ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಶಿರಾ ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ರಾಜಾ ಕಸ್ತೂರಿ ರಂಗಪ್ಪ ನಾಯಕನ ಹೆಸರನ್ನು ನಾಮಕರಣ ಮಾಡಬೇಕೆಂದು ಶಿರಾ ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಬಂಡೇರಾಮಕೃಷ್ಣ ಒತ್ತಾಯಿಸಿದರು. ಅವರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ೨೦೧೪ರಲ್ಲಿ ಶಿರಾ ನಗರಸಭೆಯಲ್ಲಿ ಈ ವಿಚಾರದಲ್ಲಿ ಅನುಮೋದನೆಯಾಗಿದೆ. ಆದ್ದರಿಂದ ಶಾಸಕ ಟಿ.ಬಿ.ಜಯಚಂದ್ರ ನವೀಕರಣಗೊಂಡಿರುವ ಖಾಸಗಿ ಬಸ್ ನಿಲ್ದಾಣವನ್ನು 15ರಂದು ಉದ್ಘಾಟಿಸಲಿದ್ದು, ಇದೇ ಸಂದರ್ಭದಲ್ಲಿ ರಾಜಾ ಕಸ್ತೂರಿ ರಂಗಪ್ಪ ನಾಯಕ ಬಸ್ ನಿಲ್ದಾಣ ಎಂದು ನಾಮಫಲಕ ಹಾಕಬೇಕು ಎಂದರು. ದಲಿತ ಮುಖಂಡ ಜೆ.ಎನ್.ರಾಜಸಿಂಹ ಮಾತನಾಡಿ ಶಿರಾ ತಾಲೂಕು ಐತಿಹಾಸಿಕ ನಗರವಾಗಿದ್ದು, ಇದಕ್ಕೆ ಕಾರಣ ಶಿರಾ ನಗರದಲ್ಲಿರುವ ಶ್ರೀ ರಾಜಾ ಕಸ್ತೂರಿ ರಂಗಪ್ಪನಾಯಕನ ಕೋಟೆ. ಇಲ್ಲಿ ರಾಜರು ಆಳ್ವಿಕೆ ನಡೆಸಿ ನಗರವನ್ನು ಕಟ್ಟುವ ಕೆಲಸ ಮಾಡಿದ್ದಾರೆ. ಇಂತಹ ಮಹಾನ್ ನಾಯಕರ ಹೆಸರನ್ನು ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ನಾಮಕರಣ ಮಾಡಬೇಕು. ಕೆಲವರು ಮಾಜಿ ಶಾಸಕರಾದ ಪಿ.ಎಂ.ರಂಗನಾಥಪ್ಪ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಒತ್ತಾಯಿಸುತ್ತಿದ್ದು, ಪಿ.ಎಂ.ರಂಗನಾಥಪ್ಪ ಅವರ ಬಗ್ಗೆ ನಮಗೂ ಗೌರವ ಇದೆ. ಆದರೆ ಅವರ ಹೆಸರನ್ನು ಬೇರೆ ಯಾವುದಕ್ಕಾದರೂ ನಾಮಕರಣ ಮಾಡಿ ಖಾಸಗಿ ಬಸ್ ನಿಲ್ದಾಣಕ್ಕೆ ಶ್ರೀ ರಾಜಾ ಕಸ್ತೂರಿ ರಂಗಪ್ಪ ನಾಯಕನ ಹೆಸರನ್ನು ನಾಮಕರಣ ಮಾಡಿ ಎಂದರು. ಈ ಸಂದರ್ಭದಲ್ಲಿ ವಾಲ್ಮೀಕಿ ಮುಖಂಡರಾದ ಎಸ್.ರಂಗರಾಜು, ಧರಣಿ ಕುಮಾರ್, ಗಂಗಾಧರ್, ಜನಾರ್ಧನ್, ಭಾನು, ರಾಮಲಿಂಗಪ್ಪ, ವಿಜಯ್, ಶಂಕರ್, ಬಲರಾಮ್, ಓಂಕಾರ್, ರಕ್ಷಿತ್, ಮಾರುತಿ ಸೇರಿದಂತೆ ಹಲವರು ಹಾಜರಿದ್ದರು.