ಸಾರಾಂಶ
ಬಳ್ಳಾರಿ: ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ನಾಗೇಂದ್ರ ಅವರಿಗೆ ದೊಡ್ಡಪ್ರಮಾಣದ ಶಿಕ್ಷೆಯಾಗುವುದು ಗ್ಯಾರಂಟಿ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಸ್ಥಾಪಿಸಿದ ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ನಡೆಸಿ, ಅದೇ ಸಮುದಾಯದ ವ್ಯಕ್ತಿಯಾಗಿ ಆ ಜನಾಂಗಕ್ಕೆ ಮಾಜಿ ಸಚಿವ ನಾಗೇಂದ್ರ ಅವರು ದ್ರೋಹ ಬಗೆದಿದ್ದಾರೆ ಎಂದು ಕಿಡಿಕಾರಿದರು.ನಿಗಮದ ಹಣದಲ್ಲಿ ಕೋಟ್ಯಂತರ ಮೌಲ್ಯದ ಕಾರು ಖರೀದಿ, ವಿಮಾನ ಪ್ರಯಾಣ ಭತ್ಯೆ, ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಪ್ರತಿ ಮತಕ್ಕೆ ₹200ನಂತೆ ಮೂವರು ಶಾಸಕರ ಮೂಲಕ ಒಟ್ಟು ₹14.80 ಕೋಟಿ ಹಂಚಿಕೆ ಸೇರಿ ₹20 ಕೋಟಿ ಚುನಾವಣೆಗೆ ಬಳಸಿಕೊಂಡಿರುವ ಬಗ್ಗೆ, ಕಂಡ ಕಂಡವರಿಗೆ ಹಣ ವರ್ಗಾವಣೆ ಮಾಡಿರುವ ಕುರಿತು ಇಡಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ನಾಗೇಂದ್ರ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಕುರಿತು ಇಂಚಿಂಚೂ ಮಾಹಿತಿಯನ್ನು ಜಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ. ಇಷ್ಟಾಗಿಯೂ ನಾಗೇಂದ್ರ ನಾಚಿಕೆ ಬಿಟ್ಟು ಬ್ಯಾಂಕಿನವರು ಮಾಡಿದ ಹಗರಣ ಎಂದು ಹೇಳುತ್ತಿದ್ದಾರೆ. ಸಿಬಿಐ ಸಹ ಈಗಾಗಲೇ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು, ಇನ್ನೂ ಸಾಕಷ್ಟು ಅಂಶಗಳು ಹೊರ ಬರಲಿವೆ ಎಂದು ಹೇಳಿದರು.
2011ರ ಸೆ. 5ರಂದು ಆಗ ಸಿಬಿಐ ನನ್ನನ್ನು ಬಂಧಿಸಿದ್ದ ವೇಳೆ ಕೇಂದ್ರದಲ್ಲಿಯೂ ಯುಪಿಎ ಸರ್ಕಾರ ಆಡಳಿತದಲ್ಲಿತ್ತು. ಅಂದು ನಾಗೇಂದ್ರ ಸೇರಿ ಐವರು ಶಾಸಕರು ಬಂಧಿಯಾಗಿದ್ದೆವು. ಯುಪಿಎ ಅವಧಿಯಲ್ಲಿಯೇ ಎರಡು ವರ್ಷ ಜೈಲಿನಲ್ಲಿದ್ದ ಬಗ್ಗೆ ನಾಗೇಂದ್ರ ಮರೆಯಬಾರದು. ಈಗ ವಿನಾಕಾರಣ ಕೇಂದ್ರದ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ. ಹಿರೋಯಿಸಂ ತೋರಿಸುವ ಪ್ರಯತ್ನದಲ್ಲಿ ಹುಚ್ಚುಚ್ಚು ಮಾತನಾಡುವುದು ಸರಿಯಲ್ಲ, ಅದು ನಡೆಯಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಮೂರು ತಿಂಗಳ ಕಾಲ ಜೈಲುವಾಸ ಅನುಭವಿಸಿ ಹೊರಬಂದಿರುವ ಶಾಸಕ ನಾಗೇಂದ್ರ ಇಡಿ ಪ್ರಕರಣದಲ್ಲಿ ಎ1 ಆರೋಪಿ ಎಂಬುದನ್ನು ಮರೆಯಬಾರದು ಎಂದು ನಾಗೇಂದ್ರ ವಿರುದ್ಧ ಜನಾರ್ದನ ರೆಡ್ಡಿ ಹರಿಹಾಯ್ದರು.ಉಪ ಚುನಾವಣೆ ವರೆಗೆ ಸಂಡೂರಿನಲ್ಲಿ ವಾಸ್ತವ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆ ಘೋಷಣೆಗೂ ಒಂದು ದಿನ ಮುನ್ನ ಸಂಡೂರಿಗೆ ಬಂದು ಸಾಧನಾ ಸಮಾವೇಶ ಮಾಡಿ, ₹1200 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಇದು ಚುನಾವಣೆ ಗಿಮಿಕ್ ಎಂದು ಯಾರಿಗಾದರೂ ತಿಳಿಯುತ್ತದೆ. ಸಂಡೂರು ಅಭಿವೃದ್ಧಿಯ ಬಗ್ಗೆ ಕಾಳಜಿ ಇದ್ದರೆ ಇಷ್ಟು ದಿನ ಏನು ಮಾಡಿದರು ಎಂದು ಪ್ರಶ್ನಿಸಿದರು.
