ಅಭಿವೃದ್ಧಿಯ ಹರಿಕಾರ ನಾಲ್ವಡಿ ಒಡೆಯರ್‌

| Published : Apr 29 2024, 01:31 AM IST / Updated: Apr 29 2024, 01:32 AM IST

ಸಾರಾಂಶ

ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಆಡಳಿತ ೩೮ ವರ್ಷಗಳಾಗಿದ್ದರೂ ಸಹ ಅವರ ಸಾಧನೆಯು ದಶಕಗಳ ಗುರಿ ಮೀರಿದೆ. ವಿದ್ಯುತ್, ಅಣೆಕಟ್ಟು, ಕೈಗಾರಿಕೆಗಳು, ಚಿತ್ರಕಲೆ, ಎಂಜಿನಿಯರಿಂಗ್ ಕಾಲೇಜು, ಮತ್ತಿತರ ಯೋಜನೆಗಳ ಅನುಷ್ಠಾನ

ಕನ್ನಡಪ್ರಭ ವಾರ್ತೆ ಕೋಲಾರಕರ್ನಾಟಕ ರಾಜ್ಯ ಇತಿಹಾಸದಲ್ಲಿ ಅಭಿವೃದ್ಧಿಯ ಹರಿಕಾರ, ಮೈಸೂರು ಸಂಸ್ಥಾನ ವಿಶ್ವಮಾನ್ಯವಾಗಿ ಸರ್ವಾಂಗೀಣ ಪ್ರಗತಿಗೆ ಕಾರಣೀಭೂತರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಗಳು ಸುವರ್ಣಾಕ್ಷರಗಳಲ್ಲಿ ದಾಖಲಿಸಬಹುದಾಗಿದೆ ಎಂದು ಕನ್ನಡ ಅಧ್ಯಯನ ಕೇಂದ್ರದ ನಿವೃತ್ತ ಪ್ರಾಧ್ಯಾಪಕ ಡಾ. ರಾಜಪ್ಪ ದಳವಾಯಿ ಅಭಿಪ್ರಾಯಪಟ್ಟರು.ನಗರದ ಪತ್ರಕರ್ತರ ಭವನದಲ್ಲಿ ಓದುಗ ಕೇಳುಗ-ನಮ್ಮ ನಡೆ ತಿಂಗಳ ಕಾರ್ಯಕ್ರಮದಲ್ಲಿ ಮಾತನಾಡಿ, ಮೈಸೂರು ರಾಜ ಮನೆತನಕ್ಕೆ ಸಮೀಪವಾಗಿದ್ದ ಪ್ರೊ.ಪಿ.ವಿ.ನಂಜರಾಜ ಅರಸ್ ಅವರು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಆಡಳಿತದ ಕುರಿತು ರಚಿಸಿರುವ ಕೃತಿ ‘ಮರೆಯಲಾಗದ ಮಹಾನುಭವ’ ಕೃತಿಯನ್ನು ನೆಪವಾಗಿಟ್ಟುಕೊಂಡು ನಾಟಕ ನಿರ್ದೇಶಿಸುವ ಪ್ರಯತ್ನಕ್ಕೆ ಪೂರಕವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಿ ಹೇಳಿದರು. ಅಣೆಗಾಗಿ ಆಭರಣಗಳ ಮಾರಾಟ

ಕನ್ನಂಬಾಡಿ ಅಣೆಕಟ್ಟು ನಿರ್ಮಿಸಲು ಆರ್ಥಿಕ ಕೊರತೆ ಎದುರಾಗಿದ್ದ ಸಂದರ್ಭದಲ್ಲಿ ಮೈಸೂರು ಸಂಸ್ಥಾನದ ರಾಜರಾದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರು ಕುಟುಂಬಸ್ಟರು ತಮ್ಮಲ್ಲಿದ್ದ ಚಿನ್ನಾಭರಣಗಳನ್ನು ಸಾರ್ವಜನಿಕರ ಅಭಿವೃದ್ದಿ ಕಾರ್ಯಕ್ಕೆ ತ್ಯಾಗ ಮಾಡಿದ ಹಿನ್ನೆಲೆಯಲ್ಲಿ ಅದನ್ನು ಮುಂಬೈ ಮಾರ್ಕೆಟ್‌ನಲ್ಲಿ ಮಾರಾಟ ಮಾಡಿ ಬಂದ ೨.೫ ಲಕ್ಷ ರು. ಹಣದಲ್ಲಿ ಕನ್ನಂಬಾಡಿ ಅಣೆಕಟ್ಟು ನಿರ್ಮಿಸಿದರು ಅದರ ಉಸ್ತುವಾರಿ ವಿಶ್ವೇಶ್ವರಯ್ಯರಿಗೆ ವಹಿಸಿದ್ದರು ಎಂಬುವುದು ಇತಿಹಾಸ ಎಂದರು.

ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಆಡಳಿತ ೩೮ ವರ್ಷಗಳಾಗಿದ್ದರೂ ಸಹ ಅವರ ಸಾಧನೆಯು ದಶಕಗಳ ಗುರಿ ಮೀರಿದೆ. ವಿದ್ಯುತ್, ಅಣೆಕಟ್ಟು, ಕೈಗಾರಿಕೆಗಳು, ಚಿತ್ರಕಲೆ, ಟೆಕ್ನಿಕರಲ್, ಆರ್ಟ್ಸ್, ಇಂಜಿನಿಯರಿಂಗ್ ಕಾಲೇಜುಗಳು, ಸಿಡುಬು ರೋಗಕ್ಕೆ ಮದ್ದು, ಉಚಿತ ಶಿಕ್ಷಣ, ಮುದ್ರಣ, ಸೆನೆಟ್ ಸ್ಥಾಪನೆ, ಉನ್ನತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ, ೧೮೭೦ರಲ್ಲಿ ಕೃಷಿ ಆಹಾರ ಉತ್ಪನ್ನಗಳು ಕೈಗಾರಿಕೆಗಳ ಉತ್ಪನ್ನಗಳ ವಸ್ತು ಪ್ರದರ್ಶನ, ಜನಸಂಖ್ಯೆ ನಿಯಂತ್ರಣ, ಜನಗಣತಿ ಯೋಜನೆಗಳು ಸೇರಿದಂತೆ ಅನೇಕ ಪ್ರಗತಿದಾಯಕ ಅಭಿವೃದ್ಧಿಯ ಸಾಧನೆ ವಿವರಿಸಿದರು.

ಕನ್ನಡ ಬೆಳವಣಿಗೆಗೆ ಒತ್ತು

ಬ್ರಿಟಿಷರು ನಮಗೆ ಶಿಕ್ಷಣ ನೀಡದಿದ್ದರೆ ನಾವು ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಅವರು ಮಾಡಿದ ಜ್ಞಾನಾರ್ಜನೆಯಿಂದ ನಾವು ಸ್ವಾತಂತ್ರ್ಯ ಪಡೆಯುವಂತಾಯಿತು, ಶಿಕ್ಷಣದಲ್ಲಿ ಮುನ್ನೆಲೆಗೆ ಬರಲು ಸಾಧ್ಯವಾಯಿತು, ಆಗಲೇ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ದಿವಾನರಿಗೆ ಅಧಿಕಾರ ನೀಡಲಾಗಿತ್ತು, ಕನ್ನಡಕ್ಕೆ ಒಡೆಯರ್ ಅವರು ಆಗಲೇ ಒತ್ತು ನೀಡಿದ್ದು ಕನ್ನಡ ಬೆಳವಣಿಗೆಗೆ ಪೂರಕವಾಯಿತು ಎಂದು ಬಣ್ಣಿಸಿದರು.

ಸಾಹಿತಿ ಹಾಗೂ ಉಪನ್ಯಾಸಕ ಶಂಕರೇಗೌಡ ಇದ್ದರು. ಪರಿಸರ ಪ್ರೇಮಿ ಎಚ್.ಎ. ಪುರುಷೋತ್ತಮ್ ರಾವ್ ಸ್ವಾಗತಿಸಿ, ಮಂಜುಳರಿಂದ ಜಾನಪದ ಗಾಯನ ನಡೆಯಿತು.