ಮಂಜುನಾಥ ಕೆ.ಎಂ.

ಬಳ್ಳಾರಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಅವರಿಗೆ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಮತ್ತೊಮ್ಮೆ ಸ್ಥಾನ ದಕ್ಕಿದೆ. ಈ ಮೂಲಕ ತೀವ್ರ ಕುತೂಹಲ ಮೂಡಿಸಿದ್ದ ಮಂತ್ರಿಪಟ್ಟ ಯೋಗದ ರಾಜಕೀಯ ಚರ್ಚೆಗೆ ತೆರೆಬಿದ್ದಿದೆಯಲ್ಲದೆ, ತೀವ್ರ ಪೈಪೋಟಿಯ ನಡುವೆ ಸಚಿವ ಸ್ಥಾನ ತನ್ನದಾಗಿಸಿಕೊಂಡ ನಾಗೇಂದ್ರ ಅವರು ತಮ್ಮ ರಾಜಕೀಯ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಂಡಂತಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಅವರನ್ನು ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸೋಲಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದ ನಾಗೇಂದ್ರ, ಬಳಿಕ ಸಚಿವ ಸ್ಥಾನ ಪಡೆದಿದ್ದರು. ಆದರೆ, ವಾಲ್ಮೀಕಿ ನಿಗಮ ಪ್ರಕರಣದ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದರ ಬಳಿಕ ಅವರು ಸಚಿವ ಸಂಪುಟಕ್ಕೆ ಮತ್ತೆ ಸೇರುತ್ತಾರೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ನಿರಂತರವಾಗಿ ಕೇಳಿಬರುತ್ತಿತ್ತು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ಹೊತ್ತಿನಲ್ಲಿ ಬಳ್ಳಾರಿಯ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಕುತೂಹಲ ತಾರಕ್ಕೇರಿತ್ತು. ಜಿಲ್ಲೆಯ ಕಾಂಗ್ರೆಸ್ ನಾಯಕರ ಮಧ್ಯೆ ತೀವ್ರ ಪೈಪೋಟಿಯೂ ನಡೆದಿತ್ತು. ಸಂಸದ ಈ. ತುಕಾರಾಂ ತಮ್ಮ ಪತ್ನಿ ಹಾಗೂ ಸಂಡೂರು ಕ್ಷೇತ್ರದ ಶಾಸಕಿ ಅನ್ನಪೂರ್ಣ ಅವರಿಗೆ ಸಚಿವ ಸ್ಥಾನ ದೊರಕಿಸಿಕೊಡಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಮಹಿಳಾ ಪ್ರತಿನಿಧಿತ್ವ, ಹಿರಿಯ ನಾಯಕತ್ವದ ಬೆಂಬಲ ಹಾಗೂ ಸಂಡೂರು ಕ್ಷೇತ್ರದ ರಾಜಕೀಯ ಮಹತ್ವವನ್ನು ಮುಂದಿಟ್ಟುಕೊಂಡು ಅವರು ಹೈಕಮಾಂಡ್ ಮಟ್ಟದಲ್ಲೂ ಲಾಬಿ ನಡೆಸಿದ್ದರು. ಇನ್ನೊಂದೆಡೆ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಕೂಡ ಯುವ ನಾಯಕತ್ವದ ಪ್ರತಿನಿಧಿಯಾಗಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ನಗರ ಪ್ರದೇಶದಲ್ಲಿ ಪಕ್ಷವನ್ನು ಬಲಪಡಿಸಿರುವುದು ಹಾಗೂ ಹೊಸ ತಲೆಮಾರಿನ ನಾಯಕತ್ವಕ್ಕೆ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದರು. ಕಂಪ್ಲಿ ಶಾಸಕ ಗಣೇಶ್ ಅವರ ಹೆಸರೂ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬಂದಿತ್ತು. ಶಾಸಕ ಗಣೇಶ್ ಗೆ ಸಚಿವಸ್ಥಾನ ನೀಡುವಂತೆ ಬೆಂಬಲಿಗರು ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಹೈಕಮಾಂಡ್ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಆದರೆ, ಅಂತಿಮವಾಗಿ ಕಾಂಗ್ರೆಸ್ ಮತ್ತೊಮ್ಮೆ ಬಿ. ನಾಗೇಂದ್ರ ಅವರ ನಾಯಕತ್ವದ ಮೇಲೆಯೇ ವಿಶ್ವಾಸವಿರಸಿ ಮಂತ್ತಿ ಸ್ಥಾನದ ಪಟ್ಡಿಯಲ್ಲಿ ಅಂತಿಮಗೊಳಿಸಿದೆ. ಇದು ಜಿಲ್ಲೆಯ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ ಎನಿಸಿದೆಯಲ್ಲದೆ, ಒಮ್ಮೆ ಸಚಿವ ಸ್ಥಾನ ಕಳೆದುಕೊಂಡಿದ್ದ ನಾಯಕನಿಗೆ ಮತ್ತೆ ಅದೇ ಜವಾಬ್ದಾರಿ ನೀಡುವ ಮೂಲಕ ಪಕ್ಷ ಸ್ಪಷ್ಟ ಸಂದೇಶ ರವಾನಿಸಿದೆ.