ಡಿಎಂಎಫ್, ಕೆಎಂಇಆರ್‌ಸಿ, ಸಿಎಸ್ಸಾರ್ ಅನುದಾನವನ್ನು ಸಮರ್ಥವಾಗಿ ಬಳಸಿಕೊಂಡರೆ ಸಂಡೂರನ್ನು ಸ್ವರ್ಗವನ್ನಾಗಿ ಮಾಡಬಹುದು. ಆದರೆ, ಅಲ್ಲಿ ಸರಿಯಾಗಿ ಹಣ ಬಳಕೆಯಾಗಿಲ್ಲ. ತನಿಖೆಯಾದರೆ ವಾಲ್ಮೀಕಿ ಹಗರಣ ಮೀರಿದ ಹಗರಣ ಹೊರ ಬರುತ್ತದೆ ಎಂದರು.ಸಂಡೂರು ಉಪ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿಯೇ ವಾಸ್ತವ್ಯ ಮಾಡುತ್ತಿದ್ದು, ಶುಕ್ರವಾರ ಗೃಹಪ್ರವೇಶವಾಗಲಿದೆ. ನಾಳೆಯಿಂದಲೇ ಅಲ್ಲಿಯೇ ಇದ್ದು ಚುನಾವಣೆ ಜವಾಬ್ದಾರಿ ಕೆಲಸ ನಿರ್ವಹಿಸಲಾಗುವುದು. ಸಂಡೂರು ಉಪ ಚುನಾವಣೆ ಮೂಲಕ ಬಿಜೆಪಿಯ ವಿಜಯಯಾತ್ರೆ ಶುರುವಾಗಲಿದೆ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಸರಿಯೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ನಾಗೇಂದ್ರ ಜಾಮೀನಿನ ಮೇಲೆ ಬಂದಿದ್ದು ಸಂಡೂರು ಹೈವೋಲ್ಟೇಜ್ ಕ್ಷೇತ್ರವಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಜನಾರ್ದನ ರೆಡ್ಡಿ, ವಾಲ್ಮೀಕಿ ಹಗರಣದಿಂದಾಗಿ ನಾಗೇಂದ್ರ ಮೇಲೆ ಅನೇಕ ಪ್ರಕರಣಗಳಿಗೆ. ಹೀಗಾಗಿ ನಾಗೇಂದ್ರ ಹೈವೋಲ್ಟೇಜ್‌ನಲ್ಲಿದ್ದಾರೆ. ಇನ್ನು ಚುನಾವಣೆ ವೇಳೆ ಅವರೇನು ಹೈ ವೋಲ್ಟೇಜ್ ಮಾಡೋದು? ಅವರಲ್ಲಿರುವ ವೋಲ್ಟೋಜ್ ಸ್ಫೋಟಗೊಳ್ಳದಿದ್ದರೆ ಸಾಕು ಎಂದು ವ್ಯಂಗ್ಯವಾಡಿದರು.ಮಾಜಿ ಶಾಸಕ ಜಿ. ಸೋಮಶೇಖರ್ ರೆಡ್ಡಿ, ಪಕ್ಷದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಬುಡಾ ಮಾಜಿ ಅಧ್ಯಕ್ಷ ದಮ್ಮುರು ಶೇಖರ್, ಸುಮಾರೆಡ್ಡಿ, ಗೋನಾಳ್ ರಾಜಶೇಖರಗೌಡ, ಎಚ್. ಹನುಮಂತಪ್ಪ, ಡಾ.ಬಿ.ಕೆ. ಸುಂದರ್ ಸುದ್ದಿಗೋಷ್ಠಿಯಲ್ಲಿದ್ದರು.