ಮೂಲೆಗುಂಪಾಗುತ್ತಿದೆ ನಾಲತವಾಡ ಇಂದಿರಾ ಕ್ಯಾಂಟೀನ್‌

| Published : Nov 21 2025, 03:00 AM IST

ಸಾರಾಂಶ

ನಾಲತವಾಡ ಪಟ್ಟಣದಲ್ಲಿನ ಇಂದಿರಾ ಕ್ಯಾಂಟೀನ್‌ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಪ್ರತಿದಿನ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ನಾಲತವಾಡ

ರಾಜ್ಯ ಸರ್ಕಾರ ಬಡವರ ಹಸಿವು ನೀಗಿಸಲು ರಾಜ್ಯದ ಪ್ರತಿ ನಗರ, ಪಟ್ಟಣಗಳಲ್ಲಿ ಲಕ್ಷಾಂತರ ವೆಚ್ಚ ಮಾಡಿ ಇಂದಿರಾ ಕ್ಯಾಂಟೀನ್‌ ಆರಂಭಿಸಿದೆ. ಆದರೆ ನಾಲತವಾಡ ಪಟ್ಟಣದಲ್ಲಿನ ಇಂದಿರಾ ಕ್ಯಾಂಟೀನ್‌ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಪ್ರತಿದಿನ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದು, ಜನರು ಸರ್ಕಾರದ ಈ ಸೌಲಭ್ಯದಿಂದ ವಂಚಿತರಾಗುವ ಭೀತಿ ಎದುರಾಗಿದೆ.

ಪಟ್ಟಣದ ಇಂದಿರಾ ಕ್ಯಾಂಟೀನ್ ವಾರದಲ್ಲಿ ಎರಡು-ಮೂರು ದಿನ ಮಾತ್ರ ಬಾಗಿಲು ತೆರೆದಿರುತ್ತಿದ್ದು, ಗುರುವಾರ ಬೆಳಗ್ಗೆ ಗ್ಯಾಸ್‌ ಸಿಲಿಂಡರ್ ಇಲ್ಲದೆ ಕ್ಯಾಂಟೀನ್ ಬಂದ್ ಆಗಿತ್ತು. ಉಪಹಾರ, ಊಟಕ್ಕೆಂದು ಬಂದಿದ್ದ ಸ್ಥಳೀಯರು, ಹಳ್ಳಿಗಳಿಂದ ಆಗಮಿಸುವ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ನಿರ್ಗತಿಕರು ನಿರಾಸೆಯಿಂದ ಮರಳುವಂತಾಯಿತು.

ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಂಡು, ಹೊಸ ಗುತ್ತಿಗೆದಾರನಿಗೆ ಕ್ಯಾಂಟೀನ್‌ ನಿರ್ವಹಣೆ ನೀಡಿ ಸಮರ್ಪಕವಾಗಿ, ಸುಗಮವಾಗಿ ನಡೆಸಿ ಬಡಜನರು ಕ್ಯಾಂಟೀನ್‌ ಸೌಲಭ್ಯದಿಂದ ವಂಚಿತರಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಸಿಲಿಂಡರ್ ಖಾಲಿಯಾಗಿದೆ ತುಂಬಿಸಬೇಕೆಂದು ಗುತ್ತಿಗೆದಾರನಿಗೆ ನಿನ್ನೆಯಿಂದ ನೂರಾರು ಬಾರಿ ಕರೆ, ಸಂದೇಶ ಕಳುಹಿಸಿದ್ದರೂ ಉತ್ತರವೇ ಇಲ್ಲ. ತರಕಾರಿ ಮತ್ತು ಮೂಲ ಸಾಮಗ್ರಿಗಳಿಗೂ ಹಣವಿಲ್ಲದ ಸ್ಥಿತಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಸಾರ್ವಜನಿಕರು ನಮಗೆ ಬಂದು ಪ್ರಶ್ನೆ ಮಾಡುತಿದ್ದಾರೆ, ಗುತ್ತಿಗೆದಾರ ಮಾತ್ರ ಕ್ಯಾಂಟೀನ್‌ಗೆ ಸಾಮಾಗ್ರಿ ನೀಡುತಿಲ್ಲ ಎಂದು ಇಂದಿರಾ ಕ್ಯಾಂಟಿನ್ ಮೇಲ್ವಿಚಾರಕಿ ಕಮಲಾ ಭಜಂತ್ರಿ ತಿಳಿಸಿದ್ದಾರೆ.