ನಾಡಿಗಾಗಿ ಶ್ರಮಿಸಿದ, ಪ್ರಾಣ ತ್ಯಾಗ ಮಾಡಿದವರನ್ನು ನೆನಪಿಸುವುದು ನಮ್ಮೆಲ್ಲರ ಕರ್ತವ್ಯ. ಅಂತಹ ಮಹನೀಯರ ಹೆಸರನ್ನು ರಾಜ್ಯದ ಐದು ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡಲು ಹೋರಾಟ ಮಾಡುತ್ತಿರುವುದು ಒಳ್ಳೆಯ ಕಾರ್ಯ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಹುಬ್ಬಳ್ಳಿ: ನಾಡಿಗಾಗಿ ಶ್ರಮಿಸಿದ, ಪ್ರಾಣ ತ್ಯಾಗ ಮಾಡಿದವರನ್ನು ನೆನಪಿಸುವುದು ನಮ್ಮೆಲ್ಲರ ಕರ್ತವ್ಯ. ಅಂತಹ ಮಹನೀಯರ ಹೆಸರನ್ನು ರಾಜ್ಯದ ಐದು ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡಲು ಹೋರಾಟ ಮಾಡುತ್ತಿರುವುದು ಒಳ್ಳೆಯ ಕಾರ್ಯ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಅವರು ಸೋಮವಾರ ಸಂಜೆ ನಗರದ ಖಾಸಗಿ ಹೊಟೇಲ್‌ನಲ್ಲಿ ಕನ್ನಡದ ನಾಮಕರಣ ಚಳವಳಿ ಸಮಿತಿಯಿಂದ ರಾಜ್ಯದ ಐದು ವಿಮಾನ ನಿಲ್ದಾಣಗಳಿಗೆ ಕನ್ನಡದ ಮಹನೀಯರ ಹೆಸರು ನಾಮಕರಣಕ್ಕೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಿದ್ಧತಾ ಸಭೆ ಹಾಗೂ ಸಮಿತಿಯ ರಾಜ್ಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇದೊಂದು ಅದ್ಭುತವಾದ ಹೋರಾಟವಾಗಿದೆ. ಮುಂದಿನ ದಿನಗಳಲ್ಲಿ ಇಡೀ ಚಿತ್ರರಂಗವನ್ನು ಹುಬ್ಬಳ್ಳಿಗೆ ಕರೆಸಿ ಹೋರಾಟ ಮಾಡಲು ಉದ್ದೇಶಿಸಲಾಗಿದೆ. ಇದಕ್ಕೆ ಸದಾ ನನ್ನ ಬೆಂಬಲವಿದೆ. ಹುಬ್ಬಳ್ಳಿಯನ್ನು ಕೇಂದ್ರದ ಶಕ್ತಿ ಕೇಂದ್ರ ಎಂದು ಹೇಳಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಪಕ್ಕದಲ್ಲಿ ಕೂರುವವರು ಹುಬ್ಬಳ್ಳಿಯವರೆ ಇದ್ದಾರೆ. ಹೀಗಿದ್ಯಾಗೂ ನೀವು ಹೋರಾಟದ ಹಾದಿ ಹಿಡಿದಿರುವುದು ಬೇಸರ ತರಿಸಿದೆ. ನೀವು ಹೋರಾಟದ ಹಾದಿ ಮೂಲಕ ಸರ್ಕಾರಗಳನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದೀರಿ. ಈ ಹೋರಾಟ ಯಶಸ್ವಿಯಾಗಲಿ. ಅದೇ ರೀತಿ ಮೇ 30ಕ್ಕೆ ಹಮ್ಮಿಕೊಂಡಿರುವ ಬೃಹತ್ ಹೋರಾಟ ಯಶ ಕಾಣಲಿ ಎಂದರು.

ಇದೇ ಸಂದರ್ಭದಲ್ಲಿ ಸಮಿತಿಯ ರಾಜ್ಯ ಯುವ ಘಟಕದ ಅಧ್ಯಕ್ಷರಾಗಿ ಕೆಜಿಪಿ ಫೌಂಡೇಶನ್‌ ಅಧ್ಯಕ್ಷ ಶ್ರೀಗಂಧ ಶೇಟ್, ಕಾರ್ಯದರ್ಶಿಯಾಗಿ ಅರ್ಜುನ ಪಾಟೀಲ ಸೇರಿದಂತೆ ವಿವಿಧ ತಾಲೂಕು, ಕ್ಷೇತ್ರಗಳ ಅಧ್ಯಕ್ಷ, ಪದಾಧಿಕಾರಿಗಳನ್ನು ನೇಮಕ ಮಾಡಿ ಅವರಿಗೆ ಪ್ರಮಾಣ ಪತ್ರ ನೀಡಲಾಯಿತು.

ಮೇ 30ಕ್ಕೆ ಪ್ರತಿಭಟನಾ ಮೆರವಣಿಗೆ:

ಕನ್ನಡದ ನಾಮಕರಣ ಚಳವಳಿ ಸಮಿತಿ ಸಂಚಾಲಕ ಶಿವಾನಂದ ಮುತ್ತಣ್ಣವರ ಪ್ರಾಸ್ತಾವಿಕ ಮಾತನಾಡಿ, ಮೇ 30ರಂದು ಮೂರುಸಾವಿರ ಮಠದಿಂದ 3ನೇ ಬಾರಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಚಿತ್ರರಂಗದ ಗಣ್ಯರು, ನಟರು ಪಾಲ್ಗೊಳ್ಳಲಿದ್ದಾರೆ. ಒಂದು ಲಕ್ಷ ಜನ ಭಾಗಿಯಾಗಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಇಮ್ರಾನ ಯಲಿಗಾರ, ಅನಿಲಕುಮಾರ ಪಾಟೀಲ, ಚಂದ್ರಶೇಖರ ಜುಟ್ಟಲ, ಅಡಿವೆಪ್ಪ ಶಿವಳ್ಳಿ, ಪ್ರೇಮನಾಥ ಚಿಕ್ಕತುಂಬಳ, ಮಹೇಶ ದಾಬಡೆ, ರಾಜು ಜೋಸೆಫ್‌, ಮೋಹನ ಹಿರೇಮನಿ, ವಿಜಯಕುಮಾರ ಅಪ್ಪಾಜಿ ಸೇರಿದಂತೆ ಹಲವರಿದ್ದರು.