ಸಾರಾಂಶ
- ವಾಲ್ಮೀಕಿ ಜಯಂತಿ ಕಾರ್ಯಕ್ರಮ । ಮಡಿವಾಳ, ಸವಿತಾ ಸಮಾಜ ಎಸ್‌ಸಿಗೆ ಸೇರಿಸಲು ಒತ್ತಾಯ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದೆಹಲಿ- ಬೆಂಗಳೂರು ನಡುವೆ ಸಂಚರಿಸುವ ಯಾವುದಾದರೂ ರೈಲು ಮತ್ತು ಮೈಸೂರು- ಬೀದರ್ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಮಾಡಬೇಕೆಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಒತ್ತಾಯಿಸಿದರು.ಬುಧವಾರ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ವಾಲ್ಮೀಕಿ ಪ್ರತಿಷ್ಠಾನ ಮತ್ತು ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 4 ನೇ ವರ್ಷದ ವಾಲ್ಮೀಕಿ ಜಯಂತಿ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಏಳು ಸಾವಿರ ವರ್ಷಗಳ ಹಿಂದೆ ನಡೆದಿರುವ ರಾಮಾಯಣ ಮಹಾಕಾವ್ಯದ ಪ್ರತಿ ಕಾಂಡವನ್ನು ವಿಶೇಷ ಅರ್ಥ ಇಟ್ಟುಕೊಂಡೇ ರಚಿಸಲಾಗಿದೆ. ಸಹೋದರರು ಹೇಗಿರಬೇಕು, ಅವರ ನಡುವಿನ ಬಾಂಧವ್ಯ ಯಾವ ರೀತಿ ಇರಬೇಕು ಮೊದಲಾದ ಮಾನವೀಯ ಸಂಬಂಧಗಳ ಕುರಿತು ಮೌಲ್ಯಯುತ ಅರ್ಥಗಳು ರಾಮಾಯಣ ಗ್ರಂಥದಲ್ಲಿವೆ. ಮಹಾತ್ಮ ಗಾಂಧೀಜಿ ಕೊನೆ ಉಸಿರು ಎಳೆಯುವಾಗ ಹೇ ರಾಮ್ ಎಂದು ಉದ್ಗರಿಸಿದರು. ವಾಲ್ಮೀಕಿ ಅವರ ರಾಮಾಯಣದ ಆಶಯದಂತೆ ಇಂದು ರಾಮರಾಜ್ಯ ನಿರ್ಮಾಣವಾದರೆ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದರು.ಮಡಿವಾಳ ಮತ್ತು ಸವಿತಾ ಸಮಾಜವನ್ನು ಎಸ್ಸಿಗೆ ಸೇರ್ಪಡೆ ಮಾಡಬೇಕು. ಈ ಎರಡೂ ಜನಾಂಗ ನಿಜವಾಗಿಯೂ ಎಸ್ಸಿಗೆ ಸೇರಲು ಅರ್ಹತೆ ಹೊಂದಿವೆ. ರಸ್ತೆಯಲ್ಲಿ ಕ್ಷೌರಿಕರು ಎದುರು ಬಂದಾಗ ಅಪಶಕುನ ಎನ್ನುವುದು ಕೂಡ ಜಾತಿನಿಂದನೆ ಆಗಲಿದೆ. ಈ ಸಮಾಜದ ಜನರು ನಿಜವಾದ ಅಸ್ಪೃಶ್ಯತೆ ಎದುರಿಸುತ್ತಿದ್ದಾರೆ ಎಂದರು.
ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಎಚ್.ಸಿ. ಗುಡ್ಡಪ್ಪ ಮಾತನಾಡಿ, ಎಲ್ಲ ಜಾತಿ.ಜನಾಂಗದವರು ಸೇರಿಕೊಂಡು 4 ವರ್ಷಗಳಿಂದ ಜಯಂತಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ಅಂದಿನ ಕಾಲದಲ್ಲಿಯೇ ಮನುಷ್ಯರು ಹೇಗೆ ಬದುಕಬೇಕೆನ್ನುವುದನ್ನು ರಾಮಾಯಣ ಗ್ರಂಥದ ಮೂಲಕ ಮಹರ್ಷಿಗಳು ಸಾರಿದ್ದಾರೆ. ಅದರ ಆಶಯದಂತೆ ನಾವು ಬದುಕಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಹುಚ್ಚವ್ಬನಹಳ್ಳಿ ಮಂಜುನಾಥ್ ಮಾತನಾಡಿ, ಎಲ್ಲ ಜಾತಿ.ಜನಾಂಗದವರನ್ನು ಒಳಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ. 9 ದಿನಗಳ ಈ ವಿಶೇಷ ಕಾರ್ಯಕ್ರಮದಲ್ಲಿ ಮಹಿಳೆಯರು, ಯುವಕರು, ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲಾಗುವುದು. ನಶಿಸಿಹೋಗುತ್ತಿರುವ ಕಲೆ, ಕಲಾವಿದರಿಗೆ ಉತ್ತೇಜನ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಅಣಜಿ ಚಂದ್ರಶೇಖರ್ ಮಾತನಾಡಿದರು. ರಾಜನಹಟ್ಟಿ ರಾಜು. ಎಲೋದಹಳ್ಳಿ ರವಿ ಕುಮಾರ್, ಚಿಕ್ಕಮಲ್ಲನಹೊಳೆ ಚಿರಂಜೀವಿ, ಯರವನಾಗತಿಹಳ್ಳಿ ಪರಮೇಶ್ವರಪ್ಪ, ಹೂವಿನ ಮಡು ನಾಗರಾಜ್,ಗುಡ್ಡದ ಕುಮಾರನಹಳ್ಳಿ ಪ್ರಭು, ಎನ್.ಗಾಣದಗಟ್ಟೆ ಅಂಜು,ಗುಮ್ಮನೂರು ರುದ್ರೇಶ್, ಕಿತ್ತೂರು ನಳಿನಮ್ಮ, ಗಿರಿಯಾಪುರ ಶಶಿಕಲಾ, ಹುಚ್ಚವ್ವನಹಳ್ಳಿ ಗೌಡರ ಪ್ರಕಾಶ್ ಇತರರು ಉಪಸ್ಥಿತರಿದ್ದರು. ಶೃತಿ ಪೂಜಾರ್ ಸ್ವಾಗತಿಸಿ ವಂದಿಸಿದರು. ನಾಳೆ ರಾಜ್ಯ ಮಟ್ಟದ ಭಜನಾ ಸ್ಪರ್ಧೆ ಏರ್ಪಡಿಸಲಾಗಿದೆ.ಅದ್ಧೂರಿ ಮೆರವಣಿಗೆ:
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 11.30ಕ್ಕೆ ನಗರದ ಹೊಸ ಬಸ್ ನಿಲ್ದಾಣ ಮುಂಭಾಗದಿಂದ ಜಾನಪದ ಕಲಾತಂಡಗಳೊಂದಿಗೆ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಆರಂಭಗೊಂಡಿತು.- - -
-8ಕೆಡಿವಿಜಿ 39, 40:ದಾವಣಗೆರೆಯಲ್ಲಿಂದು ವಾಲ್ಮೀಕಿ ಪ್ರತಿಷ್ಠಾನ ಮತ್ತು ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 4ನೇ ವರ್ಷದ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ವಿ.ಎಸ್.ಉಗ್ರಪ್ಪ ಚಾಲನೆ ನೀಡಿದರು.