ಬಿ. ನಾಗೇಂದ್ರ ಅವರ ಬೆಳವಣಿಗೆಯನ್ನು ಕೇವಲ ಒಬ್ಬ ಶಾಸಕರ ಯಶಸ್ಸಾಗಿ ನೋಡುವುದಕ್ಕಿಂತಲೂ ಬಿಜೆಪಿಯ ಪ್ರಬಲ ನಾಯಕ ಬಿ. ಶ್ರೀರಾಮುಲು ಅವರಿಗೆ ಕಾಂಗ್ರೆಸ್ ಕಟ್ಟಿರುವ ಪರ್ಯಾಯ ನಾಯಕತ್ವವಾಗಿ ಪರಿಗಣಿಸಲಾಗುತ್ತಿದೆ. ಒಂದು ಕಾಲದಲ್ಲಿ ಬಳ್ಳಾರಿ ರಾಜಕೀಯದಲ್ಲಿ ಶ್ರೀರಾಮುಲು ಅವರ ಪ್ರಭಾವವೇ ಮೇಲುಗೈ ಸಾಧಿಸಿತ್ತು. ಆದರೆ ಕಳೆದ ಚುನಾವಣೆಯಲ್ಲಿ ನಾಗೇಂದ್ರ ಅವರ ಗೆಲುವು ಆ ರಾಜಕೀಯ ಚಿತ್ರಣವನ್ನೇ ಬದಲಿಸಿತು. ವಾಲ್ಮೀಕಿ ಸಮುದಾಯದ ಮತಗಳನ್ನು ಕಾಂಗ್ರೆಸ್ ಕಡೆಗೆ ಸೆಳೆಯುವಲ್ಲಿ ನಾಗೇಂದ್ರ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಅಭಿಪ್ರಾಯ ಪಕ್ಷದೊಳಗಿದೆ. ಸಾಮಾಜಿಕ ಸಮೀಕರಣದ ಲೆಕ್ಕ ಕಾಂಗ್ರೆಸ್ ಮುಂದಿರುವ ಪ್ರಮುಖ ಸವಾಲು. ಉತ್ತರ ಕರ್ನಾಟಕದಲ್ಲಿ ತನ್ನ ಸಾಮಾಜಿಕ ನೆಲೆಯನ್ನು ಮತ್ತಷ್ಟು ಬಲಪಡಿಸುವುದು, ಅದರಲ್ಲೂ ವಾಲ್ಮೀಕಿ ಸಮುದಾಯದಲ್ಲಿ ಪಕ್ಷದ ಪ್ರಭಾವವನ್ನು ಉಳಿಸಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ.


