದ್ದು ಚಿಕ್ಕಬಳ್ಳೇಕೆರೆ