ಸಾರಾಂಶ
ಡಿ.ಸಿ.ತಮ್ಮಣ್ಣ ಮತ್ತು ಮಧು ಜಿ.ಮಾದೇಗೌಡರ 20 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಕೃತ್ಯಗಳು ಎಂದೂ ನಡೆದಿರಲಿಲ್ಲ. ಆದರೆ, ಮದ್ದೂರು ಕ್ಷೇತ್ರದಲ್ಲಿ ರಾಜಕೀಯ ವೈಷಮ್ಯ ದಿನೇ ದಿನೇ ತಾರಕಕ್ಕೇರುತ್ತಿದೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.
ಕನ್ನಡಪ್ರಭ ವಾರ್ತೆ ಭಾರತೀನಗರ
ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅಭಿಮಾನಿಗಳು ಮಂಡ್ಯ ರಸ್ತೆ, ಕುರಿಕೆಂಪನದೊಡ್ಡಿ ಗೇಟ್ ಬಳಿ ಅಳವಡಿಸಿದ್ದ ತಮ್ಮಣ್ಣರ ಭಾವಚಿತ್ರವುಳ್ಳ ನಾಮಫಲಕವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.ನಾಮಫಲಕದಲ್ಲಿ ದೇವರಹಳ್ಳಿ, ಕುರಿಕೆಂಪನದೊಡ್ಡಿ, ಶ್ರೀಸಣ್ಣಕ್ಕಿರಾಯಸ್ವಾಮಿ ದೇವಸ್ಥಾನಕ್ಕೆ ಮಾರ್ಗವಿದೆ ಎಂದು ನಮೂದಿಸಿ ಮಾಜಿ ಸಚಿವ ತಮ್ಮಣ್ಣರ ಭಾವಚಿತ್ರ ಅಳವಡಿಸಿ ಇಟ್ಟಿಗೆ ಮತ್ತು ಸೀಮೆಂಟ್‌ನಿಂದ ಕಟ್ಟಡವನ್ನು ಕಟ್ಟಿ, ಅದಕ್ಕೆ ಕಬ್ಬಿಣದ ರಾಡುಗಳನ್ನು ನೆಟ್ಟು ಗ್ರೈನೇಟ್ ಕಲ್ಲಿನಿಂದ ಲಕ್ಷಾಂತರ ರು. ಖರ್ಚುಮಾಡಿ ನಾಮಫಲಕವನ್ನು ಅಳವಡಿಸಲಾಗಿತ್ತು.
ಆದರೆ, ಇದನ್ನು ಕೆಲವರು ರಾಜಕೀಯವಾಗಿ ತೆಗೆದುಕೊಂಡು ಕಿಡಿಗೇಡಿಗಳು ಒಡೆದು ಪುಡಿಪುಡಿ ಮಾಡಿದ್ದು, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ದೂರು ನೀಡಿ ಒತ್ತಾಯಿಸಿದ್ದಾರೆ.ಡಿ.ಸಿ.ತಮ್ಮಣ್ಣ ಮತ್ತು ಮಧು ಜಿ.ಮಾದೇಗೌಡರ 20 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಕೃತ್ಯಗಳು ಎಂದೂ ನಡೆದಿರಲಿಲ್ಲ. ಆದರೆ, ಮದ್ದೂರು ಕ್ಷೇತ್ರದಲ್ಲಿ ರಾಜಕೀಯ ವೈಷಮ್ಯ ದಿನೇ ದಿನೇ ತಾರಕಕ್ಕೇರುತ್ತಿದೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.
ಈ ಹಿಂದೆ ಮದ್ದೂರು ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಭಿಮಾನಿಗಳು ಮಧು ಜಿ. ಮಾದೇಗೌಡ ಅವರ ಭಾವಚಿತ್ರವನ್ನು ಹಾಕಿಕೊಂಡು ಚಲುವರಾಯಸ್ವಾಮಿ ಅವರಿಗೆ ಸ್ವಾಗತವನ್ನು ಕೋರಿದ್ದರು. ಆಗಲೂ ಕಿಡಿಗೇಡಿಗಳು ಬ್ಯಾನರ್ ಹರಿದು ಹಾಕಿದ್ದರು. ಈಗ ಅಭಿಮಾನಿಗಳು ಡಿ.ಸಿ.ತಮ್ಮಣ್ಣ ಅವರ ಭಾವಚಿತ್ರದೊಂದಿಗೆ ಅಳವಡಿಸಿದ್ದ ನಾಮಫಲಕ ಧ್ವಂಸಗೊಳಿಸಿರುವುದು ಎಷ್ಟು ಸರಿ ಎಂದು ಅಭಿಮಾನಿಗಳು, ಸಾರ್ವಜನಿಕರು ಪ್ರಶ್ನಿಸಿದ್ದಾರೆ.ನಾಮಫಲಕವನ್ನು ಒಡೆದು ಹಾಕಿರುವ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ಅಂತಹವರ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಇನ್ಸ್ ಪೆಕ್ಟರ್ ಆನಂದ್ ತಿಳಿಸಿದ್ದಾರೆ.