ರಾಜ್ಯ ರಾಜಕೀಯದಲ್ಲಿ ವಾಲ್ಮೀಕಿ ಸಮುದಾಯದ ಮತಗಳು ಹಲವು ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ಸಮುದಾಯದಲ್ಲಿ ಪ್ರಭಾವ ಹೊಂದಿರುವ ನಾಯಕನಾಗಿ ನಾಗೇಂದ್ರ ಗುರುತಿಸಿಕೊಂಡಿರುವುದರಿಂದ ಅವರನ್ನು ಸಚಿವ ಸಂಪುಟಕ್ಕೆ ಸೇರಿಸುವುದು ಕೇವಲ ವೈಯಕ್ತಿಕ ನಿರ್ಧಾರವಲ್ಲ, ಅದು ಸಾಮಾಜಿಕ ಹಾಗೂ ಚುನಾವಣಾ ಲೆಕ್ಕಾಚಾರದ ಭಾಗವಾಗಿದೆ ಎಂದು ರಾಜಕೀಯ ವಲಯ ವಿಶ್ಲೇಷಿಸುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಎದುರಾಗಲಿವೆ. ಅದರ ನಂತರ ವಿಧಾನಸಭೆ ಚುನಾವಣೆಗಳಿಗೂ ರಾಜಕೀಯ ಪಕ್ಷಗಳು ಈಗಿನಿಂದಲೇ ಸಿದ್ಧತೆ ಆರಂಭಿಸಿವೆ.

ಈ ಹಿನ್ನೆಲೆಯಲ್ಲಿ ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಪ್ರಭಾವಿ ಸಚಿವರ ಅಗತ್ಯವಿದೆ ಎಂಬ ಅಭಿಪ್ರಾಯ ಪಕ್ಷದೊಳಗಿದೆ. ಸಚಿವರಾಗಿ ನಾಗೇಂದ್ರ ಕಾರ್ಯನಿರ್ವಹಿಸಿದರೆ ಆಡಳಿತಾತ್ಮಕ ಹಿಡಿತ ಹೆಚ್ಚುವುದರ ಜೊತೆಗೆ ಪಕ್ಷ ಸಂಘಟನೆಯೂ ಬಲವಾಗಲಿದೆ ಎಂಬ ಲೆಕ್ಕಾಚಾರವಿದೆ.

ನಾಗೇಂದ್ರ ಅವರ ಪುನರಾಗಮನ ರಾಜಕೀಯವಾಗಿ ಕಾಂಗ್ರೆಸ್‌ಗೆ ಲಾಭ ತರುವಷ್ಟೇ ವಿರೋಧ ಪಕ್ಷಗಳಿಗೆ ಟೀಕೆಯ ಅಸ್ತ್ರವಾಗುವ ಸಾಧ್ಯತೆಯೂ ಇದೆ. ವಾಲ್ಮೀಕಿ ನಿಗಮ ಪ್ರಕರಣದ ವಿಚಾರವನ್ನು ಬಿಜೆಪಿ ಮತ್ತೆ ಪ್ರಸ್ತಾಪಿಸುವ ಸಾಧ್ಯತೆಗಳಿವೆ. ಆದರೆ, ಪ್ರಕರಣದಲ್ಲಿ ನ್ಯಾಯಾಂಗ ಪ್ರಕ್ರಿಯೆ ಮುಂದುವರಿಯುತ್ತಿರುವುದನ್ನು ಉಲ್ಲೇಖಿಸುತ್ತಿರುವ ಕಾಂಗ್ರೆಸ್, ರಾಜಕೀಯ ಹಾಗೂ ಕಾನೂನು ವಿಚಾರಗಳನ್ನು ಪ್ರತ್ಯೇಕವಾಗಿ ನೋಡಬೇಕೆಂಬ ನಿಲುವು ಹೊಂದಿದೆ.

ಹೊಸ ರಾಜಕೀಯ ಸಂದೇಶ

ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಬಿ. ನಾಗೇಂದ್ರ ಅವರಿಗೆ ಮತ್ತೊಮ್ಮೆ ಅವಕಾಶ ದೊರೆತರೆ ಅದು ಒಬ್ಬ ನಾಯಕರ ಪುನರಾಗಮನ ಮಾತ್ರವಲ್ಲ, ಕಾಂಗ್ರೆಸ್ ತನ್ನ ಪ್ರಭಾವಿ ಪ್ರಾದೇಶಿಕ ನಾಯಕರನ್ನು ಕೈಬಿಡುವುದಿಲ್ಲ ಎಂಬ ಸಂದೇಶವೂ ಆಗಿದೆ. ಜೊತೆಗೆ ಬಳ್ಳಾರಿ ಜಿಲ್ಲೆಯ ರಾಜಕೀಯದಲ್ಲಿ ಕಾಂಗ್ರೆಸ್ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸುವ ಕಾರ್ಯತಂತ್ರಕ್ಕೂ ಇದು ಪೂರಕವಾಗುವ ಸಾಧ್ಯತೆಯಿದೆ.