ಕನ್ನಡಪ್ರಭ ವಾರ್ತೆ ಮೈಸೂರು
ಸಮಾಜದಲ್ಲಿ ಯಾವುದೇ ಧರ್ಮ ಅಥವಾ ನಂಬಿಕೆ ಇದ್ದರೂ ಎಲ್ಲರಲ್ಲೂ ಪರಸ್ಪರ ಹೊಂದಾಣಿಕೆ ಮತ್ತು ಸೇವಾಮನೋಭಾವನೆ ಇರುವುದು ಅತ್ಯಂತ ಮುಖ್ಯ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಮೈಸೂರು ನಗರ ಪಾಲಿಕೆ ಹಾಗೂ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವ ಸಮಿತಿ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಹತ್ತು ವರ್ಷಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯನ್ನು ಅತ್ಯಂತ ಯಶಸ್ವಿಯಾಗಿ ಆಚರಿಸುತ್ತಾ ಬರುತ್ತಿದೆ. ಅವರ ಸಾಧನೆ ಮತ್ತು ಕೊಡುಗೆಗಳನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಹೆಚ್ಚಾಗಿ ನಡೆಯಬೇಕು ಎಂದು ವ್ಯಕ್ತಪಡಿಸಿದರು.ಇಂದು ಕರ್ನಾಟಕವು ಒಂದು ಪ್ರಗತಿಪರ ರಾಜ್ಯವಾಗಿ ಗುರುತಿಸಿಕೊಂಡಿರುವುದಕ್ಕೆ ಅನೇಕ ನಾಯಕರ ಕೊಡುಗೆ ಇದೆ. ಅದರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಮತ್ತು ಸಾಧನೆಗಳು ಅತ್ಯಂತ ಪ್ರಮುಖವಾದವು. ಅವರ ಈ ಸಾಧನೆಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಸುವರ್ಣ ಮೈಸೂರಿನಂತೆ ಒಂದು ಅಭಿವೃದ್ಧಿ ಹೊಂದಿದ ಕರ್ನಾಟಕವನ್ನು ನಿರ್ಮಿಸುವುದೇ ನಾಲ್ವಡಿ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ. ಅವರ ಮೌಲ್ಯಗಳನ್ನು ಮತ್ತು ತತ್ತ್ವಗಳನ್ನು ಮುಂಬರುವ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಹಾಗೂ ಲೇಖಕ ಸಿದ್ದಸ್ವಾಮಿ ಮಾತನಾಡಿ, ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಪಾಳೆಗಾರರು, ಕಮಿಷನರ್ ಗಳು ಮತ್ತು ದಿವಾನರು ಸೇರಿದಂತೆ ಸುಮಾರು 52 ಗಣ್ಯರು ಸೇವೆ ಸಲ್ಲಿಸಿದ್ದಾರೆ. ಆದರೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇತಿಹಾಸದ ಧ್ರುವತಾರೆಯಂತೆ ಮಿಂಚಿದ್ದಾರೆ ಎಂದರು.
ನಾಲ್ವಡಿ ಅವರಿಗೆ ಬನಾರಸ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಲಭಿಸಿತು. ಆದ್ದರಿಂದ ಅವರನ್ನು ರಾಜರ್ಷಿ ಡಾ.ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಸಂಬೋಧಿಸುವುದು ಹೆಚ್ಚು ಸೂಕ್ತ ಎಂದರು.ಹತ್ತನೇ ಚಾಮರಾಜ ಒಡೆಯರ್ ಅವರ ಕಾಲದಲ್ಲಿ ಮೈಸೂರಿನಲ್ಲಿ ಪ್ರಜಾಪ್ರತಿನಿಧಿ ಸಭೆ ಆರಂಭವಾಗಿ ಪ್ರಜಾಪ್ರಭುತ್ವದ ಅಂಕುರಾರ್ಪಣೆ ಆಯಿತು. ಇದನ್ನು ಮುಂದುವರಿಸಿದ ನಾಲ್ವಡಿಯವರು 1907ರಲ್ಲಿ ನ್ಯಾಯ ವಿಧಾಯಕ ಸಭೆಯನ್ನು ಅಸ್ತಿತ್ವಕ್ಕೆ ತಂದಿದ್ದಾಗಿ ಹೇಳಿದರು.
ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಮೀಸಲಾತಿಗೆ ಅಡಿಪಾಯ ಹಾಕುವ ಮೊದಲೇ, ನಾಲ್ವಡಿಯವರು 1918 ರಲ್ಲಿ ಹಿಂದುಳಿದ ವರ್ಗದವರಿಗೆ ಸೌಲಭ್ಯ ಕಲ್ಪಿಸಲು ಮಿಲ್ಲರ್ ಸಮಿತಿ ರಚಿಸಿದ್ದರು. ಆ ಮೂಲಕ ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಆಡಳಿತದಲ್ಲಿ ನ್ಯಾಯ ಒದಗಿಸಿದ್ದಾಗಿ ಅವರು ತಿಳಿಸಿದರು.ನಾಲ್ವಡಿಯವರ ಕೊಡುಗೆಗಳು ಅಪಾರವಾಗಿದ್ದು, ಅವರ ಜಯಂತಿಯು ಮೈಸೂರಿನ ಹಾಗೂ ಕರ್ನಾಟಕದ ಮನೆಮನೆಯ ಹಬ್ಬವಾಗಿ ಆಚರಿಸಲ್ಪಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಕೆ.ಆರ್.ಎಸ್ ಅಣೆಕಟ್ಟನ್ನು ಕಟ್ಟುವ ಸಂದರ್ಭದಲ್ಲಿ ಹಣಕಾಸಿನ ಮುಗ್ಗಟ್ಟು ಎದುರಾದಾಗ, ಅವರು ತಮ್ಮ ಚಿನ್ನಾಭರಣಗಳನ್ನು ಮಾರಟ ಮಾಡಿ ಬಂದ ಹಣದಿಂದ ಅಣೆಕಟ್ಟನ್ನು ಪೂರ್ಣಗೊಳಿಸಿದರು. ಅವರ ತ್ಯಾಗವನ್ನು ಜನರು ಸದಾ ನೆನಪಿಸಿಕೊಳ್ಳಬೇಕು ಎಂದರು.ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಜನತೆ ಇಂದಿಗೂ ಕಾವೇರಿ ನೀರು ಕುಡಿಯಲು ಡಾ.ಸರ್.ಎಂ. ವಿಶ್ವೇಶ್ವರಯ್ಯ ಹಾಗೂ ನಾಲ್ವಡಿ ಒಡೆಯರ್ ಅವರ ಶ್ರಮ ಮುಖ್ಯ ಕಾರಣ. ಈ ಇಬ್ಬರ ಮಹನೀಯರನ್ನು ಪೋಜಿಸುದು ನಮ್ಮೆಲ್ಲರ ಕರ್ತವ್ಯ ಎಂದರು.
ಇಂದಿನ ರಾಜಕಾರಣಿಗಳು ಸರ್ಕಾರದ ಹಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ತಮ್ಮ ಹೆಸರನ್ನು ಹಾಕಿಸಿಕೊಳ್ಳುತ್ತಾರೆ ಹಾಗೂ ಅದನ್ನು ಚುನಾವಣೆಯ ಪ್ರಚಾರವಾಗಿ ಬಳಸಿಕೊಳ್ಳುತ್ತಾರೆ. ಆದರೆ ಒಡೆಯರ್ ಅವರು ಉಕ್ಕಿನ ಕಾರ್ಖಾನೆಯಂತಹ ಯೋಜನೆ ರೂಪಿಸಿದರೂ ಅದಕ್ಕೆ ತಮ್ಮ ಹೆಸರನ್ನು ಇಟ್ಟುಕೊಳ್ಳದೆ ವಿಶ್ವೇಶ್ವರಯ್ಯನವರ ಹೆಸರಿಟ್ಟರು ಎಂದು ಹೇಳಿದರು.ಇಡೀ ವಿಶ್ವದಲ್ಲೇ ಮೈಸೂರು ಮೆಡಿಕಲ್ ಕಾಲೇಜು ತನ್ನದೇ ಆದ ಇತಿಹಾಸ ಹೊಂದಿದೆ. ಇದನ್ನು ನಾಲ್ವಡಿ ಒಡೆಯರ್ ಅವರು ಕಟ್ಟಿಸಿದ್ದರು ಎಂಬುದು ಅಲ್ಲಿ ಓದಿದವರಿಗೆ ಮಾತ್ರ ತಿಳಿದಿದೆ. ಇಂತಹ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ ಎಂದರು.
ಇತಿಹಾಸವನ್ನು ಬರೆಯಬೇಕೆಂದರೆ ಇತಿಹಾಸವನ್ನು ತಿಳಿದಿರಬೇಕು. ಮುಂದಿನ ಪೀಳಿಗೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತಹ ಮಹನೀಯರು ಬಿಟ್ಟುಹೋದ ಗುರುತಿನ ಹೆಜ್ಜೆಗಳನ್ನು ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 29 ಮಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಾ.ಬಿ.ಎಸ್. ಮಂಜುನಾಥ ಸ್ವಾಮಿ, ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಮಾಜಿ ಮೇಯರ್ ಪುರುಷೋತ್ತಮ್, ಸೋಮಯ್ಯ ಮಲಿಯೂರು ಮೊದಲಾದವರು ಇದ್ದರು.